ADVERTISEMENT

ಹಿಂಸೆಗೆ ಪ್ರಚೋದಿಸಿದ ಸಚಿವ ನಾಗೇಶ್: ಬರಗೂರು ರಾಮಚಂದ್ರಪ್ಪ ಆಕ್ಷೇಪ

ಪಠ್ಯ ಪುಸ್ತಕಗಳ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 3:02 IST
Last Updated 10 ಅಕ್ಟೋಬರ್ 2021, 3:02 IST
ಬರಗೂರು ರಾಮಚಂದ್ರಪ್ಪ ಮತ್ತು ಬಿ.ಸಿ. ನಾಗೇಶ್‌
ಬರಗೂರು ರಾಮಚಂದ್ರಪ್ಪ ಮತ್ತು ಬಿ.ಸಿ. ನಾಗೇಶ್‌    

ಬೆಂಗಳೂರು: ‘ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್‌ ನೀಡಿರುವ ಹೇಳಿಕೆ ಹಿಂಸೆಗೆ ಪ್ರಚೋದನೆ ನೀಡುವುದಾಗಿದೆ. ಈ ಹೇಳಿಕೆಯನ್ನು ಅವರು ವಾಪಸ್‌ ಪಡೆಯಬೇಕು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.‌

‘ಪ‍ಠ್ಯಪುಸ್ತಕಗಳಲ್ಲಿನ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ ಸಂಬಂಧಿಸಿದವರ ಮೇಲೆ ಹಲ್ಲೆ ಮಾಡುತ್ತಿದ್ದರು ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇದ್ದರೆ ಸಚಿವರು ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಕೆಲವು ಸುಳ್ಳುಗಳನ್ನು ಹಬ್ಬಿಸುತ್ತ ಬಂದವರ ಸಾಲಿಗೆ ಸಚಿವರೂ ಸೇರಿಕೊಂಡಿದ್ದು ವಿಷಾದನೀಯ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ‘ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಲ್ಲ ಎಂದು ಎಲ್ಲ ಪಕ್ಷಗಳ ಸರ್ಕಾರಕ್ಕೂ ಹೇಳುತ್ತ ಬಂದಿದ್ದು, ಈಗಲೂ ಪಕ್ಷ ಪೂರ್ವಾಗ್ರಹವನ್ನು ವಿರೋಧಿಸುತ್ತೇನೆ. ಸುಳ್ಳು ಸುದ್ದಿಗೆ ಸಚಿವರೇ ಶಾಮೀಲಾಗುವುದನ್ನೇ ವಿರೋಧಿಸುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಸಚಿವರು ಹೇಳಿದಂತೆ ಕುವೆಂಪು ಅವರ ರಚನೆಯನ್ನು ಕೈಬಿಟ್ಟಿಲ್ಲ. ಏಳನೇ ತರಗತಿಯ ಪಠ್ಯದಲ್ಲಿ ದೇಶಭಕ್ತಿಗೆ ಬದ್ಧವಾದ ಕುವೆಂಪು ಅವರ ‘ಭರತ ಭೂಮಿ ನಮ್ಮ ತಾಯಿ’ ಪದ್ಯವನ್ನು ಸೇರಿಸಲಾಗಿದೆ. ಪ್ರೌಢಶಾಲೆ ಹಂತದಲ್ಲೂ ಒಂದು ರಚನೆ ಇದೆ. ಕನ್ನಡ ಪಠ್ಯಗಳ ರಕ್ಷಾ ಪುಟದ ಒಳಬದಿಯಲ್ಲಿ ನಾಡಗೀತೆಯನ್ನು ಕೊಡಲಾಗಿದೆ. ಇನ್ನು ಕೆಲವರು ಅಪಪ್ರಚಾರ ಮಾಡಿದಂತೆ ಕೆಂಪೇಗೌಡರ ವಿವರಗಳನ್ನು ಕೈಬಿಟ್ಟಿಲ್ಲ. ಏಳನೇ ತರಗತಿ ಸಮಾಜ ವಿಜ್ಞಾನದಲ್ಲಿ ಕೊಡಲಾಗಿದೆ. ಹಿಂದೆ ವಿವೇಕಾನಂದರ ಕುರಿತು ಪಾಠ ಇರಲಿಲ್ಲ. ಅದನ್ನು ಸೇರಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಪಠ್ಯ ಪುಸ್ತಕ ಪರಿಷ್ಕರಣೆಗೆ ರಚಿಸಲಾಗಿದ್ದ ನನ್ನ ಸರ್ವಾಧ್ಯಕ್ಷತೆಯ 27 ಸಮಿತಿಗಳು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲೇ ಕೆಲಸ ಮಾಡಿವೆ. ಈಗಿರುವ ಪಠ್ಯಗಳಲ್ಲಿ ತಪ್ಪುಗಳಿದ್ದರೆ ಆಯಾ ವಿಷಯ ತಜ್ಞರು ಪರಿಶೀಲಿಸಿ ಸರಿಪಡಿಸಲಿ. ಆದರೆ, ಸಕಾರಣಕ್ಕೆ ಪರಿಶೀಲಿಸುವ ಬದಲು ಕುವೆಂಪು, ಕೆಂಪೇಗೌಡರು, ವಾಲ್ಮೀಕಿ ಮುಂತಾದವರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿ ಸುಳ್ಳಿನ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ’ ಎಂದು ಬರಗೂರು ಆಕ್ಷೇಪಿಸಿದ್ದಾರೆ.

ನಾಗೇಶ್ ಕ್ಷಮೆ ಕೇಳಲಿ: ಸಂಘಟನೆಗಳ ಒತ್ತಾಯ
ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಹಿಂಸೆ ಪ್ರಚೋದಿಸುವ ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆಯಾಚಿಸಬೇಕು ಎಂದು ಸಾಹಿತಿಗಳು, ದಲಿತ ಸಂಘಟನೆಗಳು, ವಿದ್ಯಾರ್ಥಿ ಯುವ ಜನ ಸಂಘಟನೆಗಳು, ರೈತ–ಕಾರ್ಮಿಕ ಸಂಘಟನೆಗಳು, ಸಮುದಾಯ ಕರ್ನಾಟಕ, ಬಂಡಾಯ ಸಾಹಿತ್ಯ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಪಠ್ಯ ಪುಸ್ತಕಗಳಲ್ಲಿ ದೋಷಗಳಿದ್ದರೆ ತಜ್ಞರು ಪರಿಶೀಲಿಸಲಿ. ಆದರೆ, ಪೂರ್ವಾಗ್ರಹದಿಂದ ಅಪಪ್ರಚಾರ ಮಾಡುತ್ತಿರುವ ಮಿಥ್ಯಾರೋಪಗಳಿಗೆ ವಿರೋಧವಿದೆ ಎಂದು ಜಿ. ರಾಮಕೃಷ್ಣ, ಕೆ. ಮರುಳಸಿದ್ದಪ್ಪ, ಎಲ್‌. ಹನುಮಂತಯ್ಯ, ಟಿ.ಆರ್‌. ಚಂದ್ರಶೇಖರ್‌, ಎಸ್‌.ಜಿ. ಸಿದ್ದರಾಮಯ್ಯ, ರಹಮತ್ ತರೀಕೆರೆ, ಲಕ್ಷ್ಮೀನಾರಾಯಣ ನಾಗವಾರ, ಇಂದೂಧರ ಹೊನ್ನಾಪುರ, ಸಿದ್ದನಗೌಡ ಪಾಟೀಲ, ಕೆ.ಎಸ್‌. ವಿಮಲಾ, ಜಿ.ಎನ್‌. ನಾಗರಾಜ್‌, ಬಂಜಗೆರೆ ಜಯಪ್ರಕಾಶ್‌, ಭಾನು ಮುಸ್ತಾಕ್‌, ಕೋಡಿಹಳ್ಳಿ ಚಂದ್ರಶೇಖರ್, ಬಿ. ರಾಜಶೇಖರಮೂರ್ತಿ ಸೇರಿದಂತೆ 30 ಜನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರಾಂಶ

‘ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್‌ ನೀಡಿರುವ ಹೇಳಿಕೆ ಹಿಂಸೆಗೆ ಪ್ರಚೋದನೆ ನೀಡುವುದಾಗಿದೆ. ಈ ಹೇಳಿಕೆಯನ್ನು ಅವರು ವಾಪಸ್‌ ಪಡೆಯಬೇಕು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.