ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಗೆ ಸೇರಿದ ಆಸ್ತಿ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ನಡೆಸಿದ ದಾಳಿಯ ಕಾರಣ, ಪಂಜಾಬ್‌ನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ವಿಪಕ್ಷಗಳು ದಾಳಿ ನಡೆಸಿವೆ. ಚನ್ನಿ ಅವರ ರಾಜೀನಾಮೆಯನ್ನು ವಿಪಕ್ಷಗಳು ಆಗ್ರಹಿಸಿವೆ.
ಮರಳು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಇತ್ತೀಚೆಗೆ ಚನ್ನಿ ಸಂಬಂಧಿ ನಿವಾಸದ ಮೇಲೆ ದಾಳಿ ನಡೆಸಿತ್ತು.
‘ಮುಖ್ಯಮಂತ್ರಿಯ ನೇತೃತ್ವದಲ್ಲೇ ರಾಜ್ಯದಲ್ಲಿ ಮರಳು ಮಾಫಿಯಾ ನಡೆಯುತ್ತಿದೆ ಎಂಬುದು ಎಡಿ ದಾಳಿಯಿಂದ ಸಾಬೀತಾಗಿದೆ. ಮರಳು ದಂದೆಯಲ್ಲಿ ತನ್ನ ಕುಟುಂಬದವರನ್ನು ಸಲಹುತ್ತಿರುವ ಕಾರಣ ಚನ್ನಿ ಅವರು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಘ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಂಬಂಧಿಗೆ ಸೇರಿದ ಸ್ಥಳದಿಂದ ದೊಡ್ಡ ಮೊತ್ತವನ್ನು ಇ.ಡಿ. ವಶಪಡಿಸಿಕೊಂಡಿರುವುದು ಚನ್ನಿ ಅವರು ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಆಗಮಿಸಿದ್ದ ವೇಳೆ ಭದ್ರತಾ ಲೋಪವಾಗಿತ್ತು. ಆ ಘಟನೆಯ ಹಗೆ ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಇ.ಡಿ. ದಾಳಿ ನಡೆಸಿದೆ ಎಂದು ಚನ್ನಿ ಅವರು ಆರೋಪಿಸಿದ್ದಾರೆ. ಆದರೆ ಈ ಮೊಕದ್ದಮೆ 2018ರಲ್ಲೇ ದಾಖಲಾಗಿದೆ. ಈ ಮೊಕದ್ದಮೆಯ ತನಿಖೆಯನ್ನು ಇ.ಡಿ. ಸಂಪೂರ್ಣಗೊಳಿಸಿದೆ. ಮುಖ್ಯಮಂತ್ರಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ತರುಣ್ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಕೂಡಾ ಚನ್ನಿ ಅವರ ರಾಜೀನಾಮೆಯನ್ನು ಕೇಳಿದ್ದಾರೆ. ‘ಮರಳು ಅಕ್ರಮ ಗಣಿಗಾರಿಕೆಯಲ್ಲಿ ಚನ್ನಿ ಅವರ ಪಾತ್ರವಿದೆ ಎಂಬ ಸಂದೇಹ ನಮಗೆ ಇತ್ತು. ಚನ್ನಿ ಸಂಬಂಧಿ ಮನೆಯಲ್ಲಿ ದೊಡ್ಡ ಮೊತ್ತದ
ಹಣವನ್ನು ಇ.ಡಿ. ವಶಪಡಿಸಿಕೊಂಡ ನಂತರ ಆ ಸಂದೇಹ ನಿಜವಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಚನ್ನಿ ಅವರಿಗೆ ನೈತಿಕ ಹಕ್ಕು ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಗೆ ಸೇರಿದ ಆಸ್ತಿ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ನಡೆಸಿದ ದಾಳಿಯ ಕಾರಣ, ಪಂಜಾಬ್‌ನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ವಿಪಕ್ಷಗಳು ದಾಳಿ ನಡೆಸಿವೆ. ಚನ್ನಿ ಅವರ ರಾಜೀನಾಮೆಯನ್ನು ವಿಪಕ್ಷಗಳು ಆಗ್ರಹಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.