ADVERTISEMENT

ಕಾಶ್ಮೀರ: ಉಗ್ರರಿಂದ ಇಬ್ಬರು ವಲಸೆ ಕಾರ್ಮಿಕರ ಗುಂಡಿಕ್ಕಿ ಹತ್ಯೆ

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 17 ಅಕ್ಟೋಬರ್ 2021, 15:32 IST
Last Updated 17 ಅಕ್ಟೋಬರ್ 2021, 15:32 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಶ್ರೀನಗರ: ಕಾಶ್ಮೀರದಲ್ಲಿ ಬೇರೆ ರಾಜ್ಯಗಳಿಂದ ಬಂದವರ ಮೇಲಿನ ದಾಳಿ ಮುಂದುವರಿದ್ದು, ಭಾನುವಾರ ಕುಲ್ಗಾಂನಲ್ಲಿ ಅಪರಿಚಿತ ಉಗ್ರರು ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಕುಲ್ಗಾಂನ ವಾನ್‌ಪೊಹ್‌ನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಉಗ್ರರು ಅಲ್ಲಿದ್ದ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಕುಲ್ಗಾಂನ ವಾನ್‌ಪೊಹ್‌ನಲ್ಲಿ ವಲಸೆ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳವನ್ನು ಸುತ್ತುವರಿದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮೃತ ಕಾರ್ಮಿಕರನ್ನು ಬಿಹಾರದ ರಾಜ ದೇವ್ ಮತ್ತು ಚುನ್ ಚುನ್ ದೇವ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಜೋಗಿನರ್ ದೇವ್ ಎಂದು ಗುರುತಿಸಲಾಗಿದ್ದು, ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರವಷ್ಟೇ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಅರವಿಂದ ಕುಮಾರ್ ಹಾಗೂ ಉತ್ತರ ಪ್ರದೇಶದ ಮೂಲದ ಬಡಗಿ ಸಘೀರ್ ಅಹ್ಮದ್ ಎಂಬವರನ್ನು ಶ್ರೀನಗರ ಮತ್ತು ಅನಂತ್‌ನಾಗ್‌ನಲ್ಲಿ ಉಗ್ರರು ಹತ್ಯೆ ಮಾಡಿದ್ದರು ಎಂದು ವರದಿ ಉಲ್ಲೇಖಿಸಿದೆ.

ಈ ಹಿಂದೆ ಅಕ್ಟೋಬರ್ 5ರಂದು ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

ಸಾರಾಂಶ

ಕಾಶ್ಮೀರದಲ್ಲಿ ಬೇರೆ ರಾಜ್ಯಗಳಿಂದ ಬಂದವರ ಮೇಲಿನ ದಾಳಿ ಮುಂದುವರಿದ್ದು, ಭಾನುವಾರ ಕುಲ್ಗಾಂನಲ್ಲಿ ಅಪರಿಚಿತ ಉಗ್ರರು ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.