ADVERTISEMENT

ಕಲ್ಲಿದ್ದಲು ಪೂರೈಕೆ ಪ್ರಮಾಣ ಹೆಚ್ಚಳ- ಬುಧವಾರ 2 ದಶಲಕ್ಷ ಟನ್‌ ಸಾಗಣೆ: ಜೋಶಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 20:56 IST
Last Updated 13 ಅಕ್ಟೋಬರ್ 2021, 20:56 IST
ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ
ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ   

ನವದೆಹಲಿ: ದೇಶದ ವಿವಿಧ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಬುಧವಾರ 2 ದಶಲಕ್ಷ ಟನ್‌ಗಿಂತಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲಾಗಿದೆ ಎಂದು ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ನ ಗಣಿಗಳೂ ಸೇರಿದಂತೆ ವಿವಿಧ ಮೂಲಗಳಿಂದ ಕಲ್ಲಿದ್ದಲು ಪೂರೈಸಲು ಕ್ರಮ ಕೈಗೊಳ್ಳಲಾಗಿದ್ದು, ಪೂರೈಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಟ್ಚೀಟ್ ಮೂಲಕ ತಿಳಿಸಿದ್ದಾರೆ.

ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಳೆದ ಎರಡು ದಿನಗಳಿಂದ ನಿತ್ಯವೂ 1.62 ಲಕ್ಷ ಟನ್ ಕಲ್ಲಿದ್ದಲು ಪೂರೈಸಲಾಗಿದ್ದು, ಮಾಸಿಕ ಸರಾಸರಿ 1.75 ಲಕ್ಷ ಟನ್‌ನಷ್ಟು ಪೂರೈಕೆ ಪ್ರಮಾಣ ಕಾಯ್ದುಕೊಳ್ಳಲಾಗಿದೆ ಎಂದು ಕೋಲ್ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ಅವರು ಹೇಳಿದ್ದಾರೆ.

ADVERTISEMENT

ವಿದ್ಯುತ್‌ ಸ್ಥಾವರಗಳ ಅಗತ್ಯಕ್ಕೆ ಅನುಗುಣವಾಗಿ ಕಲ್ಲಿದ್ದಲು ಪೂರೈಸುವ ಭರವಸೆ ನೀಡಿರುವ ಅವರು, ಮಳೆಗಾಲ ಅಂತ್ಯಗೊಳ್ಳುತ್ತಿದ್ದಂತೆಯೇ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಹೆಚ್ಚಲಿದೆ. ಪೂರೈಕೆ ಪ್ರಮಾಣವೂ ದ್ವಿಗುಣಗೊಳ್ಳುವ ಮೂಲಕ ಕೊರತೆ ನೀಗಲಿದ್ದು, ವಿದ್ಯುತ್‌ ಉತ್ಪಾದನೆ ಸರಾಗವಾಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಕೋಲ್ ಇಂಡಿಯಾದ ಗಣಿಗಳಲ್ಲಿ ಸದ್ಯ 22 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲಿನ ಸಂಗ್ರಹ ಇದೆ. ದಸರಾ ರಜೆಗೆ ತೆರಳಿರುವ ಕಾರ್ಮಿಕರು ಕೆಲಸಕ್ಕೆ ಮರಳಿದ ನಂತರ ಚಳಿಗಾಲದ ವೇಳೆಗೆ ಉತ್ಪಾದನೆ ಸಹಜವಾಗಿಯೇ ಹೆಚ್ಚಲಿದೆ. ಅಲ್ಲದೆ, ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಗುತ್ತಿಗೆ ನೀಡಲು ಮೂರನೇ ಹಂತದ ಹರಾಜು ಪ್ರಕ್ರಿಯೆ ಆರಂಭಿಸಲು ಇದು ಸಕಾಲ ಎಂದು ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಎ.ಕೆ. ಜೈನ್ ಅವರೂ ಹೇಳಿದ್ದಾರೆ.

ಸಾಧ್ಯವಾದಷ್ಟು ಬೇಡಿಕೆ ಮತ್ತು -ಪೂರೈಕೆಯಲ್ಲಿನ ಅಂತರವನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕಲ್ಲಿದ್ದಲು ಬಿಕ್ಕಟ್ಟು ಇಲ್ಲ

ದೇಶದಲ್ಲಿ ಕಲ್ಲಿದ್ದಲು ಕೊರತೆಯಾಗಿದೆ ಎಂಬ ವರದಿಗಳು ಆಧಾರರಹಿತ ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ದೇಶದಲ್ಲಿ ಕಲ್ಲಿದ್ದಲು ಸಂಗ್ರಹ ಸಾಕಷ್ಟಿದೆ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು,  ದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಿಲ್ಲ. ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ಹೇಳಿದ್ದಾರೆ.

ಕಲ್ಲಿದ್ದಲಿನ ಕೊರತೆಯಾಗುವ ಸಾಧ್ಯತೆ ಬಗ್ಗೆ ಹರಿದಾಡುತ್ತಿರುವ ಮಾಹಿತಿಯು ಸಂಪೂರ್ಣ ಆಧಾರರಹಿತ ಎಂದು ಇಂಧನ ಸಚಿವ ಆರ್‌.ಕೆ.ಸಿಂಗ್‌ ಅವರು ಎರಡು ದಿನಗಳ ಹಿಂದಷ್ಟೇ ಸ್ಪಷ್ಟಪಡಿಸಿದ್ದಾರೆ. ಯಾವುದರ ಕೊರತೆಯೂ ಇಲ್ಲ. ಸಚಿವರ ಹೇಳಿಕೆಯಂತೆ, ಪ್ರತಿಯೊಂದು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಮುಂದಿನ ನಾಲ್ಕು ದಿನಗಳಿಗೆ ಅಗತ್ಯವಾದಷ್ಟು ದಾಸ್ತಾನು ಲಭ್ಯವಿದೆ. ಪೂರೈಕೆ ಕೊಂಡಿ ಕಡಿತವಾಗಿಲ್ಲ ಎಂದು ಹೇಳಿದರು.

ಸಾರಾಂಶ

ದೇಶದ ವಿವಿಧ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಬುಧವಾರ 2 ದಶಲಕ್ಷ ಟನ್‌ಗಿಂತಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲಾಗಿದೆ ಎಂದು ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.