ADVERTISEMENT

ಗೋವಾದಲ್ಲಿ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್–ಟಿಎಂಸಿ ಟ್ವಿಟರ್ ಜಗಳ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 18:48 IST
Last Updated 15 ಜನವರಿ 2022, 18:48 IST
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ   

ಪಣಜಿ: ಗೋವಾ ವಿಧಾನಸಭೆಗೆ ಫೆ.14ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಗಳ ನಡುವಿನ ಮೈತ್ರಿ ಮಾತುಕತೆ ದಾರಿ ತಪ್ಪಿದಂತೆ ತೋರುತ್ತಿದ್ದು, ಎರಡೂ ಪಕ್ಷಗಳ ಮುಖಂಡರು ಟ್ವಿಟರ್‌ನಲ್ಲಿ ವಾಕ್ಸಮರ ನಡೆಸುತ್ತಿದ್ದಾರೆ. 

ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಗೋವಾ ಕಾಂಗ್ರೆಸ್ ಘಟಕದ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಳ್ಳಿಹಾಕಿದ್ದರು.

‘ರಾಹುಲ್ ಗಾಂಧಿ ಅವರ ನೇತೃತ್ವದ ಸಭೆಯಲ್ಲಿ ಟಿಎಂಸಿ ಜೊತೆಗಿನ ಮೈತ್ರಿ ಬಗ್ಗೆ ಚರ್ಚೆಯಾಯಿತು ಎಂಬುದು ಸತ್ಯವಲ್ಲ. ಗೋವಾದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ಅಧಿಕಾರಕ್ಕೆ ಮರಳುವ ವಿಶ್ವಾಸವಿದೆ’ ಎಂದು ವೇಣುಗೋಪಾಲ್ ಅವರು ಜನವರಿ 10ರಂದು ಟ್ವೀಟ್ ಮಾಡಿದ್ದರು. ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಡುವ ಹಂತದಲ್ಲಿದೆ ಇದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದರು.

ADVERTISEMENT

ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಬೇಕಾದರೆ, ಪಶ್ಚಿಮ ಬಂಗಾಳ ಮಾದರಿಯಲ್ಲಿ ಜಂಟಿಯಾಗಿ ಹೋರಾಟ ನಡೆಸಬೇಕು ಎಂಬುದಾಗಿ ಮೊಯಿತ್ರಾ ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದರು. ‘ಮೈತ್ರಿ ಬಗ್ಗೆ ಕಾಂಗ್ರೆಸ್ ಎದುರು ಔಪಚಾರಿಕ ಪ್ರಸ್ತಾವವನ್ನು ಟಿಎಂಸಿ ಇರಿಸಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಲು ಕಾಂಗ್ರೆಸ್ ಸಮಯಾವಕಾಶ ಕೇಳಿದೆ’ ಎಂದಿದ್ದರು. ‘ಕಾಂಗ್ರೆಸ್‌ಗೆ ಮೈತ್ರಿ ಆಹ್ವಾನ ನೀಡಿ ಎರಡು ವಾರ ಕಳೆದಿವೆ. ಚಿದಂಬರಂ ಅವರು ಸುಮ್ಮನೆ ಹೇಳಿಕೆ ನೀಡುವ ಬದಲು ಪಕ್ಷದ ನಾಯಕತ್ವದ ಜೊತೆ ಸಮಾಲೋಚನೆ ನಡೆಸಿ ತಿಳಿದುಕೊಂಡು ಮಾತನಾಡಬೇಕು’ ಎಂದು ಮೊಯಿತ್ರಾ ಟ್ವೀಟ್‌ನಲ್ಲಿ ಹೇಳಿದ್ದರು.

ಮೊಯಿತ್ರಾ ಅವರ ಟ್ವೀಟ್‌ಗೆ ದಿನೇಶ್ ಗುಂಡೂರಾವ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ವೇಣುಗೋಪಾಲ್ ಅವರ ಉತ್ತರ ಸಾಕಾಗದಿದ್ದಲ್ಲಿ, ದೆಹಲಿಯ ಯಾವ ನಾಯಕರ ಉತ್ತರಕ್ಕೆ ಮಹುವಾ ಇನ್ನೂ ಕಾಯುತ್ತಿದ್ದಾರೆ? ಗೋವಾದಲ್ಲಿ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಿ, ಬಿಜೆಪಿ ವಿರೋಧಿ ಮತಗಳನ್ನು ಒಡೆಯುವ ಅದ್ಭುತ ಕಾರ್ಯತಂತ್ರವನ್ನು ಟಿಎಂಸಿ ಹೊಂದಿದೆ. ಇದು ಯಾರಿಗೆ ನೆರವಾಗುತ್ತದೆ ಮೊಯಿತ್ರಾ ಅವರೇ’ ಎಂದು ಶನಿವಾರ ಬೆಳಿಗ್ಗೆ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. 

ದಿನೇಶ್ ಗುಂಡೂರಾವ್‌ ಟ್ವೀಟ್‌ಗೆ ಮಧ್ಯಾಹ್ನದ ಹೊತ್ತಿಗೆ ಪ್ರತಿಕ್ರಿಯಿಸಿದ ಮಹುವಾ, ಟ್ವಿಟರ್‌ ಚರ್ಚೆಯನ್ನು ಕೊನೆಗೊಳಿಸುವ ಧಾಟಿಯಲ್ಲಿ ಮಾತನಾಡಿದ್ದಾರೆ. ‘ಬಿಜೆಪಿಯನ್ನು ಸೋಲಿಸಲು ಟಿಎಂಸಿ ಗಂಭೀರ ಯತ್ನ ಮಾಡುತ್ತಿದೆ. ಮಾಹಿತಿಯಿಲ್ಲದೆ ಸುಳ್ಳು ಹೇಳುವ ಧೈರ್ಯವು, ತರ್ಕಬದ್ಧ ಚಿಂತನೆ ಮತ್ತು ಪ್ರಬುದ್ಧತೆಗೆ ಪರ್ಯಾಯವಾಗುವುದಿಲ್ಲ. ಕಾಂಗ್ರೆಸ್‌ನ ವಿವಿಧ ನಾಯಕರ ಜೊತೆ ಮತ್ತಷ್ಟು ಟ್ವಿಟರ್ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ಇಚ್ಛೆ ಇಲ್ಲ’ ಎಂದು ಅವರು ಹೇಳಿದ್ದಾರೆ. 

ಸಾರಾಂಶ

ಪಣಜಿ: ಗೋವಾ ವಿಧಾನಸಭೆಗೆ ಫೆ.14ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಗಳ ನಡುವಿನ ಮೈತ್ರಿ ಮಾತುಕತೆ ದಾರಿ ತಪ್ಪಿದಂತೆ ತೋರುತ್ತಿದ್ದು, ಎರಡೂ ಪಕ್ಷಗಳ ಮುಖಂಡರು ಟ್ವಿಟರ್‌ನಲ್ಲಿ ವಾಕ್ಸಮರ ನಡೆಸುತ್ತಿದ್ದಾರೆ.  ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಗೋವಾ ಕಾಂಗ್ರೆಸ್ ಘಟಕದ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಳ್ಳಿಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.