ಶ್ರೀನಗರ: ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್‌ರ ಮಾಜಿ ಸಲಹೆಗಾರ ಬಶೀರ್ ಅಹ್ಮದ್ ಖಾನ್ ಸೇರಿ 14 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಇಬ್ಬರು ಹಾಲಿ ಐಎಎಸ್ ಅಧಿಕಾರಿಗಳ ನಿವಾಸದ ಮೇಲೂ ದಾಳಿ ನಡೆದಿದೆ. ಈ ಹಿಂದೆ, ನಕಲಿ ಮತ್ತು ತಿರುಚಲಾಗಿದ್ದ ದಾಖಲೆಗಳನ್ನು ಆಧರಿಸಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ ಎಂಬ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.
ಸಿಬಿಐ ವಕ್ತಾರರ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್, ಬನಿಹಾಲ್, ಬಾರಾಮುಲ್ಲಾ, ಜಮ್ಮು, ಕಿಶ್ತ್‌ವಾರ್ ಹಾಗೂ ಲೆಹ್, ದೆಹಲಿ ಮತ್ತು ಮಧ್ಯಪ್ರದೇಶದ ಭಿಂಡ್ ಸೇರಿದಂತೆ ಒಟ್ಟು 41 ಕಡೆ ಏಕಕಾಲದಲ್ಲಿ ದಾಳಿ ನಡೆಯಿತು.
2012 ರಿಂದ 2016ರ ಅವಧಿಯಲ್ಲಿ ಸಗಟು ರೂಪದಲ್ಲಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ ಎಂಬುದರ ಸಂಬಂಧ ಜಮ್ಮು ಮತ್ತು ಕಾಶ್ಮಿರ ಸರ್ಕಾರವು, ಎರಡು ಪ್ರತ್ಯೇಕ ದೂರನ್ನು ಸಿಬಿಐನಲ್ಲಿ ದಾಖಲಿಸಿತ್ತು.
ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸುಮಾರು 22 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅರ್ಹರಲ್ಲದವರಿಗೂ ಸೇರಿದಂತೆ ಸುಮಾರು 2.78 ಲಕ್ಷದಷ್ಟು ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು.
ಒಟ್ಟು 14 ಮಂದಿ ಹಾಲಿ ಮತ್ತು ನಿವೃತ್ತ ಐಎಎಸ್ ಹಾಗೂ ಕಾಶ್ಮೀರ ಆಡಳಿತ ಸೇವೆಯ (ಕೆಎಎಸ್) ಅಧಿಕೃತ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆದಿದೆ. ಇವರುಗಳು ಈ ಹಿಂದೆ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.
ಅಲ್ಲದೆ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಲಾಗಿರುವ ಐವರು ಖಾಸಗಿಯವರು, ಏಜೆಂಟರು ಹಾಗೂ 10 ಮಂದಿ ಗನ್ ಹೌಸ್ ಆಥವಾ ವಿತರಕರಿಗೆ ಸೇರಿದ ಮನೆಗಳ ಮೇಲೂ ದಾಳಿ ನಡೆಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಪರವಾನಗಿ ವಿತರಣೆಗೆ ಸಂಬಂಧಿಸಿದ ದಾಖಲೆಗಳು, ಫಲಾನುಭವಿಗಳ ಪಟ್ಟಿ, ಹೂಡಿಕೆ ಹಾಗೂ ನಿಶ್ಚಿತ ಠೇವಣಿಗಳಿಗೆ ಸಂಬಂಧಿಸಿದ ದಾಖಲೆಗಳು, ಕ್ರಯಪತ್ರಗಳು ಲಭ್ಯವಾಗಿದ್ದು ವಶಕ್ಕೆ ಪಡೆಯಲಾಗಿದೆ.
ಶಸ್ತ್ರಾಸ್ತ್ರ ಪರವಾನಗಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮ್ಮು–ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಮಾಜಿ ಸಲಹೆಗಾರ ಬಸೀರ್ ಖಾನ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.