ADVERTISEMENT

ಇ.ಡಿ ದಾಳಿ: ಪಂಜಾಬ್ ಸಿಎಂ ಚನ್ನಿ ಸಂಬಂಧಿಗೆ ಸೇರಿದ ಸ್ಥಳದಿಂದ ₹ 8 ಕೋಟಿ ವಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 10:43 IST
Last Updated 19 ಜನವರಿ 2022, 10:43 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಚಂಡೀಗಡ: ಪಂಜಾಬ್‌ನಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ನಡೆಸಿದ ದಾಳಿಯಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಯೊಬ್ಬರಿಗೆ ಸೇರಿದ ಜಾಗಗಳಿಂದ 8 ಕೋಟಿ ರೂಪಾಯಿ ಸೇರಿದಂತೆ ಸುಮಾರು 10 ಕೋಟಿ ರೂಪಾಯಿ ಹಣವನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ.

ಮಂಗಳವಾರ ರಾಜ್ಯದ ಹನ್ನೆರಡು ಸ್ಥಳಗಳಲ್ಲಿ ನಡೆಸಲಾದ ದಾಳಿಗಳು ಇಂದು ಮುಂಜಾನೆ ಪೂರ್ಣಗೊಂಡಿದ್ದು, ಸಂಸ್ಥೆಯು ಹಲವಾರು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ.

ಕಾರ್ಯಾಚರಣೆಯ ವೇಳೆ ಸುಮಾರು 10 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅಲಿಯಾಸ್ ಹನಿಗೆ ಸಂಬಂಧಿಸಿದ ಜಾಗಗಳಿಂದ ವಶಪಡಿಸಿಕೊಂಡ ಸುಮಾರು 8 ಕೋಟಿ ರೂಪಾಯಿ ಹಣವೂ ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಂದೀಪ್ ಕುಮಾರ್ ಎಂಬ ವ್ಯಕ್ತಿಗೆ ಸಂಬಂಧಿಸಿದ ಸ್ಥಳದಿಂದ ಸುಮಾರು 2 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಚಂಡೀಗಡ, ಮೊಹಾಲಿ, ಲುಧಿಯಾನ ಮತ್ತು ಪಠಾಣ್‌ಕೋಟ್ ಸೇರಿದಂತೆ ರಾಜ್ಯದ ಒಂದು ಡಜನ್ ಸ್ಥಳಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಚನ್ನಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆ ಆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದಾಳಿ ನಡೆಸಲಾಗಿತ್ತು. ಪಂಜಾಬ್‌ನಲ್ಲಿ ಇ.ಡಿ ‘ಅದೇ ಮಾದರಿಯನ್ನು’ ಅನುಸರಿಸುತ್ತಿದೆ. ನನ್ನ ಮೇಲೆ, ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರ ಮೇಲೆ ಒತ್ತಡ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

‘ಒತ್ತಡವನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ...’ಎಂದು ಹೇಳಿದ ಅವರು, ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಸಾರಾಂಶ

ಮಂಗಳವಾರ ರಾಜ್ಯದ ಹನ್ನೆರಡು ಸ್ಥಳಗಳಲ್ಲಿ ನಡೆಸಲಾದ ದಾಳಿಗಳು ಇಂದು ಮುಂಜಾನೆ ಪೂರ್ಣಗೊಂಡಿದ್ದು, ಸಂಸ್ಥೆಯು ಹಲವಾರು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.