ADVERTISEMENT

ಲಖನೌಗೆ ಬಂದರೂ ಹಿಂಸಾಚಾರ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡದ ಮೋದಿ: ಪ್ರಿಯಾಂಕಾ

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 10 ಅಕ್ಟೋಬರ್ 2021, 18:50 IST
Last Updated 10 ಅಕ್ಟೋಬರ್ 2021, 18:50 IST
ಪ್ರಿಯಾಂಕಾ ಗಾಂಧಿ ವಾರ್ದಾ
ಪ್ರಿಯಾಂಕಾ ಗಾಂಧಿ ವಾರ್ದಾ   

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ಐದು ತಿಂಗಳು ಬಾಕಿ ಇರುವಂತೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಪ್ರಚಾರ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ನಡೆದ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾತಿನುದ್ದಕ್ಕೂ ಮೋದಿ ವಿರುದ್ಧ ಹರಿಹಾಯ್ದರು.

ಇಂಧನ ದರ ಹೆಚ್ಚಳ, ಸಾರ್ವಜನಿಕ ಆಸ್ತಿ ನಗದೀಕರಣ, ರೈತರ ಹೋರಾಟದೆಡೆಗೆ ಕೇಂದ್ರ ಸರ್ಕಾರದ ಅಲಕ್ಷ್ಯ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಮೋದಿ ಅವರ ಶ್ರೀಮಂತ ಸ್ನೇಹಿತರಷ್ಟೇ ಈ ದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂದರು.

ADVERTISEMENT

‘ಮೋದಿ, ರೈತರನ್ನು ಅವಮಾನಿಸುತ್ತಿದ್ದಾರೆ. ದೇಶದ ಅಮೂಲ್ಯ ಸಂಪತ್ತನ್ನು ತಮ್ಮ ಕೋಟ್ಯಧಿಪತಿ ಸ್ನೇಹಿತರಿಗೆ ಕವಡೆಕಾಸಿಗೆ ಮಾರುತ್ತಿದ್ದಾರೆ’ ಎಂದು ಆರೋಪಿಸಿದರು.  

ಲಖಿಂಪುರ ಖೇರಿಯಲ್ಲಿ ಪ್ರತಿಭಟನನಿರತ ರೈತರ ಮೇಲೆ ವಾಹನ ಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಆಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಮೇಲೆ ಅಜಯ್‌ ಮಿಶ್ರಾ ಅವರನ್ನು ಮೋದಿ ರಕ್ಷಿಸುತ್ತಿದ್ದಾರೆ ಎಂದೂ ಕಿಡಿಕಾರಿದರು. ‘ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಲಖನೌಗೆ ಬಂದ ಪ್ರಧಾನಿಗೆ, ಅಲ್ಲಿಂದ ಎರಡು ಗಂಟೆ ದಾರಿಯ ಲಖಿಂಪುರಕ್ಕೆ ಬರಲು ಸಮಯವಿರಲಿಲ್ಲ... ಅವರು, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು ಎನ್ನುತ್ತಾರೆ... ಅವರದೇ ಪಕ್ಷದ, ಉತ್ತರ ಪ್ರದೇಶ ಮುಖ್ಯಮಂತ್ರಿ, ‘ಬೆಂಕಿ ಹಚ್ಚುವವರು’ ಎಂದು ಹಣೆಪಟ್ಟಿ ಕಟ್ಟುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲೆಯ ಜಗತ್‌ಪುರದಲ್ಲಿ ಸಮಾವೇಶ ಆಯೋಜಿಸಲಾಗಿತ್ತು.

‘ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಯೊಬ್ಬನಿಗೆ, ವಿಚಾರಣೆಗೆ ಬರುವಂತೆ ಪೊಲೀಸರು ಆಮಂತ್ರಣ ನೀಡಿದ್ದನ್ನು ನೀವು ಎಲ್ಲಿಯಾದರೂ ಕಂಡಿದ್ದೀರಾ? ಇದು ಜಗತ್ತಿನ ಬೇರೆ ಎಲ್ಲೋ ಆಗಿಲ್ಲ. ಉತ್ತರಪ್ರದೇಶದಲ್ಲಿಯೇ ಆಗುತ್ತಿದೆ’ ಎಂದು ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಚಿವ ಅಜಯ್‌ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನು ತಮ್ಮ ಪಕ್ಷ ಮುಂದುವರಿಸಲಿದೆ ಎಂದ ಪ್ರಿಯಾಂಕಾ,  ‘ನಾವು ಯಾರಿಗೂ ಹೆದರುವುದಿಲ್ಲ. ನೀವು (ಸರ್ಕಾರ) ಬೇಕಿದ್ದರೆ ನಮ್ಮನ್ನು ಜೈಲಿನಲ್ಲಿಡಿ. ಸಚಿವರು ರಾಜೀನಾಮೆ ನೀಡುವವರೆಗೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ನಮ್ಮದು. ಯಾರೂ ನಮ್ಮನ್ನು ಸುಮ್ಮನಿರಿಸಲಾರರು’ ಎಂದು ಪ್ರಿಯಾಂಕಾ ಹೇಳಿದರು.

ಸಾರಾಂಶ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ಐದು ತಿಂಗಳು ಬಾಕಿ ಇರುವಂತೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಪ್ರಚಾರ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.