ಪ್ರಜಾವಾಣಿ ವಾರ್ತೆ
ಉಪ್ಪಿನಬೆಟಗೇರಿ: ‘ಮನುಷ್ಯ ಅಧರ್ಮದಿಂದ ಬಾಳಿದರೆ ವಿನಾಶದತ್ತ ಸಾಗುತ್ತಾನೆ. ಹೀಗಾಗಿ ಧರ್ಮ, ಸಂಸ್ಕೃತಿ, ಸಂಸ್ಕಾರದಿಂದಲೇ ಮನುಕುಲವು ಶ್ರೇಷ್ಠವಾಗಲು ಸಾಧ್ಯ’ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನದ ಮಂಗಲ ಕಾರ್ಯಕ್ರಮದಲ್ಲಿ ಸೋಮವಾರ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಭಾರತೀಯರು ನಮ್ಮ ನೆಲದ ಸಂಸ್ಕೃತಿ-ಸಂಸ್ಕಾರಗಳೊಂದಿಗೇ ಬದುಕಿ ಅಧ್ಯಾತ್ಮದ ಅನುಸಂಧಾನದಲ್ಲಿ ಹಿರಿಮೆ ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವವೇ ಭಾರತದತ್ತ ಮುಖಮಾಡುವಂತಾಗಿದೆ’ ಎಂದು ಹೇಳಿದರು.
ಪುರಾಣ ಪ್ರವಚನ ನೀಡಿದ ಕಲಬುರಗಿ ಜಿಲ್ಲೆ ಸೂಗೂರು ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಿ ಗುರುಕಾಣಿಕೆ ಸಮರ್ಪಿಸಿದರು. ಇನಾಂಹೊಂಗಲ ವಿರಕ್ತಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಇದ್ದರು. ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಧಾರವಾಡದ ಎಲುವು-ಕೀಲು ತಜ್ಞ ಡಾ.ಸತೀಶ ಇರಕಲ್ಲ, ಬಳ್ಳೂರಿನ ಶಂಕರಗೌಡ ಫಕ್ಕೀರಗೌಡ್ರ, ಪತ್ರಕರ್ತ ಪ್ರಶಾಂತ ರಾಜಗುರು, ಚೆನ್ನಮ್ಮ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ವೀರೇಶಕುಮಾರ ಮಳಲಿ ಹಾಗೂ ಮಡಿವಾಳಯ್ಯ ಶಹಪೂರಮಠ ಸಂಗೀತ ಸೇವೆ ನೀಡಿದರು. ಸಿಂಚನಾ ಯಡಳ್ಳಿ ಭರತನಾಟ್ಯ ಪ್ರಸ್ತುತ ಪಡಿಸಿದರು. ಅನ್ನಸಂತರ್ಪಣೆ ನಡೆಯಿತು. ವಿಜಯಾನಂದ ಇಟಗಿ, ಗುರುಮೂರ್ತಿ ಯರಗಂಬಳಿಮಠ ಕಾರ್ಯಕ್ರಮ ನಿರ್ವಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.