ADVERTISEMENT

UP Elections: ಸಿ.ಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ನವದೆಹಲಿ (ಪಿಟಿಐ):
Published 20 ಜನವರಿ 2022, 9:54 IST
Last Updated 20 ಜನವರಿ 2022, 9:54 IST
ಚಂದ್ರಶೇಖರ್‌ ಆಜಾದ್‌ ಮತ್ತು ಯೋಗಿ ಆದಿತ್ಯನಾಥ್‌
ಚಂದ್ರಶೇಖರ್‌ ಆಜಾದ್‌ ಮತ್ತು ಯೋಗಿ ಆದಿತ್ಯನಾಥ್‌    

ಲಖನೌ: ದಲಿತ ನಾಯಕ, ಆಜಾದ್‌ ಸಮಾಜ ಪಾರ್ಟಿ (ಎಎಸ್‌ಪಿ) ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಚಂದ್ರಶೇಖರ್‌ ಆಜಾದ್‌ ಅವರ ಸ್ಪರ್ಧೆ ಕುರಿತು ರಾಷ್ಟ್ರೀಯ ಕೋರ್ ಕಮಿಟಿ ಸದಸ್ಯ ಮೊಹಮ್ಮದ್ ಅಕಿಬ್ ಖಚಿತಪಡಿಸಿದ್ದು, ಪಕ್ಷದ ನೋಂದಾಯಿತ ಹೆಸರು ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಎಂದು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.  

35 ವರ್ಷದ ಚಂದ್ರಶೇಖರ್‌ ಅವರು ಭೀಮ್ ಆರ್ಮಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.  2020ರ ಮಾರ್ಚ್‌ನಲ್ಲಿ ಆಜಾದ್‌ ಸಮಾಜ ಪಾರ್ಟಿಯನ್ನು ಆರಂಭಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್‌ 7ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಗೋರಖ್‌ಪುರ ಕ್ಷೇತ್ರದಲ್ಲಿ ಮಾರ್ಚ್‌ 3ರಂದು ಮತದಾನ ನಡೆಯಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಆಜಾದ್, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದ್ದರು. ಆದರೆ, ಇದು ಫಲ ನೀಡಿಲ್ಲ.

ಬಿಜೆಪಿ ಮತ್ತು ಆರೆಎಸ್‌ಎಸ್‌ ಸಿದ್ಧಾಂತದ ವಿರುದ್ಧ ತನ್ನ ಹೋರಾಟ ಎಂದು ಆಜಾದ್‌ ಹೇಳಿದ್ದಾರೆ.

ಇತ್ತೀಚೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ್ದ ಅವರು, 'ನಾವು ಉತ್ತರ ಪ್ರದೇಶದಲ್ಲಿ ಪರ್ಯಾಯವಾಗಿ ನಿಲ್ಲುತ್ತೇವೆ (ಇತರೆ ರಾಜಕೀಯ ಪಕ್ಷಗಳಿಗೆ). ಶಾಸಕ ಮತ್ತು ಸಚಿವ ಸ್ಥಾನದ ಆಫರ್‌ಗಳನ್ನು ನಾನು ತಿರಸ್ಕರಿಸಿದ್ದೇನೆ' ಎಂದಿದ್ದರು.

'ಸಮಾಜವಾದಿ ಪಕ್ಷವು ನಮಗೆ 100 ಸ್ಥಾನಗಳನ್ನು ನೀಡಿದರೂ ಅವರೊಂದಿಗೆ ಹೋಗುವುದಿಲ್ಲ. ಬಿಜೆಪಿಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣೆಯ ನಂತರ ಇತರೆ ಪಕ್ಷಗಳಿಗೆ ನಾವು ನೆರವಾಗಬಹುದು' ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿತ್ತು.

ಸಾರಾಂಶ

ದಲಿತ ನಾಯಕ, ಆಜಾದ್‌ ಸಮಾಜ ಪಾರ್ಟಿ (ಎಎಸ್‌ಪಿ) ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.