ಮಡಿಕೇರಿ: ‘ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ವಿರೋಧಿಸುವ ಜನಪ್ರತಿನಿಧಿಗಳನ್ನು ಮುಂದಿನ ಚುನಾವಣೆಗಳಲ್ಲಿ ಸೋಲಿಸಿ ಮನೆಗೆ ಕಳುಹಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಇಲ್ಲಿ ಕರೆ ನಡೆದರು.
ನಗರದಲ್ಲಿ ಗುರುವಾರ ನಡೆದ ‘ತುಳು – ಕೊಡವ ಅಳಿವು ಉಳಿವು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯಾವುದೇ ಪಕ್ಷದ ಅಭ್ಯರ್ಥಿಯೇ ಇರಲಿ. ಅವರಿಗೆ ಬುದ್ಧಿ ಕಲಿಸಿ. ಮತದಾರರು ಗುಲಾಮರು ಅಲ್ಲ. ಕೇರಳದಲ್ಲಿ ಬೇಡಿಕೆ ಈಡೇರಿಸದ ಜನಪ್ರತಿನಿಧಿಗಳನ್ನು ಚುನಾವಣೆಗಳಲ್ಲಿ ಸೋಲಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರ್ಮಾನವು ಮತದಾರರ ಕೈಯಲ್ಲಿದೆ. ರಾಜಕಾರಣಿಗಳಿಗೆ ಹೆದರುವುದು ಬೇಡ’ ಎಂದ ಅವರು, ‘ಕೊಡಗು ಜಿಲ್ಲೆಗೆ ಪ್ರತ್ಯೇಕ ಸಂಸದರು ಬೇಕಿದೆ. ಪ್ರತ್ಯೇಕ ಕೆಎಸ್‌ಆರ್‌ಟಿಸಿ ಡಿಪೋ ನೀಡುವ ಕುರಿತು ಪರಿಷತ್‌ನಲ್ಲಿ ಚರ್ಚಿಸುತ್ತೇನೆ’ ಎಂದು ಹೇಳಿದರು.
ಕೊಡವ ಹಾಗೂ ತುಳು ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಸಬೇಕು ಎನ್ನುವುದು ದೀರ್ಘಕಾಲದ ಹೋರಾಟ. ಈ ಸಮುದಾಯದ ಜನರು ಭಿಕ್ಷೆ ಕೇಳುತ್ತಿಲ್ಲ. ಸಂವಿಧಾನಬದ್ಧ ಹಕ್ಕು ಕೇಳುತ್ತಿದ್ಧಾರೆ. ಕೊಡವರು ಬಂದೂಕು ಸಹ ಪೂಜಿಸುತ್ತಾರೆ. ಇಂತಹ ಸಂಸ್ಕೃತಿ ಉಳಿಯಬೇಕಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಭಾಷಾ ಚಳವಳಿಗೆ ಬೆಂಬಲ ಹಾಗೂ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.
‘ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಅದಕ್ಕೆ 75 ವರ್ಷವಾಗಿದೆ. ಅಲ್ಪಸಂಖ್ಯಾತರನ್ನು ಕಡೆಗಣಿವುದು ಅಲ್ಲ. ಕೊಡವ ಭಾಷಿಕರು ಈಗ ಅಲ್ಪಸಂಖ್ಯಾತರೇ ಆಗಿದ್ದಾರೆ. ಸಮಾಜದ ಕಡೆಯ ವ್ಯಕ್ತಿಯೂ ಅನಿಸಿಕೆ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ. ತಮ್ಮ ಮತದ ಮೌಲ್ಯವನ್ನು ತಿಳಿದುಕೊಳ್ಳಬೇಕು. ಮದ್ಯ ಪಡೆದು ಮತ ಹಾಕುವುದು ಅಲ್ಲ’ ಎಂದು ಹೇಳಿದರು.
‘ಯಾವುದೇ ಭಾಷೆಯಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಇರಲಿದೆ. ಭಾಷಾ ಅಭಿಮಾನದಲ್ಲಿ ಕೊಡವರು ಮೊದಲನೇ ಸ್ಥಾನದಲ್ಲಿದ್ದಾರೆ. ಯಾರನ್ನೋ ದ್ವೇಷಿಸಿವುದು ರಾಷ್ಟ್ರಪ್ರೇಮವಲ್ಲ. ಈ ಮಣ್ಣು, ನೀರು, ಜಲ ಹಾಗೂ ನೆಲದ ಪ್ರತಿಜೀವಿಯನ್ನೂ ಪ್ರೀತಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದಲ್ಲಿ 22 ಅಧಿಕೃತ ಭಾಷೆಗಳಿವೆ. 26 ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ಸರದಿಯಲ್ಲಿ ನಿಂತಿವೆ. ತುಳು ಹಾಗೂ ಕೊಡವ ಭಾಷೆಗೆ ಈ ಮಾನ್ಯತೆ ಸಿಗಬೇಕು. ನೀವು ಪಾವತಿಸುವ ತೆರಿಗೆ ಹಣವು ನಿಮಗೆ ಖರ್ಚಾಗಬೇಕು. ಸಂಸ್ಕೃತಕ್ಕೆ ರಾಜ್ಯವು ₹ 320 ಕೋಟಿ ನೀಡಿದರೆ, ಕೇಂದ್ರವು 640 ಕೋಟಿ ಅನುದಾನ ನೀಡಿದೆ. ಹಿಂದಿಗೆ ₹ 1,200 ಕೋಟಿ ನೀಡಲಾಗಿದೆ. ಕನ್ನಡಕ್ಕೆ ಬರೀ ₹ 3 ಕೋಟಿ ನೀಡಲಾಗಿದೆ. ಕೊಡವ ಭಾಷೆಗೆ ನೂರು ರೂಪಾಯಿ ಸಹ ನೀಡಿಲ್ಲ ಎಂದು ವಿವರಿಸಿದರು.
ಒಂದು ರೇಷನ್ ಕಾರ್ಡ್, ಒಂದೇ ದೇವರು, ಏಕ ಧರ್ಮ ಎನ್ನುತ್ತಿದ್ದಾರೆ ಕೇಂದ್ರದವರು. ಮುಂದೆ ಸಾಂಪ್ರದಾಯಿಕ ಉಡುಪು ಬದಲಿಸಿ ಎಂದು ಹೇಳುವ ಕಾಲವು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ‘ಯಾವುದೇ ಭಾಷೆ ಸಂಸ್ಕೃತಿಯ ಲಕ್ಷಣ. ಭಾಷೆಯೇ ಇಲ್ಲದಿದ್ದರೆ ಸಂಸ್ಕೃತಿಯೂ ಇರುವುದಿಲ್ಲ. ಇಲ್ಲಿ ಲಿಪಿ ಮುಖ್ಯ ಅಲ್ಲ. ಭಾಷೆಯೇ ಮುಖ್ಯ. ತುಳು ಭಾಷೆಗೂ ಲಿಪಿ ಇಲ್ಲ. ಕನ್ನಡದಲ್ಲಿಯೇ ಭಾವನೆ ವ್ಯಕ್ತ ಪಡಿಸಲಾಗುತ್ತಿದೆ. ತುಳು, ಕನ್ನಡ ಹಾಗೂ ಕೊಡವ ಭಾಷೆಗೆ ಸಾಮ್ಯತೆ ಇದೆ’ ಎಂದು ಹೇಳಿದರು.
ಕೊಡವ ಹಾಗೂ ತುಳು ಭಾಷೆಗೆ ಮಾನ್ಯತೆ ಸಿಗಬೇಕು. ಸಂಸ್ಕೃತಿ ಎನ್ನುವುದು ವೇಷ ಆಗಬಾರದು. ಕೊಡವ ಸಾಹಿತ್ಯ ಕ್ಷೇತ್ರವು ವಿಸ್ತಾರಗೊಳ್ಳಬೇಕು ಎಂದು ಮನವಿ ಮಾಡಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಮಾತನಾಡಿ, ‘ಕೊಡವ ಭಾಷೆಗೆ ಮಾನ್ಯತೆ ಕುರಿತು ಸಂಸತ್‌ನಲ್ಲಿ ಯಾರೂ ಪ್ರಸ್ತಾಪ ಮಾಡಿರಲಿಲ್ಲ. ಹರಿಪ್ರಸಾದ್ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದರು. ಕೆಲವು ರಾಜಕಾರಣಗಳಿಗೆ ತಮ್ಮ ರಾಜಕೀಯ ಭವಿಷ್ಯ ಮುಖ್ಯವಾಗಿರುತ್ತದೆ. ಆದರೆ, ಹರಿಪ್ರಸಾದ್ ಕೊಡವ ಹಾಗೂ ತುಳು ಭಾಷೆಗೆ ಮಾನ್ಯತೆ ಕೊಡಿಸಲು ಹೋರಾಟ ನಡೆಸುತ್ತಿದ್ದಾರೆ’ ಎಂದು ಹೇಳಿದರು.
ಭಾಷೆಯ ಉಳಿಯಬೇಕು. ಮಾನ್ಯತೆ ನೀಡುವುದು ಭಿಕ್ಷೆಯಲ್ಲ. ಸಂವಿಧಾನದಲ್ಲಿಯೇ ಅವಕಾಶವಿದೆ. ಅದನ್ನು ಜಾರಿಗೆ ತರಬೇಕು. ಏಕ ವ್ಯಕ್ತಿ ಒಂದು ಭಾಷೆ ಮಾತನಾಡಿದರೂ ಅದನ್ನು ರಕ್ಷಣೆ ಮಾಡವಂತೆ ವಿಶ್ವ ಸಂಸ್ಥೆಯ ನಿರ್ದೇಶನವಿದೆ. ಕೊಡವ ಅಕಾಡೆಮಿ ಇರುವುದು ನಾಟಕ ಆಡಿಸುವುದಕ್ಕೆ ಅಲ್ಲ. ಅದು ಭಾಷೆಯನ್ನು ಉಳಿಸಬೇಕಿದೆ. ರಾಜಕಾರಣಿಗಳಿಗೆ ವೇದಿಕೆ ಕಲ್ಪಿಸುವುದು ಅಕಾಡೆಮಿಯ ಕೆಲಸವಾಗಿದೆ. ಅಕಾಡೆಮಿಗೆ ಸಾಕಷ್ಟು ಅನುದಾನವೂ ಬರುತ್ತದೆ. ದಾಖಲೀಕರಣ ಮಾಡಲಿ ಎಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಮಾತನಾಡಿ, ಕೊಡಗು ಜಿಲ್ಲೆಗೆ ಪ್ರತ್ಯೇಕ ಸಂಸದರು ಬೇಕಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲಬಾರದು. 8ನೇ ಪರಿಚ್ಛೇದಕ್ಕೆ ಸೇರಬೇಕಿದೆ. ರೈತರು ಹೋರಾಟ ನಡೆಸಿದಂತೆಯೇ ನಿರಂತರ ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.
ಸಂಪಾದಕ ಆರ್. ಜಯಕುಮಾರ್ ಮಾತನಾಡಿ, 'ಹರಿಪ್ರಸಾದ್ ಅವರು ರಾಜಕೀಯಕ್ಕಿಂತ ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಮಾತನಾಡುತ್ತಾರೆ. ಹರಿಪ್ರಸಾದ್ ಅವರು ಸಂಸತ್‌ನಲ್ಲಿ ಪ್ರಸ್ತಾಪಿಸಿದ ಎಲ್ಲ ವಿಚಾರಗಳ ಕುರಿತು ಹಲವು ಕೃತಿಗಳು ಬರಲಿವೆ. ದೆಹಲಿಯಿಂದಲೇ ಸಂಸ್ಕೃತಿ ನಾಶ ಪಡಿಸುವ ಕೆಲಸ ನಡೆಯುತ್ತಿದೆ. ಇದು ಗುಡ್ಡಗಾಡು ಪ್ರದೇಶವಾಗಿದ್ದು, ಪ್ರತ್ಯೇಕ ಸಂಸತ್ ಸ್ಥಾನ ಆಗಬೇಕಿದೆ ಎಂದು ಆಗ್ರಹಿಸಿದರು.
ಮಡಿಕೇರಿ: ‘ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ವಿರೋಧಿಸುವ ಜನಪ್ರತಿನಿಧಿಗಳನ್ನು ಮುಂದಿನ ಚುನಾವಣೆಗಳಲ್ಲಿ ಸೋಲಿಸಿ ಮನೆಗೆ ಕಳುಹಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಇಲ್ಲಿ ಕರೆ ನಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.