ADVERTISEMENT

ಇ–ಶ್ರಮ ಪೋರ್ಟಲ್‌: 4 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರು ನೋಂದಣಿ

ನವದೆಹಲಿ (ಪಿಟಿಐ):
Published 17 ಅಕ್ಟೋಬರ್ 2021, 7:18 IST
Last Updated 17 ಅಕ್ಟೋಬರ್ 2021, 7:18 IST
ಇ-ಶ್ರಮ ಪೋರ್ಟಲ್‌
ಇ-ಶ್ರಮ ಪೋರ್ಟಲ್‌   

ನವದೆಹಲಿ: ಇ-ಶ್ರಮ ಗುರುತಿನ ಚೀಟಿಗಾಗಿ ಪೋರ್ಟಲ್‌ನಲ್ಲಿ 4 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿರುವುದಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ಹೇಳಿದೆ. ದೇಶದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇ–ಶ್ರಮ ಜಾರಿಗೆ ತಂದಿದೆ.

ಕಟ್ಟಡ ಕಾರ್ಮಿಕರು, ವಸ್ತ್ರ ತಯಾರಿ, ಮೀನುಗಾರಿಕೆ, ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸದವರು, ಕೃಷಿ ಮತ್ತು ಸಂಬಂಧಿತ ಕಾರ್ಮಿಕರು, ಸಾರಿಗೆ ವಲಯದ ಕಾರ್ಮಿಕರು ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ. ಪೋರ್ಟಲ್‌ನಲ್ಲಿ ನೋಂದಣಿ ಆರಂಭಿಸಿ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ನೋಂದಾಯಿತರ ಸಂಖ್ಯೆ ನಾಲ್ಕು ಕೋಟಿ ದಾಟಿರುವುದಾಗಿ ಕಾರ್ಮಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಸಂಘಟಿತ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಇ–ಶ್ರಮ ಪೋರ್ಟಲ್‌ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ಉದ್ಯೋಗ ಆಧಾರಿತ ಯೋಜನೆಗಳು ಮತ್ತು ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ADVERTISEMENT

ಇತ್ತೀಚಿನ ಮಾಹಿತಿ ಪ್ರಕಾರ, 4.09 ಕೋಟಿ ಕಾರ್ಮಿಕರು ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ. ಈ ಪೈಕಿ ಶೇ 50.02ರಷ್ಟು ಫಲಾನುಭವಿಗಳು ಮಹಿಳೆಯರು ಹಾಗೂ ಶೇ 49.98ರಷ್ಟು ಪುರುಷರು. ಈ ಕಾರ್ಯಕ್ರಮದಲ್ಲಿ ಸಮ ಪ್ರಮಾಣದಲ್ಲಿ ಪುರುಷರು ಮತ್ತು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. 16ರಿಂದ 40 ವರ್ಷ ವಯಸ್ಸಿನ ಶೇ 65.68ರಷ್ಟು ಕಾರ್ಮಿಕರು ಮತ್ತು 40ಕ್ಕಿಂತ ಹೆಚ್ಚು ವಯಸ್ಸಿನ ಶೇ 34.32ರಷ್ಟು ಕಾರ್ಮಿಕರು ನೋಂದಣಿ ಮಾಡಿದ್ದಾರೆ.

ಒಡಿಶಾ, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇ–ಶ್ರಮ ಪೋರ್ಟಲ್‌ ನೋಂದಣಿ ಮಾಡಿರುವುದಾಗಿ ಮಾಹಿತಿಯಿಂದ ತಿಳಿದು ಬಂದಿದೆ. ಮೇಘಾಲಯ, ಮಣಿಪುರ, ಗೋವಾ ಹಾಗೂ ಚಂಡೀಗಡದಲ್ಲಿ ಈ ಕಾರ್ಯಕ್ರಮ ಇನ್ನಷ್ಟೇ ವೇಗ ಪಡೆದುಕೊಳ್ಳಬೇಕಿದೆ.

ನೋಂದಣಿ ಹೇಗೆ?

ಕೇಂದ್ರದ ಈ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಲು ಕಾರ್ಮಿಕರು ಇ–ಶ್ರಮ ಮೊಬೈಲ್‌ ಅಪ್ಲಿಕೇಷನ್‌ ಅಥವಾ ವೆಬ್‌ಸೈಟ್‌ (e-Shram) ಬಳಸಬಹುದು. ಇಲ್ಲವೇ, ರಾಜ್ಯದ ಸೇವಾ ಕೇಂದ್ರ, ಕಾರ್ಮಿಕರ ಸಹಾಯ ಕೇಂದ್ರಗಳು, ಆಯ್ದ ಅಂಚೆ ಕಚೇರಿಗಳು ಅಥವಾ ಡಿಜಿಟಲ್‌ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.

ಇ–ಶ್ರಮ ಪೋರ್ಟಲ್‌ನ ನೋಂದಾಯಿಸಿದ ಬಳಿಕ ಅಸಂಘಟಿಕ ಕಾರ್ಮಿಕರಿಗೆ ಡಿಜಿಟಲ್‌ ಇ–ಶ್ರಮ ಗುರುತಿನ ಚೀಟಿ ದೊರೆಯುತ್ತಿದೆ. ಸ್ವವಿವರಗಳನ್ನು ಪೋರ್ಟಲ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕವೇ ಅಪ್‌ಡೇಟ್‌ ಮಾಡಲು ಅವಕಾಶವಿದೆ. ದೇಶದ ಯಾವುದೇ ಸ್ಥಳದಲ್ಲಿ ಬಳಸಲು ಅನುಕೂಲವಾಗುವಂತೆ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ನೀಡಲಾಗುತ್ತದೆ.

ನೋಂದಾಯಿತ ಕಾರ್ಮಿಕರಿಗೆ ಅಪಘಾತ ಸಂಭವಿಸಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ₹2 ಲಕ್ಷ ಪರಿಹಾರ ಸಿಗುತ್ತದೆ ಹಾಗೂ ಭಾಗಶಃ ಅಂಗವೈಕಲ್ಯವಾದರೆ ಒಂದು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ.

ಸಾರಾಂಶ

ನವದೆಹಲಿ: ಇ-ಶ್ರಮ ಗುರುತಿನ ಚೀಟಿಗಾಗಿ ಪೋರ್ಟಲ್‌ನಲ್ಲಿ 4 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿರುವುದಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ಹೇಳಿದೆ. ದೇಶದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇ–ಶ್ರಮ ಜಾರಿಗೆ ತಂದಿದೆ. ಕಟ್ಟಡ ಕಾರ್ಮಿಕರು, ವಸ್ತ್ರ ತಯಾರಿ, ಮೀನುಗಾರಿಕೆ, ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸದವರು, ಕೃಷಿ ಮತ್ತು ಸಂಬಂಧಿತ ಕಾರ್ಮಿಕರು, ಸಾರಿಗೆ ವಲಯದ ಕಾರ್ಮಿಕರು ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ. ಪೋರ್ಟಲ್‌ನಲ್ಲಿ ನೋಂದಣಿ ಆರಂಭಿಸಿ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ನೋಂದಾಯಿತರ ಸಂಖ್ಯೆ ನಾಲ್ಕು ಕೋಟಿ ದಾಟಿರುವುದಾಗಿ ಕಾರ್ಮಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.