ಕಾಸರಗೋಡು: ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸುತ್ತಿರುವ ಇಲ್ಲಿಯ ಎಂಡೊಸಲ್ಫಾನ್ ಕೀಟನಾಶಕ ಸಂತ್ರಸ್ತರು ಮತ್ತು ಅವರ ಕುಟುಂಬದವರು ಈಗ ಮತ್ತೊಂದು ಪ್ರತಿಭಟನೆ ಆರಂಭಿಸಿದ್ದಾರೆ. ಬಾಕಿ ಉಳಿದಿರುವ ಎಂಡೊಸಲ್ಫಾನ್ ದಾಸ್ತಾನನ್ನು ಸ್ಥಳೀಯವಾಗಿ ನಾಶಪಡಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಎರಡು ದಶಕಗಳಿಂದ ಬಳಕೆಯಾಗದೇ ಉಳಿದಿರುವ 1,450 ಲೀಟರ್ ಎಂಡೊಸಲ್ಫಾನ್ ದಾಸ್ತಾನನ್ನು ಜಿಲ್ಲೆಯ ಮೂರು ಸ್ಥಳಗಳಲ್ಲಿ ಬ್ಯಾರೆಲ್‌ಗಳಲ್ಲಿ ಇರಿಸಲಾಗಿದೆ. ಇದನ್ನು ಸ್ಥಳದಲ್ಲೇ ನಾಶಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಎಂಡೊಸಲ್ಫಾನ್ ಅನ್ನು ಸ್ಥಳದಲ್ಲೇ ನಾಶಪಡಿಸಿದರೆ ಇಲ್ಲಿಯ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಜನರು ಆತಂಕಕ್ಕೀಡಾಗಿದ್ದಾರೆ.
ಎಂಡೊಸಲ್ಫಾನ್ ಸಂತ್ರಸ್ತರ ವೇದಿಕೆ ಭಾನುವಾರ ಕಾಸರಗೋಡಿನಲ್ಲಿ ಸಭೆ ಆಯೋಜಿಸಿತ್ತು. ಸ್ಥಳದಲ್ಲೇ ಎಂಡೊಸಲ್ಫಾನ್ ನಾಶ ಮಾಡುವುದಕ್ಕೆ ಅನುವು ಮಾಡುವುದು ಬೇಡ ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಎಂಡೊಸಲ್ಫಾನ್ ಸಂತ್ರಸ್ತರ ವೇದಿಕೆ ಮುಖಂಡ ಅಂಬಲತರ ಕುಂಞಿಕೃಷ್ಣನ್, ‘ಸ್ಥಳೀಯವಾಗಿ ಎಂಡೊಸಲ್ಫಾನ್ ನಾಶಪಡಿಸುವ ಎಲ್ಲಾ ಪ್ರಯತ್ನವನ್ನು ನಾವು ಪ್ರತಿರೋಧಿಸುತ್ತೇವೆ. ನಮ್ಮ ಜಿಲ್ಲೆ ಈಗಾಗಲೇ ಎಂಡೊಸಲ್ಫಾನ್ ಪರಿಣಾಮಗಳಿಂದ ಜರ್ಜರಿತವಾಗಿದೆ. ಅದನ್ನು ಉತ್ಪಾದಿಸಿದ್ದ ಹಿಂದುಸ್ತಾನ್ ಇನ್ಸೆಕ್ಟಿಸೈಡ್ ಲಿಮಿಟೆಡ್ ಅದನ್ನು ಹಿಂಪಡೆಯಲು ನಿರಾಕರಿಸಿದೆ’ ಎಂದು ಹೇಳಿದ್ದಾರೆ.
ಬಳಸದೇ ಉಳಿದಿರುವ ಎಂಡೊಸಲ್ಫಾನ್ ಕೀಟನಾಶಕವನ್ನು ಹಿಂಪಡೆದು, ವೈಜ್ಞಾನಿಕ ರೀತಿಯಲ್ಲಿ ನಾಶ ಮಾಡುವಂತೆ ಎಂಡೊಸಲ್ಫಾನ್ ತಯಾರಿಸಿದ್ದ ಸಂಸ್ಥೆಗೆ ಜಿಲ್ಲಾಡಳಿತ ಈ ಹಿಂದೆ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ಸಂಸ್ಥೆ ತಿರಸ್ಕರಿಸಿತ್ತು.
ಕೇರಳ ಸರ್ಕಾರದ ಅಧಿಕೃತ ಎಂಡೊಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಮತ್ತಷ್ಟು ಜನರನ್ನು ಸೇರಿಸುವಂತೆ ಮತ್ತು ಸುಪ್ರೀಂ ಕೋರ್ಟ್ ಆದೇಶಿಸಿದ್ದ ₹5 ಲಕ್ಷ ಪರಿಹಾರ ನೀಡುವಂತೆ ಎಂಡೊಸಲ್ಫಾನ್ ಸಂತ್ರಸ್ತರ ವೇದಿಕೆ ಹೋರಾಟ ಮುಂದುವರಿಸಿದೆ.
ಸೋರಿಕೆಯ ಆತಂಕ
ಬ್ಯಾರೆಲ್‌ಗಳಿಂದ ಕೀಟನಾಶಕ ಸೋರಿಕೆ ಆಗಬಹುದು ಎಂಬ ಆತಂಕ 2012ರಲ್ಲಿ ಎದುರಾಗಿತ್ತು. ಅಲ್ಲಿಂದ ಈಚೆಗೆ, ಶೇಖರಿಸಿ ಇರಿಸಿರುವ ಕೀಟನಾಶಕವನ್ನು ನಾಶಪಡಿಸಬೇಕು ಎಂಬ ಬೇಡಿಕೆಗೆ ಬಲ ಬಂದಿತು.
ಕೃಷಿ ವಿಶ್ವವಿದ್ಯಾಲಯ ಮತ್ತು ಪ್ಲಾಂಟೇಶನ್ ಕಾರ್ಪೊರೇಷನ್‌ನ ತಜ್ಞರ ಸಹಾಯ ಪಡೆಯಲಾಗುತ್ತದೆ. ಮದ್ಯಸಾರ ಬಳಸಿ ಮೂರು ಹಂತಗಳ ಪ್ರಕ್ರಿಯೆ ಮೂಲಕ ಎಂಡೊಸಲ್ಫಾನ್‌ನನ್ನು ನಾಶಪಡಿಸಲಾಗುವುದು. ಇದರಿಂದ ಸ್ಥಳೀಯರ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಅಲ್ಲದೇ ಈ ಕುರಿತು ಸ್ಥಳೀಯರ ಮನವೊಲಿಸಲು ಕೂಡಾ ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಆದರೆ ಆದರೆ ಸ್ಥಳೀಯರು ಪಟ್ಟು ಸಡಿಲಿಸುತ್ತಿಲ್ಲ. ಬ್ಯಾರೆಲ್‌ಗಳಲ್ಲಿ ಎಂಡೊಸೆಲ್ಫಾನ್ ಶೇಖರಿಸಲಾಗಿದೆ. ಕಾಸರಗೋಡಿನ ಸಮೀಪದ ಪೆರಿಯಾದಲ್ಲಿ 915 ಲೀಟರ್ ಶೇಖರಣೆ ಮಾಡಲಾಗಿದೆ. ರಾಜಪುರಂ ಗ್ರಾಮದಲ್ಲಿ 450 ಲೀಟರ್, ಚೀಮೇನಿಯಲ್ಲಿ ಗ್ರಾಮದಲ್ಲಿ 75 ಲೀಟರ್ ಶೇಖರಣೆ ಮಾಡಲಾಗಿದೆ.
ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸುತ್ತಿರುವ ಇಲ್ಲಿಯ ಎಂಡೊಸಲ್ಫಾನ್ ಕೀಟನಾಶಕ ಸಂತ್ರಸ್ತರು ಮತ್ತು ಅವರ ಕುಟುಂಬದವರು ಈಗ ಮತ್ತೊಂದು ಪ್ರತಿಭಟನೆ ಆರಂಭಿಸಿದ್ದಾರೆ. ಬಾಕಿ ಉಳಿದಿರುವ ಎಂಡೊಸಲ್ಫಾನ್ ದಾಸ್ತಾನನ್ನು ಸ್ಥಳೀಯವಾಗಿ ನಾಶಪಡಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.