ADVERTISEMENT

ರಾಜ್ಯ, ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನದಿಂದ ಕಲ್ಲಿದ್ದಲು ಕೊರತೆ: ಕಾಂಗ್ರೆಸ್

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 12 ಅಕ್ಟೋಬರ್ 2021, 9:57 IST
Last Updated 12 ಅಕ್ಟೋಬರ್ 2021, 9:57 IST
   

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಕಲ್ಲಿದ್ದಲು ಕೊರತೆ ಹಾಗೂ ವಿದ್ಯುತ್ ಕಡಿತದ ವಿಚಾರವಾಗಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಕಿಡಿ ಕಾರಿದೆ.

#ಕತ್ತಲಲ್ಲಿಕರ್ನಾಟಕ ಟ್ಯಾಗ್‌ ಬಳಸಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಸದ್ಯ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿದೆ.

ʼಬೇಜವಾಬ್ದಾರಿ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಕತ್ತಲೆ ಆವರಿಸಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಕರ್ನಾಟಕದವರೇ ಆಗಿದ್ದರೂ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಉಂಟಾಗಿದ್ದು ವಿಪರ್ಯಾಸ. ನಾಯಕರು ಹೇಳುವ 'ಡಬಲ್ ಇಂಜಿನ್ ಗ್ರೋಥ್' ಎಂಬ ಮಾತುಗಳ ಡೋಂಗಿತನಕ್ಕೆ ಮತ್ತೊಂದು ಉದಾಹರಣೆ ಇದುʼ ಎಂದು ಹೇಳಿದೆ.

ADVERTISEMENT

ಮುಂದುವರಿದು, ಇಂಧನ ತೈಲಗಳ ಬೆಲೆ ಏರಿಕೆಯಾದಾಗ ರಾಜ್ಯ ಬಿಜೆಪಿ ನಾಯಕರು ಎಲೆಕ್ಟ್ರಿಕ್ ವಾಹನ ಬಳಸಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದರು. ರಾಜ್ಯ ಬಿಜೆಪಿ ನಾಯಕರಿಗೆ ವಿದ್ಯುತ್ ಪುಕ್ಕಟೆಯಾಗಿ ದೊರಕುತ್ತದೆ ಎಂಬ ಕಲ್ಪನೆ ಇರಬಹುದೇನೋ! ಇಂದು ಅದೇ ಮೂರ್ಖ ಸಲಹೆಗಾರರು ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿದ್ದಾರೆ ಎಂದು ಕಿಡಿಕಾರಿದೆ.

ಮತ್ತೊಂದು ಟ್ವೀಟ್‌ನಲ್ಲಿ, ರಾಜ್ಯದಲ್ಲಿ ಸೃಷ್ಟಿಯಾದ ಕಲ್ಲಿದ್ದಲು ಹಾಗೂ ವಿದ್ಯುತ್ ಬಿಕ್ಕಟ್ಟಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನವೇ ಕಾರಣ. ಕಲ್ಲಿದ್ದಲು ಕೊರತೆ ತೀವ್ರಗೊಳ್ಳುವವರೆಗೂ ಕಣ್ಮುಚ್ಚಿ ಕುಳಿತಿದ್ದೇಕೆ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಇಲ್ಲವೇ? ಬಿಕ್ಕಟ್ಟು ಎದುರಿಸಲು ಸರ್ಕಾರದ ಕಾರ್ಯಸೂಚಿ ಏನು? ಎಂದು ಪ್ರಶ್ನಿಸಿದೆ.

ʼವಾಸ್ತವವನ್ನು ಮರೆಮಾಚಿ ದೇಶಕ್ಕೆ ಸುಳ್ಳು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿದೆ. ಹಿಂದೆ ಆಕ್ಸಿಜನ್ ಕೊರತೆ ಇದ್ದಾಗಲೂ ʼಆಕ್ಸಿಜನ್ ಕೊರತೆಯೇ ಇಲ್ಲʼ ಎಂದು ಸುಳ್ಳುಗಳ ಮೂಲಕ ದುರಂತಗಳಿಗೆ ಕಾರಣರಾದರು. ಈಗ ʼಕಲ್ಲಿದ್ದಲು ಕೊರತೆಯೇ ಇಲ್ಲʼ ಎಂದು ಸುಳ್ಳು ಹೇಳುತ್ತಲೇ ರಾಜ್ಯವನ್ನ ಕತ್ತಲೆಗೆ ತಳ್ಳುತ್ತಿದೆ ಬಿಜೆಪಿʼ ಎಂದು ಆರೋಪಿಸಿದೆ.

ʼಲಾಕ್‌ಡೌನ್ ನಂತರ ದೇಶದ ಆರ್ಥಿಕ ಪುನಶ್ಚೇತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಯಾವ ಯೋಜನೆಯನ್ನೂ ರೂಪಿಸಲಿಲ್ಲ. ಇಂಧನ ತೈಲಗಳ ಬೆಲೆ ಏರಿಕೆ, ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಆರ್ಥಿಕತೆಯ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಕರ್ನಾಟಕ ಬಿಜೆಪಿಯ ಅಸಾಮರ್ಥ್ಯಕ್ಕೆ ಜನತೆ ಬೆಲೆ ತೆರಬೇಕಾಗಿರುವುದು ದುರಂತʼ ಎಂದೂ ಆಕ್ರೋಶ ವ್ಯಕ್ತಪಡಿಸಿದೆ.

ಸಾರಾಂಶ

ರಾಜ್ಯದಲ್ಲಿ ಎದುರಾಗಿರುವ ಕಲ್ಲಿದ್ದಲು ಕೊರತೆ ಹಾಗೂ ವಿದ್ಯುತ್ ಕಡಿತದ ವಿಚಾರವಾಗಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಕಿಡಿ ಕಾರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.