ADVERTISEMENT

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಗೆ ಕಾನೂನು ಗೆಲುವು

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 16:37 IST
Last Updated 19 ಜನವರಿ 2022, 16:37 IST
ಅಗ್ರಹಾರ ಕೃಷ್ಣಮೂರ್ತಿ
ಅಗ್ರಹಾರ ಕೃಷ್ಣಮೂರ್ತಿ   

ಬೆಂಗಳೂರು: ’ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಕಾಡೆಮಿ ಹಣವನ್ನು ದುಂದುವೆಚ್ಚ ಮಾಡಿದ್ದು, ಇದರ ಬಾಬ್ತು ₹ 30 ಲಕ್ಷ ನಷ್ಟ ಭರ್ತಿಯಾಗಿ ಅವರಿಂದ ಪಡೆಯಬೇಕು’ ಎಂಬ ಅಕಾಡೆಮಿಯ ಶಿಸ್ತು ಸಮಿತಿ ಆದೇಶವನ್ನು ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಇದೀಗ ರಾಜ್ಯ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವೂ ಎತ್ತಿಹಿಡಿದಿದೆ. ಈ ಮೂಲಕ ಇಂದಿನ ಆದೇಶ 67ರ ಪ್ರಾಯದ ಅಗ್ರಹಾರ ಕೃಷ್ಣಮೂರ್ತಿಯವರು ತಮ್ಮ ಕಾನೂನು ಸಮರದಲ್ಲಿ ಜಯ ಸಾಧಿಸಿ ನಿರಮ್ಮಳರಾಗುವಂತೆ ಮಾಡಿದೆ.

ಈ ಮೊದಲು ಶಿಸ್ತು ಸಮಿತಿ ಅದೇಶ ಪ್ರಶ್ನಿಸಿ ಅಗ್ರಹಾರ ಕೃಷ್ಣಮೂರ್ತಿವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರರು ಇದೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್‌.ಸುಜಾತ ಹಾಗೂ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ವಿಭಾಗೀಯ ನ್ಯಾಯಪೀಠವು, ಬುಧವಾರ ಪ್ರಕಟಿಸಿತು. ಕಂಬಾರರ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು.

ADVERTISEMENT

ಏಕಸದಸ್ಯ ನ್ಯಾಯಪೀಠ ಏನು ಹೇಳಿ‌ತ್ತು?: ‘ಸಮಿತಿ, ತನ್ನ ಆದೇಶ ನೀಡುವ ಮುನ್ನ ನಡೆಸಿರುವ ವಿಚಾರಣಾ ಪ್ರಕ್ರಿಯೆ ಸರಿಯಿಲ್ಲ ಮತ್ತು ಬೈ–ಲಾ ಪ್ರಕಾರ, ನಿವೃತ್ತಿ ಹೊಂದಿದವರ ಮೇಲೆ ಈ ರೀತಿಯ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ’ ಎಂದು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.

ಕೃಷ್ಣಮೂರ್ತಿಯವರ ವಿರುದ್ಧದ ಆರೋಪವೇನು?: ‘ಕೃಷ್ಣಮೂರ್ತಿ ಅವರು ಅಕಾಡೆಮಿ ಕಾರ್ಯಕ್ರಮಗಳಿಗೆ ನಿಗದಿಗಿಂತಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದ್ದು ಮೇಲಿಂದ ಮೇಲೆ ಬೆಂಗಳೂರಿಗೆ ಅಧಿಕೃತ ಪ್ರವಾಸ ಕೈಗೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಲಾಗಿತ್ತು. ಈ ಕುರಿತಂತೆ ಶಿಸ್ತು ಸಮಿತಿ 2014ರ ಜೂನ್ 3ರಂದು ನಷ್ಟ ಭರ್ತಿ ಪಾವತಿಗೆ ಆದೇಶಿಸಿತ್ತು.

ಸಾರಾಂಶ

’ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಕಾಡೆಮಿ ಹಣವನ್ನು ದುಂದುವೆಚ್ಚ ಮಾಡಿದ್ದು, ಇದರ ಬಾಬ್ತು ₹ 30 ಲಕ್ಷ ನಷ್ಟ ಭರ್ತಿಯಾಗಿ ಅವರಿಂದ ಪಡೆಯಬೇಕು’ ಎಂಬ ಅಕಾಡೆಮಿಯ ಶಿಸ್ತು ಸಮಿತಿ ಆದೇಶವನ್ನು ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಇದೀಗ ರಾಜ್ಯ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವೂ ಎತ್ತಿಹಿಡಿದಿದೆ. ಈ ಮೂಲಕ ಇಂದಿನ ಆದೇಶ 67ರ ಪ್ರಾಯದ ಅಗ್ರಹಾರ ಕೃಷ್ಣಮೂರ್ತಿಯವರು ತಮ್ಮ ಕಾನೂನು ಸಮರದಲ್ಲಿ ಜಯ ಸಾಧಿಸಿ ನಿರಮ್ಮಳರಾಗುವಂತೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.