ನವದೆಹಲಿ: ಲಖಿಂಪುರ–ಖೇರಿ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಕದನ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಸಂಸದ ವರುಣ್ ಗಾಂಧಿ ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಮೇಲಿನ ಹಿಂಸೆಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಸೃಷ್ಟಿಸುವುದು ಮುಂದಿನ ತಲೆಮಾರಿಗೂ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಖಿಂಪುರ ಖೇರಿಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಬಡ ರೈತರ ಮೇಲೆ ಸ್ಥಳೀಯ ಆಡಳಿತವು ದೌರ್ಜನ್ಯ ನಡೆಸಿದ್ದು, ಕ್ರೂರ ಹತ್ಯಾಕಾಂಡ ನಡೆಸಿದೆ. ಇದಕ್ಕೆ ಧರ್ಮದ ನೆಲೆಗಟ್ಟಿನ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು.
ಇತ್ತೀಚಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಪಿಲಿಭಿತ್ ಸಂಸದರಾದ ವರುಣ್ ಗಾಂಧಿ ಅವರನ್ನು ಕೈಬಿಟ್ಟ ನಂತರ ಅವರು ಬಿಜೆಪಿ ವಿರುದ್ಧದ ಹೇಳಿಕೆಗಳತ್ತ ಒಲವು ತೋರಿದ್ದಾರೆ.
‘ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಖಲಿಸ್ತಾನಿ ಎಂದು ಕರೆಯುವುದು ಸರಿಯಲ್ಲ. ಇದು ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ರೈತರಿಗೆ ಮಾಡಿದ ಅವಮಾನವಾಗಿದೆ. ರೈತರ ಹೋರಾಟವನ್ನು ತಪ್ಪಾಗಿ ಬಿಂಬಿಸುವುದು ರಾಷ್ಟ್ರದ ಏಕತೆಗೆ ಅಪಾಯಕಾರಿಯಾಗಿದೆ’ ಎಂದು ಟ್ವೀಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
‘ಲಖಿಂಪುರ ಖೇರಿ ಹಿಂಸಾಚಾರವನ್ನು ಹಿಂದೂ ವಿರುದ್ಧದ ಸಿಖ್ ಕದನವನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಮುಂದಿನ ಪೀಳಿಗೆಗಳಿಗೆ ತಪ್ಪು ಸಂದೇಶ ರವಾನಿಸುತ್ತದೆ. ಸಣ್ಣ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಏಕತೆಗೆ ಭಂಗ ತರಬಾರದು’ ಎಂದು ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 3ರ ಲಖಿಂಪುರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದರು.
ಘಟನೆಗೆ ತಂದೆ-ಮಗ ಇಬ್ಬರೂ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಆಶಿಶ್ ಮಿಶ್ರಾ ರೈತರ ಮೇಲೆ ವಾಹನ ಹರಿಸಿದಾಗ ಸಚಿವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ. ಆದರೆ ಇದನ್ನು ಇಬ್ಬರೂ ನಿರಾಕರಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಬಗ್ಗೆ ವರುಣ್ ಗಾಂಧಿ ಆಗಾಗ್ಗೆ ಟ್ವೀಟಿಸಿ, ರೈತರಿಗೆ ಬಂಬಲ ಸೂಚಿಸಿದ್ದಾರೆ.
ನವದೆಹಲಿ: ಲಖಿಂಪುರ–ಖೇರಿ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಕದನ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಸಂಸದ ವರುಣ್ ಗಾಂಧಿ ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಮೇಲಿನ ಹಿಂಸೆಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಸೃಷ್ಟಿಸುವುದು ಮುಂದಿನ ತಲೆಮಾರಿಗೂ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.