ADVERTISEMENT

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು ʼಕುಟುಂಬ ರಕ್ಷಣಾ ಸಮಿತಿʼ ಎಂದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 15:33 IST
Last Updated 16 ಅಕ್ಟೋಬರ್ 2021, 15:33 IST
   

ನವದೆಹಲಿ: ಪಕ್ಷದ ಆಂತರಿಕ ಕಲಹ ಮತ್ತು ನಾಯಕತ್ವದ ವೈಫಲ್ಯದ ಬಗ್ಗೆ ಮಾತನಾಡದ ಕಾಂಗ್ರೆಸ್‌ ಪಕ್ಷವು ಸುಳ್ಳುಗಳನ್ನು ಹರಡುತ್ತಿದೆ. ಆ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ʼಪರಿವಾರ ಬಚಾವೋ ಕಾರ್ಯಕಾರಿ ಸಮಿತಿʼಯಂತೆ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಸೋನಿಯಾ ಗಾಂಧಿ ಅವರು ಸಿಡಬ್ಲ್ಯೂಸಿ ಸಭೆಯಲ್ಲಿ, ʼಪಕ್ಷಕ್ಕೆ ನಾನೇ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷೆʼ ಎಂದು ಹೇಳಿರುವುದರ ಬಗ್ಗೆ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಪ್ರತಿಕ್ರಿಯಿಸಿದ್ದಾರೆ. ʼಇದನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಎನ್ನುವುದಕ್ಕಿಂತಲೂ ಪರಿವಾರ ಬಚಾವೋ ಕಾರ್ಯಕಾರಿ ಸಮಿತಿ (ಕುಟುಂಬ ರಕ್ಷಣಾ ಕಾರ್ಯಕಾರಿ ಸಮಿತಿ) ಎಂದರೆ ತಪ್ಪಾಗಲಾಗದುʼ ಎಂದು ಭಾಟಿಯಾ ಹೇಳಿದ್ದಾರೆ. ಮುಂದುವರಿದು, ಸಭೆಯಲ್ಲಿ ಸೋನಿಯಾ ಗಾಂಧಿ ಅವರು, ಪಕ್ಷವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಾಂಗ್ರೆಸ್ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿನ ಜನರ ಪ್ರಶ್ನೆಗಳ ಬಗ್ಗೆ ಮಾತನಾಡಲಿಲ್ಲ ಎಂದು ದೂರಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ನಡೆದಿರುವ ದಲಿತ ವ್ಯಕ್ತಿ ಹತ್ಯೆ ಸಂಬಂಧ ಸಿಡಬ್ಲ್ಯೂಸಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ವಿರೋಧ ಪಕ್ಷವು ಹತ್ಯೆಯ ಹಿಂದೆ ಇರುವ ʼತಾಲಿಬಾನ್‌ ಮನಸ್ಥಿತಿʼಯ ಜೊತೆಗಿದೆಯೇ? ಅರಾಜಕ ಶಕ್ತಿಗಳು ರಾಜಕೀಯ ಲಾಭಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿವೆ ಎಂದು ಕಿಡಿಕಾರಿದ್ದಾರೆ.

ADVERTISEMENT

ʼವಿರೋಧ ಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ಕೀಳುಮಟ್ಟದ ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಪ್ರಮುಖ ವಿಚಾರಗಳಲ್ಲಿ ಮೌನ ವಹಿಸುತ್ತಿದೆ. ಯಾವುದೇ ವಿಚಾರವನ್ನು ನೇರವಾಗಿ ಹೇಳುವ ಧೈರ್ಯ ಅವರಿಗೆ ಇಲ್ಲ. ಏಕೆಂದರೆ ಅವರ ರಾಜಕೀಯ ನಿರೂಪಣೆಗೆ ಅದು ಸರಿಹೊಂದುವುದಿಲ್ಲʼ ಎಂದು ಕುಟುಕಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರ, ಆರ್ಥಿಕತೆ, ಕೃಷಿ ಕಾಯ್ದೆಗಳು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಮೂಲಕ ಕಾಂಗ್ರೆಸ್‌ ಸುಳ್ಳಿನ ರಾಜಕೀಯ ಮುಂದುವರಿಸಿದೆ. ಗೊಂದಲಗಳನ್ನು ಹರಡುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಹಾಗೆಯೇ, ರಾಯ್‌ ಬರೇಲಿ ಲೋಕಸಭೆ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿ ಆಯ್ಕೆಯಾಗಿರುವ ಸೋನಿಯಾ ಅವರು ಕಳೆದ 21 ತಿಂಗಳಿನಿಂದ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಆ ಮೂಲಕ ಅವರು ಸಂಸದೆಯಾಗಿಯೂ ವೈಫಲ್ಯ ಕಂಡಿದ್ದಾರೆ ಎಂದೂ ಪ್ರತಿಪಾದಿಸಿದ್ದಾರೆ.

ಸಾರಾಂಶ

ಪಕ್ಷದ ಆಂತರಿಕ ಕಲಹ ಮತ್ತು ನಾಯಕತ್ವದ ವೈಫಲ್ಯದ ಬಗ್ಗೆ ಮಾತನಾಡದ ಕಾಂಗ್ರೆಸ್‌ ಪಕ್ಷವು ಸುಳ್ಳುಗಳನ್ನು ಹರಡುತ್ತಿದೆ. ಆ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ʼಪರಿವಾರ ಬಚಾವೋ ಕಾರ್ಯಕಾರಿ ಸಮಿತಿʼಯಂತೆ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.