ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐವರು ಉಗ್ರರನ್ನು ಭದ್ರತಾ ಪಡೆಗಳು ಮಂಗಳವಾರ ಹೊಡೆದುರುಳಿಸಿವೆ.
ಕಳೆದ 24 ಗಂಟೆಗಳಲ್ಲಿ ಶೋಪಿಯಾನ್ ಸಮೀಪದ ಗ್ರಾಮಗಳಲ್ಲಿ ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಹತ್ಯೆ ಮಾಡಲಾದ ಐವರ ಪೈಕಿ ಮುಖ್ತಾರ್ ಷಾ ಎಂಬ ಉಗ್ರನು ಶ್ರೀನಗರದ ಲಾಲ್ ಬಜಾರ್ ಪ್ರದೇಶದಲ್ಲಿ ವ್ಯಾಪಾರಿಯೊಬ್ಬರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಟುಲ್ರಾನ್ ಎಂಬಲ್ಲಿ ಉಗ್ರರಿಗೆ ಶರಣಾಗಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆದರೆ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಅವರು ದಾಳಿ ನಡೆಸಿದ್ದರಿಂದ ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು. ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರ ಹತ್ಯೆ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ಯೆಯಾದ ಉಗ್ರರನ್ನು ಶೋಪಿಯಾನ್‌ನ ರೇ ಕಪ್ರೆನ್ ನಿವಾಸಿ ಡ್ಯಾನಿಶ್ ಹುಸೇನ್ ದಾರ್, ಪಹ್ಲಿಪೋರಾದ ನಿವಾಸಿ ಯವರ್ ಹುಸೇನ್ ನಾಯ್ಕೂ ಮತ್ತು ಮಧ್ಯ ಕಾಶ್ಮೀರದ ಗಂದರ್‌ಬಾಲ್‌ನ ಸಿಂದಾಲ್ ಪ್ರದೇಶದ ನಿವಾಸಿ ಮುಕ್ತಾರ್ ಅಹ್ಮದ್ ಶಾ ಎಂದು ಗುರುತಿಸಲಾಗಿದೆ.
ಈ ಮೂವರು ಉಗ್ರರೂ ಲಷ್ಕರ್‌ನ ಒಂದು ಭಾಗ ಎಂದು ಪರಿಗಣಿಸಲಾಗಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಜೊತೆ ಗುರುತಿಸಿಕೊಂಡಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ, ಹತ್ಯೆಗೀಡಾದ ಭಯೋತ್ಪಾದಕರು ಭದ್ರತಾ ಸಂಸ್ಥೆಗಳ ಮೇಲಿನ ದಾಳಿ ಮತ್ತು ನಾಗರಿಕ ದೌರ್ಜನ್ಯ ಸೇರಿದಂತೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದ ಸಂಘಟನೆಗಳ ಭಾಗವಾಗಿದ್ದರು.
‘ಶ್ರೀನಗರದ ಲಾಲ್ ಬಜಾರ್‌ನಲ್ಲಿ ಸ್ಥಳೀಯರಲ್ಲದ ವ್ಯಾಪಾರಿಗಳನ್ನು ಗುರಿಯಾಗಿಸಿ ನಡೆಸಿದ ಹತ್ಯೆಯಲ್ಲಿ ಮುಖ್ತಾರ್ ಷಾ ಭಾಗಿಯಾಗಿದ್ದ. ಹತ್ಯೆ ನಡೆಸಿ ಶೋಪಿಯಾನ್‌ಗೆ ಸ್ಥಳಾಂತರಗೊಂಡಿದ್ದ’ ಎಂದು ಹೇಳಿದ್ದಾರೆ.
ಬಿಹಾರ ಮೂಲದ ವೀರೇಂದ್ರ ಪಾಸ್ವಾನ್ ಎಂಬ ಬೀದಿಬದಿ ವ್ಯಾಪಾರಿಯನ್ನು ಅಕ್ಟೋಬರ್ 5ರಂದು ಹತ್ಯೆ ಮಾಡಲಾಗಿತ್ತು
ಔಷಧ ಅಂಗಡಿ ಮಾಲೀಕ ಮಖನ್ ಲಾಲ್ ಬಿಂದ್ರೂ ಅವರನ್ನು ಹತ್ಯೆ ಮಾಡಿದ ತಕ್ಷಣವೇ ಪಾಸ್ವಾನ್ ಹತ್ಯೆಯಾಗಿತ್ತು. ಅದೇ ದಿನ ಸ್ಥಳೀಯ ಟ್ಯಾಕ್ಸಿ ಸಂಘದ ಅಧ್ಯಕ್ಷ ಮೊಹಮ್ಮದ್ ಶಫಿ ಲೋನ್ ಅವರನ್ನು ಕೊಲ್ಲಲಾಗಿತ್ತು.
ಈ ಮಧ್ಯೆ ಫೇರಿಪೊರದಲ್ಲಿ ಮಂಗಳವಾರ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಇಲ್ಲಿ ಅಡಗಿದ್ದ ಉಗ್ರರಿಗೂ ಶರಣಾಗಲು ಸಾಕಷ್ಟು ಸಮಯ ನೀಡಲಾಯಿತು ಎಂದು ವಕ್ತಾರರು ಹೇಳಿದ್ದಾರೆ. ಆದರೆ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರಿಂದ ಎನ್‌ಕೌಂಟರ್ ಮಾಡಬೇಕಾಯಿತು. ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಶವಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ.
ಹತ್ಯೆಯಾದವರನ್ನು ರೇ ಕಪ್ರೆನ್ ನಿವಾಸಿ ಉಬೇದ್ ಅಹ್ಮದ್ ದಾರ್ ಹಾಗೂ ಬ್ರಾರಿಪೊರಾ ನಿವಾಸಿ ಖುಬೇದ್ ಅಹ್ಮದ್ ನೆಂಗ್ರೂ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸಹ ಎಲ್‌ಇಟಿ ಜೊತೆ ನಂಟು ಹೊಂದಿದ್ದು, ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ದಾಖಲೆಗಳಲ್ಲಿ ಇದೆ. ಹತ್ಯೆಯಾದ ಉಗ್ರರಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂರು ತಿಂಗಳಿಂದ ಬೀಡುಬಿಟ್ಟಿದ್ದ ಉಗ್ರರು
ಸೋಮವಾರ ಪೂಂಛ್ ಜಿಲ್ಲೆಯಲ್ಲಿ ಐವರು ಸೈನಿಕರನ್ನು ಹತ್ಯೆ ಮಾಡಿದ ಉಗ್ರರು ಈ ಪ್ರದೇಶದಲ್ಲಿ 2–3 ತಿಂಗಳಿನಿಂದ ವಾಸವಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಹೇಳಿದ್ದಾರೆ.
ಜಮ್ಮುವಿನ ಅವಳಿ ಗಡಿ ಜಿಲ್ಲೆಗಳಾದ ರಜೌರಿ ಮತ್ತು ಪೂಂಛ್ ಅನ್ನು ಸಂಪರ್ಕಿಸುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಾರಿ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಿದವು. ಮತ್ತೊಂದು ಜಾಗದಲ್ಲಿ ಶೋಧ ತಂಡಕ್ಕೆ ಉಗ್ರರು ಕಾಣಿಸಿಕೊಂಡು ಮತ್ತೆ ನಾಪತ್ತೆಯಾದರು ಎಂದು ರಜೌರಿ, ಪೂಂಚ್ ವಲಯದ ಡಿಐಜಿ ವಿವೇಕ್ ಗುಪ್ತಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ: ಸೈನಿಕರ ಹತ್ಯೆ ಖಂಡಿಸಿ ಪೂಂಛ್ ಪಟ್ಟಣದಲ್ಲಿ ಯುವಕರ ಗುಂಪೊಂದು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಪೈಕಿ ಸಿಖ್ ಸಮುದಾಯಕ್ಕೆ ಸೇರಿದ ಯುವಕರು ಹೆಚ್ಚಾಗಿದ್ದರು.
‘ಅಮಾಯಕ ನಾಗರಿಕರು ಮತ್ತು ನಮ್ಮ ಸೈನಿಕರನ್ನು ಕೊಲ್ಲುತ್ತಿರುವ ಭಯೋತ್ಪಾದಕರನ್ನು ದೇಶದೊಳಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನಕ್ಕೆ ಸರ್ಕಾರ ಪಾಠ ಕಲಿಸಬೇಕಾದ ಸಮಯ ಬಂದಿದೆ’ ಎಂದು ಕಮಲ್‌ಜೀತ್ ಸಿಂಗ್ ಎಂಬುವರು ಹೇಳಿದ್ದಾರೆ.
ಬಿಂದ್ರೋ, ಶಿಕ್ಷಕರ ಹಂತಕರ ಗುರುತು ಪತ್ತೆ
ಕಾಶ್ಮೀರಿ ಪಂಡಿತ ಉದ್ಯಮಿ ಮಖನ್ ಲಾಲ್ ಬಿಂದ್ರೂ, ಶಾಲಾ ಪ್ರಾಂಶುಪಾಲ ಸತೀಂದರ್ ಕೌರ್ ಮತ್ತು ಶಿಕ್ಷಕ ದೀಪಕ್ ಚಂದ್ ಅವರ ಹತ್ಯೆಗಳ ಹಿಂದೆ ಮಂಗಳವಾರ ಹತ್ಯೆಯಾದ ಉಗ್ರರ ಗುಂಪು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ನಾಗರಿಕರ ಹತ್ಯೆಯ ಸೂತ್ರಧಾರ ಬಸಿತ್ ಅಹ್ಮದ ದಾರ್ ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಿವಾಸಿ. 20 ವರ್ಷದ ಮೆಹ್ರಾನ್ ಶಲ್ಲಾ, ನವ ಕಡಲ್ ನಿವಾಸಿ ಯುವಕ ಮತ್ತು ಆದಿಲ್ನಾ ಎಂಬ ಮೂವರು ಭಯೋತ್ಪಾದಕರು ಈ ತಂಡದ ಭಾಗವಾಗಿದ್ದರು. ದಾರ್ ರೂಪಿಸಿದ ಯೋಜನೆಯಂತೆ ಇವರು ನಗರದಲ್ಲಿ ನಾಗರಿಕರ ಮೇಲೆ ದಾಳಿ ಎಸಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16 ಸ್ಥಳಗಳಲ್ಲಿ ಎನ್ಐಎ ದಾಳಿ
ಕಾಶ್ಮೀರದಲ್ಲಿ ತನ್ನ ದಾಳಿಗಳನ್ನು ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಮಂಗಳವಾರ ಕಣಿವೆಯ 16 ಸ್ಥಳಗಳಲ್ಲಿ ಶೋಧ ನಡೆಸಿತು. ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸೇರಿದಂತೆ ಉಗ್ರಗಾಮಿ ಸಂಘಟನೆಗಳಿಗಾಗಿ ಭೂಗತವಾಗಿ ಕೆಲಸ ಮಾಡುವವರಿಗೆ ಸಂಬಂಧಿಸಿ ಈ ದಾಳಿಗಳು ನಡೆದಿವೆ.
ಇತ್ತೀಚೆಗೆ ನಾಗರಿಕರ ಮೇಲೆ ದಾಳಿ ಮತ್ತು ಕಣಿವೆಯಲ್ಲಿನ ಇತರ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಟಿಆರ್‌ಎಫ್‌ಗೆ ಭೂಗತವಾಗಿ ಸಹಾಯ ಮಾಡುತ್ತಿರುವವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಎಲ್ಇಟಿ, ಜೆಇಎಂ, ಹಿಜ್ಬುಲ್ ಮುಜಾಹಿದೀನ್, ಅಲ್-ಬದರ್, ದಿ ರೆಸಿಸ್ಟೆನ್ಸ್ ಫ್ರಂಟ್ ಮೊದಲಾದ ಸಂಘಟನೆಗಳು ಈ ಪಟ್ಟಿಯಲ್ಲಿದ್ದವು.
ಅಕ್ಟೋಬರ್ 10ರಂದು ಜಮ್ಮು ಕಾಶ್ಮೀರದ ಏಳು ಸ್ಥಳಗಳಲ್ಲಿ ಶೋಧ ನಡೆಸಿತ್ತು. ಲಷ್ಕರ್ ಜತೆ ನಂಟಿರುವ ಟಿಆರ್‌ಎಫ್ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿತ್ತು. ಅಕ್ಟೋಬರ್ 3ರಂದು ಪೂಂಛ್ ಜಿಲ್ಲೆಯ ಅನೇಕ ಸ್ಥಳಗಳ ಮೇಲೆ ದಾಳಿ ಮಾಡಿತ್ತು.
***
ಶ್ರೀನಗರ ಮತ್ತು ಬಂಡಿಪೊರಾದಲ್ಲಿ ಗುರಿಯಾಗಿಸಿ ನಡೆಸಿದ್ದ ಎರಡು ದಾಳಿ ಪ್ರಕರಣಗಳು ಈ ಉಗ್ರರ ಹತ್ಯೆಯೊಂದಿಗೆ ತಾರ್ಕಿಕ ಅಂತ್ಯ ಕಂಡಿವೆ
- ವಿಜಯ್ ಕುಮಾರ್, ಕಾಶ್ಮೀರ ಐಜಿಪಿ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐವರು ಉಗ್ರರನ್ನು ಭದ್ರತಾ ಪಡೆಗಳು ಮಂಗಳವಾರ ಹೊಡೆದುರುಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.