ADVERTISEMENT

ಕಾಶ್ಮೀರ ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ: ಫಾರೂಕ್‌ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 14:37 IST
Last Updated 13 ಅಕ್ಟೋಬರ್ 2021, 14:37 IST
ಫಾರೂಕ್‌ ಅಬ್ದುಲ್ಲಾ
ಫಾರೂಕ್‌ ಅಬ್ದುಲ್ಲಾ    

ಶ್ರೀನಗರ: ಕಾಶ್ಮೀರ ಭಾರತದ ಭಾಗವಾಗಿದ್ದು, ಅದು ಎಂದಿಗೂ ಪಾಕಿಸ್ತಾನಕ್ಕೆ ಸೇರುವುದಿಲ್ಲ. ನಾನು ಕೊಲ್ಲಲ್ಪಟ್ಟರೂ ಅದು ಹಾಗೆಯೇ ಇರುತ್ತದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಬುಧವಾರ ಇಲ್ಲಿ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಭಾರತದ ಭಾಗವಾಗಿದ್ದು ದೇಶದ ಜೊತೆಯೇ ಉಳಿಯುತ್ತೇವೆ. ನನಗೆ ಗುಂಡು ಹಾರಿಸಿ ಕೊಂದರು ಕೂಡ ಇದನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. 

‘1990ರ ದಶಕದಲ್ಲಿ ಎಲ್ಲರೂ ಕಾಶ್ಮೀರ ತೊರೆದಾಗ ನೀವು (ಸಿಖ್ಖರು) ಮಾತ್ರ ಇಲ್ಲಿ ಉಳಿದುಕೊಂಡಿರಿ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ಧೈರ್ಯದಿಂದ ಹೋರಾಡಬೇಕು. ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕನನ್ನು ಕೊಲ್ಲುವುದು ಇಸ್ಲಾಂ ಸೇವೆ ಅಲ್ಲ. ಅವರು ಭೂತದ ಸೇವೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.     

ADVERTISEMENT

‘ಕಾಶ್ಮೀರವನ್ನು ‍ಪಡೆಯುವ ಉಗ್ರರ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಅವು ವಿಫಲವಾಗುತ್ತವೆ. ಆದರೆ, ಮುಸ್ಲಿಮರು, ಸಿಖ್ಖರು, ಹಿಂದೂಗಳು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರೂ ಅವರ ವಿರುದ್ಧ ಹೋರಾಡಲು ಒಂದಾಗಬೇಕಿದೆ’ ಎಂದು ಫಾರೂಕ್‌ ಅಬ್ದುಲ್ಲಾ ಹೇಳಿದರು.  

ಭಾರತದಾದ್ಯಂತ ದ್ವೇಷದ ಬಿರುಗಾಳಿ ತಿರುಗುತ್ತಿದ್ದು ಮುಸ್ಲಿಮರು, ಹಿಂದೂಗಳು ಮತ್ತು ಸಿಖ್ಖರ ಸಮುದಾಯಗಳನ್ನು ಒಡೆಯಲಾಗುತ್ತಿದೆ ಎಂದು ಅವರು ಹೇಳಿದರು.

‘ಇಂತಹ ಒಡೆಯುವ ರಾಜಕಾರಣ ನಿಲ್ಲಬೇಕು, ಇಲ್ಲದಿದ್ದರೆ ಭಾರತ ಅಸ್ತಿತ್ವ ಕಳೆದುಕೊಳ್ಳುತ್ತದೆ. ನಾವೆಲ್ಲ ಒಂದಾಗಿ ಬದುಕಿದಾಗ ಮಾತ್ರ ನಮ್ಮ ದೇಶವನ್ನು ಉಳಿಸಲು ಸಾಧ್ಯ’ ಎಂದರು. 

ಸಾರಾಂಶ

ಕಾಶ್ಮೀರ ಭಾರತದ ಭಾಗವಾಗಿದ್ದು ಎಂದಿಗೂ ಪಾಕಿಸ್ತಾನವಾಗುವುದಿಲ್ಲ. ನಾನು ಕೊಲ್ಲಲ್ಪಟ್ಟರೂ ಅದು ಹಾಗೆಯೇ ಇರುತ್ತದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಬುಧವಾರ ಇಲ್ಲಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.