ಪತನಂತಿಟ್ಟಾ, ಕೇರಳ: ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಕೇರಳದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. 10 ಜಲಾಶಯಗಳ ವ್ಯಾಪ್ತಿಗೆ ಸಂಬಂಧಿಸಿ ರೆಡ್ ಅಲರ್ಟ್ ಘೋಷಿಸಿದ್ದು, ಕಕ್ಕಿ ಅಣೆಕಟ್ಟೆಯಿಂದ ಈಗಾಗಲೇ ನೀರನ್ನು ಹೊರಗೆ ಹರಿಸಲಾಗುತ್ತಿದೆ.
ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿಯ ಕಾರಣದಿಂದ ರಾಜ್ಯದ ಹೆಸರಾಂತ ಧಾರ್ಮಿಕ ಸ್ಥಳ ಶಬರಿಮಲೆಗೆ ಯಾತ್ರಾರ್ಥಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಕೆ.ರಾಜನ್ ಅವರು ಸೋಮವಾರ ತಿಳಿಸಿದರು.
ಕಕ್ಕಿ, ಶೋಲಾಯರ್, ಮಟುಪಟ್ಟಿ, ಮೂಜಿಯಾರ್, ಕುಂಡಾಲಾ, ಪೀಚಿ ಜಲಾಶಯಗಳು ಒಳಗೊಂಡಂತೆ ಪತನಂತಿಟ್ಟಾ, ಇಡುಕ್ಕಿ, ತ್ರಿಸೂರು ಜಿಲ್ಲೆಗಳಲ್ಲಿರುವ 10 ಜಲಾಶಯಗಳ ವ್ಯಾಪ್ತಿಗೆ ಸಂಬಂಧಿಸಿ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಮಳೆ ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಕುರಿತು ಪತನಂತಿಟ್ಟಾ ಜಿಲ್ಲಾಧಿಕಾರಿ, ಇತರೆ ಅಧಿಕಾರಿಗಳ ಜೊತೆಗೆ ಪರಿಶೀಲನೆ ಸಭೆ ನಡೆಸಿದ ಸಚಿವರು, ಸದ್ಯ ಕಕ್ಕಿ ಜಲಾಶಯದಿಂದ ನೀರು ಬಿಡಲಿದ್ದು, ಪರಿಣಾಮ, ಪಂಪಾ ನದಿಯಲ್ಲಿ ನೀರು ಹರಿವಿನ ಮಟ್ಟ 15 ಸೆಂ.ಮೀ ಏರಲಿದೆ ಎಂದರು.
ನಿರೀಕ್ಷೆಯನ್ನು ಮೀರಿದ ಮಳೆಯ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿಸಿದೆ. ಐಎಂಡಿ ಅಧಿಕಾರಿಗಳ ಪ್ರಕಾರ, ಅಕ್ಟೋಬರ್ 20ರ ನಂತರವೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಪಾಯ ತಡೆಯಲು ಈಗ ನೀರು ಹರಿಸಲಾಗುತ್ತಿದೆ ಎಂದರು.
ಮಳೆ ಪರಿಸ್ಥಿತಿ ಕಾರಣದಿಂದಾಗಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಹಾಗೂ ತುಲಾ ಮಾಸದ ಪೂಜೆಗೆ ನಿರ್ಬಂಧ ವಿಧಿಸಲಾಗಿದೆ. ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಪಂಪ ನದಿ ಪಾತ್ರದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಅವರಿಗಾಗಿ ಎರಡು ಶಿಬಿರ ಸ್ಥಾಪಿಸಲಾಗಿದೆ. ಸದ್ಯ, ಜಿಲ್ಲೆಯಲ್ಲಿ 83 ಶಿಬಿರ ಸ್ಥಾಪಿಸಿದ್ದು, ಸುಮಾರು 2,000 ಜನರು ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದರು.
ರಕ್ಷಣಾ ಕಾರ್ಯಗಳಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಪಾಯದಲ್ಲಿ ಇರುವವರ ರಕ್ಷಣೆಗಾಗಿ ಅಗತ್ಯಬಿದ್ದಲ್ಲಿ ಬಳಸಲು ಹೆಲಿಕಾಫ್ಟರ್ ಸಜ್ಜಾಗಿಡಲು ಸೂಚಿಸಲಾಗಿದೆ. ಜನರು ಆಂತಕಪಡಬಾರದು. ಸಾಮಾಜಿಕ ಜಾಲತಾಣದಲ್ಲೂ ಭಯ ಮೂಡಿಸುವ ಸಂದೇಶ ಹಾಕಬಾರದು ಎಂದು ಕೋರಿದರು.
ಕಕ್ಕಿ, ಶೋಲಾಯರ್, ಮಟುಪಟ್ಟಿ, ಮೂಜಿಯಾರ್, ಕುಂಡಾಲಾ, ಪೀಚಿ ಜಲಾಶಯಗಳು ಒಳಗೊಂಡಂತೆ ಸೇರಿದಂತೆ ಪತನಂತಿಟ್ಟಾ, ಇಡುಕ್ಕಿ, ತ್ರಿಸೂರು ಜಿಲ್ಲೆಗಳಲ್ಲಿರುವ 10 ಜಲಾಶಯಗಳ ವ್ಯಾಪ್ತಿಗೆ ಸಂಬಂಧಿಸಿ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.