ADVERTISEMENT

ಜಮ್ಮು–ಕಾಶ್ಮೀರ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳಿಂದ ಮೂವರು ಉಗ್ರರ ಹತ್ಯೆ

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 12 ಅಕ್ಟೋಬರ್ 2021, 5:36 IST
Last Updated 12 ಅಕ್ಟೋಬರ್ 2021, 5:36 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ಶ್ರೀನಗರ: ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಈ ಪೈಕಿ, ಬೀದಿ ಬದಿ ವ್ಯಾಪಾರಿಯ ಹತ್ಯೆಯಲ್ಲಿ ಶಾಮೀಲಾಗಿದ್ದ ಸ್ಥಳಿಯ ಉಗ್ರನೊಬ್ಬನೂ ಸೇರಿದ್ದಾನೆ.

‘34 ರಾಷ್ಟ್ರೀಯ ರೈಫಲ್ಸ್’, ಪೊಲೀಸರು ಮತ್ತು ಸಿಆರ್‌ಪಿಎಫ್‌ ಯೋಧರು ಜತೆಯಾಗಿ ಸೋಮವಾರ ಸಂಜೆಯೇ ಕಾರ್ಯಾಚರಣೆ ಆಂರಂಭಿಸಿದ್ದರು ಎಂದು ಪೊಲೀಸರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಶೋಪಿಯಾನ್‌ನ ಟುಲ್‌ನಾರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ನಾಕಾಬಂಧಿ ಹಾಕಿದ್ದ ಭದ್ರತಾಪಡೆಗಳು, ಬಳಿಕ ಕಾರ್ಯಾಚರಣೆ ಆರಂಭಿಸಿದ್ದರು. ಬೆಳಿಗ್ಗೆ ವೇಳೆಗೆ ಗುಂಡಿನ ಚಕಮಕಿ ಆರಂಭವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

‘ಮೃತ ಉಗ್ರರ ಪೈಕಿ ಒಬ್ಬನನ್ನು ಗಂದೇರ್‌ಬಾಲ್‌ನ ಮುಖ್ತಾರ್ ಶಾ ಎಂದು ಗುರುತಿಸಲಾಗಿದೆ. ಈತ ಬೀದಿ ಬದಿ ವ್ಯಾಪಾರಿ, ಬಿಹಾರ ಮೂಲದ ವೀರೇಂದ್ರ ಪಾಸ್ವಾನ್ ಎಂಬವರ ಹತ್ಯೆ ಮಾಡಿ ಬಳಿಕ ಶೋಪಿಯಾನ್‌ಗೆ ಸ್ಥಳಾಂತರಗೊಂಡಿದ್ದ’ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇನ್ನಿಬ್ಬರು ಉಗ್ರರನ್ನು ಡ್ಯಾನಿಷ್ ಅಹ್ಮದ್ ಮತ್ತು ಯಾವಾರ್ ಅಹ್ಮದ್ ಎಂದು ಗುರುತಿಸಲಾಗಿದೆ. ಮೃತ ಉಗ್ರರು ಲಷ್ಕರ್ ಎ ತಯ್ಬಾ ಮತ್ತು ‘ದಿ ರೆಸಿಸ್ಟೆನ್ಸ್ ಫ್ರಂಟ್’ ಸಂಘಟನೆಗಳಿಗೆ ಸೇರಿದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಮ್ಮು–ಕಾಶ್ಮೀರದ ಅನಂತನಾಗ್ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಭಾನುವಾರ ತಡ ರಾತ್ರಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರರನ್ನು ಹತ್ಯೆ ಮಾಡಿದ್ದವು. ಪೂಂಚ್‌ ಜಿಲ್ಲೆಯಲ್ಲಿ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಕಿರಿಯ ನಿಯೋಜಿತ ಅಧಿಕಾರಿ (ಜೂನಿಯರ್‌ ಕಮಿಷನ್ಡ್‌ ಆಫೀಸರ್) ಸೇರಿ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.

ಸಾರಾಂಶ

ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಈ ಪೈಕಿ, ಬೀದಿ ಬದಿ ವ್ಯಾಪಾರಿಯ ಹತ್ಯೆಯಲ್ಲಿ ಶಾಮೀಲಾಗಿದ್ದ ಸ್ಥಳಿಯ ಉಗ್ರನೊಬ್ಬನೂ ಸೇರಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.