ADVERTISEMENT

ಕಂಗನಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ಪರಿಷ್ಕರಣೆ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 14:25 IST
Last Updated 21 ಜನವರಿ 2022, 14:25 IST
ಕಂಗನಾ ರನೌತ್
ಕಂಗನಾ ರನೌತ್   

ನವದೆಹಲಿ: ಬಾಲಿವುಡ್‌ ನಟಿ ಕಂಗನಾ ರನೌತ್‌ ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಪರಿಷ್ಕರಣೆಗೆ ಒಳಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ನಟಿಯು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳು ಮತ್ತು ಸಿಖ್‌ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿದ್ದವು.

ವಕೀಲ ಚರಣ್‌ಜೀತ್‌ ಸಿಂಗ್‌ ಚಾಂದರ್‌ಪಾಲ್‌ ಈ ಮನವಿಯನ್ನು ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬೇಲಾ ಎಂ.ತ್ರಿವೇದಿ ಅವರ ಪೀಠ ಅರ್ಜಿ ವಿಚಾರಣೆ ನಡೆಸಿತು. 

ADVERTISEMENT

ನಟಿಯ ಬಗ್ಗೆ ಅರ್ಜಿದಾರರ ಕಾಳಜಿಯನ್ನು ನ್ಯಾಯಲಯವು ಗೌರವಿಸುತ್ತದೆ. ಆದರೆ ಇದರಿಂದ ನಟಿಯ ಸಾಮಾಜಿಕ ಮಾಧ್ಯಮದ ಹೇಳಿಕೆಗಳಿಗೆ ಅರ್ಜಿದಾರರು ಹೆಚ್ಚು ಪ್ರಚಾರ ನೀಡಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನಟಿಯು ಸಿಖ್‌ ಸಮುದಾಯದ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ನೀಡಿರುವ ಪ್ರಕರಣಗಳನ್ನು ಸೇರಿಸುವಂತೆಯೂ ಅರ್ಜಿದಾರರು ಮನವಿ ಮಾಡಿದ್ದಾರೆ.

ನಟಿ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯದಲ್ಲಿ ಮೂರನೇ ವ್ಯಕ್ತಿಯು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. 

ನಟಿ ಕಂಗನಾ ಅವರು ಸಿಖ್‌ ಸಮುದಾಯದ ವಿರುದ್ಧ ಕೆಲವು ಉದಾತ್ತ ಹೇಳಿಕೆಗಳನ್ನೂ ನೀಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕೈಗೊಳ್ಳುವ ಕ್ರಮಗಳಲ್ಲಿ ಸಡಿಲಿಸಬೇಕು ಎಂದು ಚಾಂದರ್‌ಪಾಲ್‌ ಪ್ರತಿಪಾದಿಸಿದರು. 

ನಟಿ ಕಂಗನಾ ರನೌತ್‌ ಮಾಡುವ ಎಲ್ಲಾ ಸಾಮಾಜಿಕ ಪೋಸ್ಟ್‌ಗಳಲ್ಲಿ ಕಾನೂನು–ಸುವ್ಯವಸ್ಥೆಗೆ ಧಕ್ಕೆ ಬರುವಂತಿದ್ದರೆ ಅಂತಹವನ್ನು ಪರಿಷ್ಕರಣೆಗೆ ಒಳಪಡಿಸಿ ನಂತರ ಬಿಡುಗಡೆ ಮಾಡಲು ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

ಸಾರಾಂಶ

ಬಾಲಿವುಡ್‌ ನಟಿ ಕಂಗನಾ ರನೌತ್‌ ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಪರಿಷ್ಕರಣೆಗೆ ಒಳಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.