ADVERTISEMENT

ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಗಳಿಗೆ ತಿದ್ದುಪಡಿ: ಕೇಂದ್ರ ಸಮರ್ಥನೆ

ನವದೆಹಲಿ (ಪಿಟಿಐ):
Published 21 ಜನವರಿ 2022, 15:28 IST
Last Updated 21 ಜನವರಿ 2022, 15:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಜ್ಯಗಳು ಅಗತ್ಯ ಸಂಖ್ಯೆಯ ಐಎಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮೇರೆಗೆ ಕಳುಹಿಸದಿರುವುದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. 

ಇಂಥ ವಿಷಯಗಳಲ್ಲಿ ರಾಜ್ಯ ಸರ್ಕಾರದ ತೀರ್ಮಾನವನ್ನು ಮೀರಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಸಂಬಂಧಿತ ನಿಯಮಾವಳಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ಕೇಂದ್ರ ಬಲವಾಗಿ ಸಮರ್ಥಿಸಿಕೊಂಡಿದೆ.

ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮೂಲಗಳು, ಜಂಟಿ ಕಾರ್ಯದರ್ಶಿ ಹಂತದವರೆಗೆ ಅಧಿಕಾರಿಗಳ ನಿಯೋಜನೆ ಇಳಿಮುಖವಾಗಿದೆ. ಬಹುತೇಕ ರಾಜ್ಯಗಳು ಕೇಂದ್ರ ಸೇವೆಗೆ ಅಧಿಕಾರಿಗಳನ್ನು ನಿಯೋಜಿಸುತ್ತಿಲ್ಲ. ರಾಜ್ಯ ಪ್ರಾಯೋಜಿತ ಯೋಜನೆಗಳ ಕಾರ್ಯ ನಿಭಾಯಿಸುವ ಅಧಿಕಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ತಿಳಿಸಿವೆ.

ADVERTISEMENT

ಇಲಾಖೆಯು ಇತ್ತೀಚೆಗೆ ಐಎಎಸ್‌ (ವೃಂದ) ನಿಯಮ 1954ಕ್ಕೆ ತಿದ್ದುಪಡಿ ತಂದಿದೆ. ಅದರ ಪ್ರಕಾರ, ಕೇಂದ್ರ ಸೇವೆಗೆ ಅಧಿಕಾರಿಗಳನ್ನು ನಿಯೋಜಿಸಬೇಕು ಎಂಬ ಕೇಂದ್ರದ ಮನವಿಯನ್ನು ತಿರಸ್ಕರಿಸುವ ರಾಜ್ಯಗಳ ಅಧಿಕಾರ ಕೈಬಿಡಲಾಗಿದೆ. ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಇದರಿಂದ ರಾಜ್ಯಗಳ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮವಾಗಲಿದ್ದು, ತಿದ್ದುಪಡಿ ಹಿಂಪಡೆಯಬೇಕು‘ ಎಂದು ಒತ್ತಾಯಿಸಿದ್ದಾರೆ.

ಮೂಲಗಳ ಪ್ರಕಾರ, ವಿವಿಧ ರಾಜ್ಯಗಳು ಕೇಂದ್ರ ಸೇವೆಗೆ 2011ರಲ್ಲಿ 309 ಅಧಿಕಾರಿಗಳನ್ನು ಕಳುಹಿಸಿದ್ದವು. ಆ ಸಂಖ್ಯೆ ಈಗ 223 ಆಗಿದೆ. ಉಪ ಕಾರ್ಯದರ್ಶಿ, ನಿರ್ದೇಶಕ ಹಂತದಲ್ಲಿ ಅಧಿಕಾರಿಗಳ ಸಂಖ್ಯೆ 2014ರಲ್ಲಿ 621 ಇದ್ದರೆ, 2021ರಲ್ಲಿ ಅದು 1,130ಕ್ಕೆ ಏರಿದೆ. ಇದೇ ವೇಳೆ ಕೇಂದ್ರ ಸೇವೆಗೆ ತೆರಳಿದವರ ಸಂಖ್ಯೆ 117 ರಿಂದ 114ಕ್ಕಿಳಿದಿದೆ. 

ಸಾರಾಂಶ

ಇಂಥ ವಿಷಯಗಳಲ್ಲಿ ರಾಜ್ಯ ಸರ್ಕಾರದ ತೀರ್ಮಾನವನ್ನು ಮೀರಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಸಂಬಂಧಿತ ನಿಯಮಾವಳಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ಕೇಂದ್ರ ಬಲವಾಗಿ ಸಮರ್ಥಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.