ADVERTISEMENT

ಧರಣಿ ನಿರತ ರೈತರ ತೆರವು: ಪಿಐಎಲ್‌ನ ತುರ್ತು ವಿಚಾರಣೆ ಕೋರಿ 'ಸುಪ್ರೀಂ'ಗೆ ಅರ್ಜಿ

ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ

ನವದೆಹಲಿ (ಪಿಟಿಐ):
Published 16 ಅಕ್ಟೋಬರ್ 2021, 8:57 IST
Last Updated 16 ಅಕ್ಟೋಬರ್ 2021, 8:57 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಆ ಸ್ಥಳದಿಂದ ತೆರವುಗೊಳಿಸುವಂತೆ ಸಲ್ಲಿಸಲಾಗಿರುವ ಪಿಐಎಲ್‌ನ ತುರ್ತು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ.

ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಬಳಿ, ಕೈ ಕತ್ತರಿಸಲಾಗಿದ್ದ ವ್ಯಕ್ತಿಯ ಶವವೊಂದು ಶುಕ್ರವಾರ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಈ ಅರ್ಜಿ ಸಲ್ಲಿಸಲಾಗಿದೆ. 

ಪ್ರತಿಭಟನಕಾರರನ್ನು ತೆರವುಗೊಳಿಸುವಂತೆ ಕೋರಿ ಸ್ವಾತಿ ಗೋಯೆಲ್ ಮತ್ತು ಸಂಜೀವ್ ನೆವಾರ್ ಎಂಬುವವರು ಕಳೆದ ಮಾರ್ಚ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಈ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿ ಅವರು ವಕೀಲ ಶಶಾಂಕ್ ಶೇಖರ್ ಝಾ ಮೂಲಕ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಬಳಿ ಪೊಲೀಸರು ನಿರ್ಮಿಸಿದ್ದ ಕಬ್ಬಿಣದ ತಂತಿಗಳ ತಡೆಗೋಡೆಗೆ ಬಿಗಿದ ರೀತಿಯಲ್ಲಿ ಕೈ ತುಂಡರಿಸಿದ ಶವವೊಂದು ಶುಕ್ರವಾರ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು ಪಂಜಾಬ್‌ನ ತರನ್ ತರನ್ ಜಿಲ್ಲೆಯ ಲಖ್‌ಬೀರ್ ಸಿಂಗ್‌(35) ಎಂದು ಗುರುತಿಸಲಾಗಿದೆ. 

ಈ ಘಟನೆಯನ್ನು ಉಲ್ಲೇಖಿಸಿರುವ ಅರ್ಜಿದಾರರು, ‘ಬದುಕುವ ಹಕ್ಕಿಗಿಂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ದೊಡ್ಡದಲ್ಲ. ಈ ಪ್ರತಿಭಟನೆಗೆ ಅವಕಾಶ ನೀಡಿದರೆ ಇದರಿಂದ ರಾಷ್ಟ್ರಕ್ಕೆ ನಷ್ಟವಾಗುತ್ತದೆ‘ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಸಾರಾಂಶ

ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಬಳಿ ಕೈ ಕತ್ತರಿಸಿದ ಶವವೊಂದು ಪತ್ತೆಯಾದ ನಂತರ, ಪ್ರತಿಭಟನಾ ನಿರತರನ್ನು ತೆರವುಗೊಳಿಸುವಂತೆ ಕೋರಿ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತುರ್ತಾಗಿ ಕೈಗೆತ್ತಿಕೊಂಡು ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.