ADVERTISEMENT

ಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಜೈಲಿನಲ್ಲಿರುವವರಿಂದ ಆರಂಭವಾಗುತ್ತದೆ: ಠಾಕೂರ್

ನವದೆಹಲಿ (ಪಿಟಿಐ):
Published 16 ಜನವರಿ 2022, 11:50 IST
Last Updated 16 ಜನವರಿ 2022, 11:50 IST
ಮಾಜಿ ಐಪಿಎಸ್‌ ಅಧಿಕಾರಿ ಅಸಿಮ್ ಅರುಣ್‌, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಮತ್ತು ಅನುರಾಗ್‌ ಠಾಕೂರ್
ಮಾಜಿ ಐಪಿಎಸ್‌ ಅಧಿಕಾರಿ ಅಸಿಮ್ ಅರುಣ್‌, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಮತ್ತು ಅನುರಾಗ್‌ ಠಾಕೂರ್   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಎದುರಾಳಿಯಾಗಲಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಟೀಕಾ ಪ್ರಹಾರ ನಡೆಸಿದ್ದಾರೆ.‌ ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸುವವರು ಎಸ್‌ಪಿಗೆ ಸೇರುತ್ತಾರೆ ಎಂದು ಆರೋಪಿಸಿದ್ದಾರೆ.

ಮಾಜಿ ಐಪಿಎಸ್‌ ಅಧಿಕಾರಿ ಅಸಿಮ್ ಅರುಣ್‌ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು (ಜ.16) ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಠಾಕೂರ್‌ ಮಾತನಾಡಿದ್ದಾರೆ.

ಉತ್ತಮ ಹೆಸರು ಹೊಂದಿರುವವರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಪ್ರತಿಪಾದಿಸಿದ ಠಾಕೂರ್, 'ಗಲಭೆಕೋರರು‌ ಸಮಾಜವಾದಿ ಪಕ್ಷಕ್ಕೆ ಹೋಗುತ್ತಾರೆ. ಗಲಭೆಕೋರರನ್ನು ಹಿಡಿಯುವವರು ಬಿಜೆಪಿಗೆ ಸೇರುತ್ತಾರೆ. ಆ ಪಕ್ಷದ ಅಭ್ಯರ್ಥಿಗಳು ಜೈಲಿನಲ್ಲಿರುತ್ತಾರೆ ಅಥವಾ ಜಾಮೀನನ ಮೇಲೆ ಹೊರಗಿರುತ್ತಾರೆ' ಎಂದು ಟೀಕಿಸಿದ್ದಾರೆ.‌

ADVERTISEMENT

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿರುವ ಠಾಕೂರ್, 'ನೀವು ಶಾಸಕ ನಹೀದ್‌ ಹಸನ್‌ (ಕೈರಾನ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ) ಅವರನ್ನು ನೋಡಿ. ಅವರು ಎಸ್‌ಪಿ ಪಟ್ಟಿಯಲ್ಲಿರುವ ಮೊದಲ ಅಭ್ಯರ್ಥಿ. ಇದೀಗ ಅವರು ಜೈಲಿನಲ್ಲಿದ್ದಾರೆ. ಎರಡನೇ ಅಭ್ಯರ್ಥಿ ಶಾಸಕ ಎಬ್ದುಲ್ಲಾ ಅಜಂ, ಜಾಮೀನನ ಮೇಲೆ ಹೊರಗಿದ್ದಾರೆ. ನೀವು ಎಸ್‌ಪಿಯ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ಅದು ಜೈಲಿನಲ್ಲಿರುವರಿಂದ ಆರಂಭವಾಗಿ, ಜಾಮೀನಿನ ಮೇಲೆ ಹೊರಗಿರುವವರಿಂದ ಕೊನೆಗೊಳ್ಳುತ್ತದೆ. ಜೈಲು-ಜಾಮೀನಿನೊಂದಿಗಿನ ಆಟವೇ ಸಮಾಜವಾದಿ ಪಕ್ಷದ ನಿಜವಾದ ಆಟʼ ಎಂದು ಆರೋಪಿಸಿದ್ದಾರೆ.

ಅಸಿಮ್ ಅರುಣ್‌ ಬಿಜೆಪಿಗೆ ಸೇರ್ಪಡೆ ಬಗ್ಗೆ ಮಾತನಾಡಿದ ಅವರು, 'ಕ್ಲೀನ್ ಇಮೇಜ್ (ಒಳ್ಳೆಯ ಹೆಸರು) ಹೊಂದಿರುವ ಅಧಿಕಾರಿಗಳು ಬಿಜೆಪಿಗೆ ಸೇರಲು ಬರುತ್ತಿದ್ದಾರೆ. ಆದರೆ, ಗಲಭೆಯಲ್ಲಿ ತೊಡಗಿಕೊಂಡಿರುವವರು ಎಸ್‌ಪಿಯಲ್ಲಿದ್ದಾರೆ ಎಂಬುದು ಸಮಾಜದ ಎದುರು ಸ್ಪಷ್ಟವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಇದೇ ವರ್ಷ ಚುನಾವಣೆ ನಡೆಯಲಿದೆ.

ಸಾರಾಂಶ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಎದುರಾಳಿಯಾಗಲಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಟೀಕಾ ಪ್ರಹಾರ ನಡೆಸಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.