ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಮರಳಿ ಹಳಿಗೆ ತರಲು ಹೊರಟಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಈಚಿನ ದಿನಗಳಲ್ಲಿ ಪಕ್ಷವು ಸದಾ ಸುದ್ದಿಯಲ್ಲಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ವಿರೋಧ ಪಕ್ಷಗಳಲ್ಲೂ ನಡುಕ ಹುಟ್ಟಿಸಿದ್ದಾರೆ.
ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ತಲೆದೋರಿದ ಎಲ್ಲಾ ಪ್ರಮುಖ ಘಟನೆಗಳು ಮತ್ತು ಸಮಸ್ಯೆಗಳಲ್ಲೂ ಇತರ ವಿರೋಧ ಪಕ್ಷಗಳನ್ನು ಹಿಂದಿಕ್ಕಿ, ಕಾಂಗ್ರೆಸ್ ಜನರ ಬಳಿಗೆ ತಲುಪುವಂತೆ ಮಾಡುವಲ್ಲಿ ಪ್ರಿಯಾಂಕಾ ಯಶಸ್ವಿಯಾಗಿದ್ದಾರೆ. ಆದರೆ ವಿರೋಧ ಪಕ್ಷಗಳಲ್ಲಿ ಈ ಚುರುಕುತನ ಕಾಣಿಸುತ್ತಿಲ್ಲ. ಬದಲಿಗೆ ಅವು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ನೆರವಾಗುತ್ತಿವೆ ಎಂದು ಟೀಕಿಸುತ್ತಿವೆ.
2019ರಲ್ಲಿ ಸೋನೆಭದ್ರಾ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ 10 ಜನರ ಹತ್ಯೆಯಾದಾಗ, ಮೊದಲು ಅಲ್ಲಿಗೆ ತಲುಪಿದ ರಾಜಕೀಯ ನಾಯಕಿ ಎಂದರೆ ಪ್ರಿಯಾಂಕಾ ಗಾಂಧಿ. 2020ರಲ್ಲಿ ಹಾಥರಸ್‌ನಲ್ಲಿ ದಲಿತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ, ಸಂತ್ರಸ್ತ ಕುಟುಂಬವನ್ನು ಮೊದಲು ಭೇಟಿ ಮಾಡಿದ್ದೂ ಪ್ರಿಯಾಂಕಾ ಗಾಂಧಿ. ಎರಡೂ ಘಟನೆಗಳಲ್ಲಿ ಅವರು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡದಂತೆ ಉತ್ತರ ಪ್ರದೇಶ ಪೊಲೀಸರು ತಡೆದಿದ್ದರು. ಅವೆಲ್ಲವನ್ನೂ ಮೀರಿ, ಪೊಲೀಸರೊಂದಿಗೆ ಜಟಾಪಟಿಗೆ ಇಳಿದು ಪ್ರಿಯಾಂಕಾ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದರು.
ಈಗಲೂ ಲಖಿಂಪುರ-ಖೇರಿ ರೈತರ ಹತ್ಯೆ ಘಟನೆಯಲ್ಲೂ ಎಲ್ಲಾ ವಿರೋಧ ಪಕ್ಷಗಳನ್ನು ಹಿಂದಿಕ್ಕಿ, ಪ್ರಿಯಾಂಕಾ ಅವರು ಕಾಂಗ್ರೆಸ್ ಅನ್ನು ಮುನ್ನೆಲೆಗೆ ತಂದಿದ್ದಾರೆ. ಹಿಂಸಾಚಾರ ನಡೆದ ರಾತ್ರಿಯೇ ಲಖಿಂಪುರ-ಖೇರಿಗೆ ಭೇಟಿ ನೀಡಲು ಪ್ರಿಯಾಂಕಾ ಹೊರಟಿದ್ದರು. ಆದರೆ, ಲಖನೌನಲ್ಲೇ ಅವರನ್ನು ಪೊಲೀಸರು ತಡೆದರು. ಅದನ್ನು ಮೀರಿ, ಅವರು ಹತ್ಯೆ ನಡೆದ ಸ್ಥಳದವರೆಗೂ ತಲುಪಿದ್ದರು. ಸ್ಥಳದಿಂದ ಕೇವಲ 3 ಕಿ.ಮೀ. ದೂರದಲ್ಲಿದ್ದಾಗ ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದರು. ತಮ್ಮ ಬಂಧನವನ್ನು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ ಅವರ ವಿಡಿಯೊ ಸಹ ವೈರಲ್ ಆಗಿತ್ತು. ಬಿಡುಗಡೆಯಾದ ತಕ್ಷಣವೇ ಪ್ರಿಯಾಂಕಾ ಗಾಂಧಿ ಅವರು ಮೃತ ರೈತರ ಕುಟುಂಬದವರನ್ನು ಭೇಟಿಯಾದರು.
ಆದರೆ ಬೇರೆ ಯಾವುದೇ ವಿರೋಧ ಪಕ್ಷವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಧೈರ್ಯ ತೋರಲಿಲ್ಲ. ಲಖಿಂಪುರ-ಖೇರಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೊಲೀಸರು ನೋಟಿಸ್ ನೀಡಿದ ಕಾರಣ, ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಿಶ್ರಾ ಅವರು ಲಖಿಂಪುರ-ಖೇರಿ ಭೇಟಿಯನ್ನೇ ರದ್ದುಪಡಿಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಮನೆಯಿಂದ ಹೊರಬರಲೂ ಸಾಧ್ಯವಾಗಲಿಲ್ಲ.
ಆದರೆ ಪ್ರಿಯಾಂಕಾ ಅವರು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಖನೌನಲ್ಲಿ ಮೌನವ್ರತ ಆಚರಿಸಿದರು. ಮೃತ ರೈತರ ಅಂತಿಮ ಸಂಸ್ಕಾರದ ವೇಳೆಯೂ ಅವರ ಕುಟುಂದ ಜತೆಯಲ್ಲಿದ್ದರು.
ಬಿಜೆಪಿಗೆ ಅನುಕೂಲದ ಆರೋಪ
ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಹೆಚ್ಚು ಸುದ್ದಿಯಲ್ಲಿರುವಂತೆ ಬಿಜೆಪಿ ನೋಡಿಕೊಳ್ಳುತ್ತಿದೆ. ಈ ಮೂಲಕ ಬಿಜೆಪಿ ವಿರೋಧ ಮತಗಳು ಹಲವು ಪಕ್ಷಗಳಲ್ಲಿ ಹಂಚಿಹೋಗುವಂತೆ ಬಿಜೆಪಿ ತಂತ್ರ ರೂಪಿಸುತ್ತಿದೆ. ಅಂತಿಮವಾಗಿ ಇದರಿಂದ ಬಿಜೆಪಿಗೇ ಅನುಕೂಲವಾಗುತ್ತದೆ ಎಂದು ಸಮಾಜವಾದಿ ಪಕ್ಷದ ಹಲವು ನಾಯಕರು ಆರೋಪಿಸಿದ್ದಾರೆ.
ಆದರೆ ಇದನ್ನು ಕಾಂಗ್ರೆಸ್ ನಿರಾಕರಿಸಿದೆ. ‘ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಅನ್ನು ಮುನ್ನೆಲೆಗೆ ತಂದಿದ್ದಾರೆ. ಇದನ್ನು ನೋಡಿ ಬೇರೆ ವಿರೋಧ ಪಕ್ಷಗಳಲ್ಲಿ ತಳಮಳ ಶುರುವಾಗಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಮರಳಿ ಹಳಿಗೆ ತರಲು ಹೊರಟಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಈಚಿನ ದಿನಗಳಲ್ಲಿ ಪಕ್ಷವು ಸದಾ ಸುದ್ದಿಯಲ್ಲಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ವಿರೋಧ ಪಕ್ಷಗಳಲ್ಲೂ ನಡುಕ ಹುಟ್ಟಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.