ADVERTISEMENT

ಜಮ್ಮು–ಕಾಶ್ಮೀರ: ಟಿಆರ್‌ಎಫ್‌ ಉಗ್ರನ ಹತ್ಯೆ

ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ: ಆರೋಪ ನಿರಾಕರಿಸಿದ ಕುಟುಂಬ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 14:47 IST
Last Updated 11 ಅಕ್ಟೋಬರ್ 2021, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಈಚೆಗೆ ನಡೆದಿದ್ದ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಉಗ್ರನೊಬ್ಬನನ್ನು ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದ ಗುಂಡ್‌ಜಹಾಂಗೀರ್ ಹಳ್ಳಿಯಲ್ಲಿ ಸೋಮವಾರ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾದ ಉಗ್ರನನ್ನು ಇಮ್ತಿಯಾಜ್ ಅಹಮ್ಮದ್ ದರ್ ಎಂದು ಗುರುತಿಸಲಾಗಿದ್ದು, ಈತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮತ್ತು ಎಲ್‌ಇಟಿಯೊಂದಿಗೆ ಸಂಪರ್ಕ ಹೊಂದಿದ್ದು. ಬಂಡಿಪೋರಾದಲ್ಲಿ ಈಚೆಗೆ ನಡೆದಿದ್ದ ನಾಗರಿಕರ ಹತ್ಯೆಯಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಉಗ್ರನ ಕುಟುಂಬವು ಈ ಆರೋಪವನ್ನು ನಿರಾಕರಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪತ್ರಕರ್ತ ಸಾಜದ್ ಗುಲ್ ಅವರು, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಇಮ್ತಿಯಾಜ್ ಅಹಮ್ಮದ್ ದರ್ ಕುಟುಂಬದ ಹಲವು ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೊಗಳಲ್ಲಿ ‘ಇಮ್ತಿಯಾಜ್‌ನನ್ನು ಸೇನೆಯವರು ಮನೆಯಿಂದ ಹೊರಗೆಳೆದುಕೊಂಡು ಹೋಗಿ, ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಆರೋಪಿಸಲಾಗಿದೆ.

ADVERTISEMENT

ಇದನ್ನೂ ಓದಿ: 

ವಿಡಿಯೊ ಅಪ್‌ಲೋಡ್ ಮಾಡಿದ ಬೆನ್ನಲ್ಲೇ ಪೊಲೀಸರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಸಾಜದ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ. ‘ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ ನಂತರ ನಾನು ಪೊಲೀಸರಿಂದ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ, ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸುವಂತೆ ನನಗೆ ಬೆದರಿಕೆ ಹಾಕಲಾಗಿದೆ’ ಎಂದೂ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಉಗ್ರರೊಂದಿಗೆ ನಂಟು ಹೊಂದಿರುವ ನಾಲ್ವರು ಆರೋಪಿಗಳನ್ನು ಭಾನುವಾರ ಬಂಡಿಪೋರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

‘ಅ. 5ರಂದು ಹತ್ಯೆಗೀಡಾದ ನಾಗರಿಕರಲ್ಲಿ ಒಬ್ಬರಾದ ಕ್ಯಾಬ್ ಡ್ರೈವರ್ ಮೊಹಮ್ಮದ್ ಶಫೀ ಲೋನೆ ಅವರ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ನಾಲ್ವರು ಒಪ್ಪಿಕೊಂಡಿದ್ದಾರೆ. ಮೊಹಮ್ಮದ್ ಬಂಡಿಪೋರಾದ ಟ್ಯಾಕ್ಸಿ ನಿಲ್ದಾಣ ಸಂಘದ ಅಧ್ಯಕ್ಷರಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.‌

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ವೆರಿನಾಗ್ ಪ್ರದೇಶದ ಖಗುಂಡ್ ಗ್ರಾಮದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮತ್ತೊಬ್ಬ ಉಗ್ರನನ್ನು ಹತ್ಯೆಮಾಡಲಾಗಿದ್ದು, ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ. ಹತ್ಯೆಗೀಡಾದ ಉಗ್ರರ ಗುರುತು ತಕ್ಷಣವೇ ಪತ್ತೆಯಾಗಿಲ್ಲ.

ಕಳೆದ ವಾರ ಕಾಶ್ಮೀರ ಕಣಿವೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು ಏಳು ನಾಗರಿಕರು ಹತ್ಯೆಗೀಡಾಗಿದ್ದಾರೆ.

ಸಾರಾಂಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಈಚೆಗೆ ನಡೆದಿದ್ದ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಉಗ್ರನೊಬ್ಬನನ್ನು ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದ ಗುಂಡ್‌ಜಹಾಂಗೀರ್ ಹಳ್ಳಿಯಲ್ಲಿ ಸೋಮವಾರ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.