ADVERTISEMENT

ಪಂಜಾಬ್‌ನಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಕೊನೆ ಅವಕಾಶ: ಸೋನಿಯಾಗೆ ಸಿಧು ಪತ್ರ

ನವದೆಹಲಿ (ಪಿಟಿಐ):
Published 17 ಅಕ್ಟೋಬರ್ 2021, 12:00 IST
Last Updated 17 ಅಕ್ಟೋಬರ್ 2021, 12:00 IST
ನವಜೋತ್ ಸಿಂಗ್ ಸಿಧು (ಪಿಟಿಐ ಚಿತ್ರ)
ನವಜೋತ್ ಸಿಂಗ್ ಸಿಧು (ಪಿಟಿಐ ಚಿತ್ರ)   

ಚಂಡೀಗಡ: ಪಂಜಾಬ್‌ನಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ 2022ರ ಚುನಾವಣಾ ಪ್ರಣಾಳಿಕೆಯಲ್ಲಿ ಇನ್ನೂ 13 ಅಂಶಗಳನ್ನು ಸೇರಿಸಬೇಕು. ಈ ಕುರಿತು ಚರ್ಚಿಸಲು ಭೇಟಿಯಾಗಲು ಅವಕಾಶ ನೀಡಬೇಕೆಂದು ಕೋರಿ ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ, ಅಕ್ಟೋಬರ್ 15ರಂದು ಸಿಧು ಅವರು ಪತ್ರ ಬರೆದಿದ್ದಾರೆ. ಪಂಜಾಬ್‌ನಲ್ಲಿ ಪಕ್ಷದ ಪುನಶ್ಚೇತನಕ್ಕೆ ಇದು ಕೊನೆಯ ಅವಕಾಶ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಬಳಿಕ ಪಕ್ಷದ ನಿರ್ಧಾರಗಳ ವಿರುದ್ಧ ಬಂಡಾಯವೆದ್ದಿದ್ದ ಸಿಧು ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದನ್ನು ಹೈಕಮಾಂಡ್ ಅಂಗೀಕರಿಸಿರಲಿಲ್ಲ. ಬಳಿಕ ಅವರ ಮನವೊಲಿಸಲಾಗಿತ್ತು. ಅದರ ಬೆನ್ನಲ್ಲೇ, ಪಕ್ಷದ ಅಧ್ಯಕ್ಷನಾಗಿ ಮುಂದುವರಿಯುವುದಾಗಿಯೂ ಸೋನಿಯಾ ನಾಯಕತ್ವದಲ್ಲಿ ನಂಬಿಕೆ ಇದೆ ಎಂದೂ ಅವರು ಹೇಳಿದ್ದರು.

ADVERTISEMENT

ಹಿಂದಿನ ಮುಖ್ಯಮಂತ್ರಿಯವರು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದ 18 ಅಂಶಗಳ ಕಾರ್ಯಕ್ರಮವು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ ಎಂದೂ ಸಿಧು ಹೇಳಿದ್ದಾರೆ.

2017ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 18 ಅಂಶಗಳ ಕಾರ್ಯಕ್ರಮವನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಬೇಕಿದೆ ಎಂದು ವಿನೀತನಾಗಿ ನಿಮ್ಮ ಬಳಿ ಕೇಳಿಕೊಳ್ಳುತ್ತಿದ್ದೇನೆ ಎಂದು ಸೋನಿಯಾಗೆ ಬರೆದ ಪತ್ರದಲ್ಲಿ ಸಿಧು ಉಲ್ಲೇಖಿಸಿದ್ದಾರೆ. ಅಲ್ಲದೆ, 2015ರಲ್ಲಿ ಫರೀದ್‌ಕೋಟ್‌ನ ಬೆಹ್‌ಬಲ್ ಮತ್ತು ಕೋಟಕ್‌ಪುರದಲ್ಲಿ ನಡೆದ ಪೊಲೀಸ್‌ ಗುಂಡಿನ ದಾಳಿ ವಿಚಾರದಲ್ಲಿ ಪಂಜಾಬ್ ಜನತೆ ನ್ಯಾಯ ಕೇಳುತ್ತಿದೆ ಎಂದೂ ಉಲ್ಲೇಖಿಸಿದ್ದಾರೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಪಂಜಾಬ್‌ನಲ್ಲಿ ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದೂ ಸಿಧು ಹೇಳಿದ್ದಾರೆ.

ಸಾರಾಂಶ

ಪಂಜಾಬ್‌ನಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ 2022ರ ಚುನಾವಣಾ ಪ್ರಣಾಳಿಕೆಯಲ್ಲಿ ಇನ್ನೂ 13 ಅಂಶಗಳನ್ನು ಸೇರಿಸಬೇಕು. ಈ ಕುರಿತು ಚರ್ಚಿಸಲು ಭೇಟಿಯಾಗಲು ಅವಕಾಶ ನೀಡಬೇಕೆಂದು ಕೋರಿ ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.