ನವದೆಹಲಿ: ವಿಚ್ಛೇದಿತ ಪತ್ನಿ ದುಡಿಯುತ್ತಿದಾಳೆ ಮತ್ತು ಮಕ್ಕಳು ವಯಸ್ಕರಾಗಿದ್ದಾರೆ ಎಂಬ ಕಾರಣಕ್ಕೆ, ಪತಿಯು ತನ್ನ ಆರ್ಥಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳುವಂತಿಲ್ಲ. ಮಕ್ಕಳ ವೆಚ್ಚವನ್ನು ಭರಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವಿಚ್ಛೇದನ ಪ್ರಕರಣವೊಂದರಲ್ಲಿ, ಮಕ್ಕಳ ವಿದ್ಯಾಭ್ಯಾಸ ವೆಚ್ಚಕ್ಕೆ ₹15,000 ನೀಡಲು ಸೂಚಿಸಿದ್ದ ಹೈಕೋರ್ಟ್‌ನ ನಿರ್ದೇಶನವನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ. ‘ಪತ್ನಿಯು ಕೇಂದ್ರ ಸರ್ಕಾರದ ನೌಕರಳಾಗಿದ್ದು, ಪ್ರತಿ ತಿಂಗಳು ₹70,000 ವೇತನ ಪಡೆಯುತ್ತಾಳೆ. ಮಕ್ಕಳ ವಿದ್ಯಾಭ್ಯಾಸದ ಭತ್ಯೆಯನ್ನೂ ಪಡೆಯುತ್ತಾಳೆ. ನನ್ನ ಮಗ ಈಗ 18 ವರ್ಷದವನಾಗಿದ್ದಾನೆ. ಹೀಗಾಗಿ ಅವನ ವಿದ್ಯಾಭ್ಯಾಸದ ವೆಚ್ಚ ಭರಿಸುವ ಜವಾಬ್ದಾರಿಯಿಂದ ಬಿಡುಗಡೆ ಮಾಡಿ’ ಎಂದು ಅರ್ಜಿದಾರರು ಕೋರಿದ್ದರು.
ಪತ್ನಿಯು ಮಕ್ಕಳ ವಿದ್ಯಾಭ್ಯಾಸಕ್ಕೆ ವೆಚ್ಚ ಮಾಡಿದ ನಂತರ, ಆಕೆಯ ಬಳಿ ಏನೂ ಉಳಿಯದೇ ಇರಬಹುದು. ಅಂತಹ ಸಂದರ್ಭದಲ್ಲಿ ಪತಿಯು ಆರ್ಥಿಕ ನೆರವು ನೀಡುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಿಆರ್‌ಪಿಸಿಯ 125ನೇ ಸೆಕ್ಷನ್ ಹೇಳುತ್ತದೆ. ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುವವರೆಗೆ ಮತ್ತು ಆರ್ಥಿಕವಾಗಿ ಸದೃಢರಾಗುವವರೆಗೆ ಅವರ ಹಣಕಾಸಿನ ಜಾವಾಬ್ದಾರಿಯನ್ನು ಪತಿಯೂ ಹೊರಬೇಕು ಎಂದು ಹೈಕೋರ್ಟ್ ಹೇಳಿದೆ.
‘ಮಗನಿಗೆ 18 ವರ್ಷವಾಗಿದೆ ಎಂಬ ಒಂದೇ ಕಾರಣಕ್ಕೆ, ಅವನ ವಿದ್ಯಾಭ್ಯಾಸದ ವೆಚ್ಚವನ್ನು ನಿರಾಕರಿಸುವಂತಿಲ್ಲ. ಆ ವೆಚ್ಚದ ಸಂಪೂರ್ಣ ಹೊರೆಯನ್ನು ತಾಯಿಯ ಮೇಲೆಯೇ ಹೇರುವಂತಿಲ್ಲ. ಮಗ ತನ್ನನ್ನು ತಾನು ಸಲಹಿಕೊಳ್ಳುವಷ್ಟು ಆರ್ಥಿಕವಾಗಿ ಸದೃಢನಾಗದೇ ಇರಬಹುದು. ಈ ಕಾರಣದಿಂದ ಮಗನ ವೆಚ್ಚವನ್ನು ತಂದೆ ಭರಿಸಬೇಕು’ ಎಂದು ಹೈಕೋರ್ಟ್ ಹೇಳಿದೆ.
ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಪರಿಹಾರ ಮೊತ್ತವನ್ನು ಭರಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.
ಚ್ಛೇದಿತ ಪತ್ನಿ ದುಡಿಯುತ್ತಿದಾಳೆ ಮತ್ತು ಮಕ್ಕಳು ವಯಸ್ಕರಾಗಿದ್ದಾರೆ ಎಂಬ ಕಾರಣಕ್ಕೆ, ಪತಿಯು ತನ್ನ ಆರ್ಥಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳುವಂತಿಲ್ಲ. ಮಕ್ಕಳ ವೆಚ್ಚವನ್ನು ಭರಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.