ಕ್ವಾಲಾಲಂಪುರ (ಪಿಟಿಐ): ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಗೆಲುವಿನೊಡನೆ ಅಭಿಯಾನ ಆರಂಭಿಸಿದರು. ಆದರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಎಚ್.ಎಸ್. ಪ್ರಣಯ್ ಮೊದಲ ಸುತ್ತನ್ನು ದಾಟಲಾಗಲಿಲ್ಲ.
ವಿಶ್ವದ ಎರಡನೆ ನಂಬರ್ ಜೋಡಿಯಾದ ಸಾತ್ವಿಕ್– ಚಿರಾಗ್ ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಮುಹಮ್ಮದ್ ಶೊಹಿಬುಲ್ ಫಿಕ್ರಿ– ಮೌಲಾನಾ ಬಗಾಸ್ ಅವರಿಂದ ಹೋರಾಟ ಎದುರಿಸಿದರೂ ಅಂತಿಮವಾಗಿ 21–18, 21–19 ರಲ್ಲಿ ನೇರ ಆಟಗಳಿಂದ ಪಂದ್ಯ ಗೆದ್ದರು. ಫಿಕ್ರಿ– ಬಗಾಸ್ ಅವರು ವಿಶ್ವಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಇನ್ನೊಂದೆಡೆ ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಪ್ರಣಯ್ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಅಂಟೊನ್ಸೆನ್ ಎದುರು 14–21, 11–21ರಲ್ಲಿ ಸೋಲನುಭವಿಸಿದರು. ಅಂಟೊನ್ಸೆನ್ ಪ್ರಣಯ್ ಅವರಿಗಿಂತ ಒಂದು ಕ್ರಮಾಂಕ ಕೆಳಗಿದ್ದಾರೆ.
ಕಳೆದ ವರ್ಷ ಹಾಂಗ್‌ಝೌನದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಜೊತೆ, ಇಂಡೊನೇಷ್ಯಾ 1000 ಟೂರ್ನಿ ಕಿರೀಟ, ಕೊರಿಯಾ ಓಪನ್ 500 ಟೂರ್ನಿ, ಸ್ವಿಸ್ ಸೂಪರ್ ಓಪನ್ ಟೂರ್ನಿಗಳಲ್ಲಿ ಜಯಶಾಲಿಯಾಗಿದ್ದ ಸಾತ್ವಿಕ್–ಚಿರಾಗ್ ಅಲ್ಪಾವಧಿಗೆ ಅಗ್ರಕ್ರಮಾಂಕಕ್ಕೆ ಏರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.