ADVERTISEMENT

ಆರೋಗ್ಯ: ಕಣ್ಣಿನ ಕಡೆಗೆ ಗಮನ ಇರಲಿ

ಡಾ.ವಿಜಯಲಕ್ಷ್ಮಿ ಪಿ.
Published 17 ಜನವರಿ 2022, 19:30 IST
Last Updated 17 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಗ ನಾವು ನಮ್ಮ ಕಣ್ಣುಗಳನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದೇವೆ. ಮೊಬೈಲನ್ನು ಪದೇ ಪದೇ ನೋಡುತ್ತಿರುವುದು, ಹತ್ತಿರ ಹಿಡಿದು ನೋಡುವುದು, ಮಲಗಿ ನೋಡುವುದು, ಕತ್ತಲಲ್ಲಿ ಎಂದರೆ ಮುಸುಕು ಹಾಕಿಕೊಂಡು ಮೊಬೈಲಿನ ಬೆಳಕಿನಲ್ಲೇ ನೋಡುವುದು, ಚಲನಚಿತ್ರಗಳ ನಿರಂತರ ವೀಕ್ಷಣೆ, ಅತಿಯಾದ ಅಂತರ್ಜಾಲದ ಉಪಯೋಗಗಳು, ಮೊಬೈಲ್– ಕಂಪ್ಯೂಟರ್‌ ಗೇಮ್‌ಗಳ ಗೀಳು – ಇವು ಕಣ್ಣಿನ ನರಮಂಡಲಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಅತಿಯಾದ ಬಣ್ಣದ ಬೆಳಕು ಕಣ್ಣಿಗೆ ಪ್ರತಿಫಲಿಸುವುದರಿಂದ ಕಣ್ಣಿನಲ್ಲಿರುವ ಬಣ್ಣಗ್ರಾಹಕ ಅಂಶಗಳ ಮೇಲೂ ದುಷ್ಪರಿಣಾಮವಾಗುತ್ತದೆ. ಇದು ಮನುಷ್ಯನ್ನು ಮಾನಸಿಕವಾಗಿಯೂ ಕುಗ್ಗುವಂತೆ ಮಾಡುತ್ತದೆ. ಕಣ್ಣಿನ ನರಮಂಡಲಗಳ ವಿಕೃತಿ ಉಂಟಾಗಿ ಕಣ್ಣಿನ ರೆಪ್ಪೆಗಳ ಪಕ್ಷಾಘಾತಕ್ಕೂ, ಅರ್ಧಾಂಗ ಪಕ್ಷಾಘಾತಕ್ಕೂ, ಕಾರಣವಾಗಬಹುದು; ರೆಟಿನಾದ ಉರಿಯೂತಕ್ಕೂ ಕಾರಣವಾಗುತ್ತದೆ.

ವರ್ಕ್‌ ಫ್ರಂ ಹೋಮ್‌ಗಳು ಹೆಚ್ಚಾಗಿರುವುದರಿಂದ, ಮಲಗಿಕೊಂಡೇ ಹೊಟ್ಟೆಯ ಮೇಲೆ ಲ್ಯಾಪ್ ಟಾಪ್‌ಗಳನ್ನು ಇಟ್ಟುಕೊಂಡು ಕೆಲಸ ಮಾಡುವ ವಾಡಿಕೆಯೂ ಶುರುವಾಗಿದೆ. ಇದು ಜೀರ್ಣಶಕ್ತಿಯ ವಿಕೃತಿಗೂ, ಮನಸ್ಸು ಮತ್ತು ಕಣ್ಣಿನ ವಿಕೃತಿಗೂ ಕಾರಣವಾಗುತ್ತದೆ. ಇದು ನರಗಳ ಮೇಲೂ, ಮನಸ್ಸಿನ ಮೇಲೂ ವಿಪರೀತ ಪರಿಣಾಮ ಬೀರುವುದರಿಂದ ಏಕಾಂಗಿತನ, ನಿರಾಸಕ್ತಿಗಳು ಮೂಡಿ ಜೀವನವೂ ಅಸ್ತವ್ಯಸ್ತವಾಗುತ್ತದೆ. ಮನಸ್ಸು ಸರಿ ತಪ್ಪುಗಳನ್ನು ವಿವೇಚನೆಯನ್ನು ಕಳೆದುಕೊಳ್ಳುತ್ತದೆ. ಮೆದುಳಿಗೆ ರಕ್ತಚಲನೆ ಕಡಿಮೆಯಾಗಿ 40 ವರ್ಷಕ್ಕೇ 60 ವರ್ಷಗಳ ಬದಲಾವಣೆ ಬರುತ್ತದೆ. ವಿಪರೀತ ಬೆಳಕಿನ ಚಲನೆ ಇರುವ ಗಾಢವಾದ ಬೆಳಕಿರುವ ಆಟಗಳನ್ನು, ಪ್ರದರ್ಶನಗಳನ್ನು ನೊಡದಿರುವದೇ ಇದಕ್ಕೆ ಪರಿಹಾರ.

ಟಿ.ವಿ., ಕಂಪ್ಯೂಟರ್‌ಗಳ ಬೆಳಕಿನಿಂದ ಕಣ್ಣಿಗೆ ತೊಂದರೆಯಾಗದಂತಿರಲು, ಅವುಗಳ ಪರದೆಯಿಂದ ದೂರ ಕುಳಿತುಕೊಳ್ಳಬೇಕು. ಪರದೆಯ ಬೆಳಕಿನ ಪ್ರತಿಫಲನ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಪ್ರತಿಫಲನವನ್ನು ತಡೆಯುವ ಕನ್ನಡಕಗಳನ್ನು ಹಾಕಿಕೊಳ್ಳಬಹುದು. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕಣ್ಣಿನ ತೊಂದರೆಯ ಜೊತೆಗೆ ಅಲ್ಲಿರುವ ಹವಾನಿಯಂತ್ರಣದಿಂದಾಗಿ ಅಮ್ಲಜನಕದ ಪ್ರಮಾಣ ದಿನದ ಕೊನೆಗೆ ಕಡಿಮೆಯಾಗಿರುತ್ತದೆ; ಇದರಿಂದ ಹೃದಯ, ಮೆದುಳು ಮತ್ತು ಉಸಿರಾಟದ ತೊಂದರೆಗಳೂ ಉಂಟಾಗುತ್ತವೆ; ರಸಗ್ರಂಥಿಗಳ ಸ್ರಾವಗಳಲ್ಲಿಯೂ ವ್ಯತ್ಯಾಸವಾಗುತ್ತದೆ. ಆದ್ದರಿಂದ ಕೆಲಸದ ಮಧ್ಯೆ ಆಗಾಗ ಶುದ್ಧಗಾಳಿಯ ಸೇವನೆ, ಪ್ರಾಣಾಯಾಮದ ಅಭ್ಯಾಸಗಳು ಅಮ್ಲಜನಕದ ಕೊರತೆಯನ್ನು ನೀಗಿಸುತ್ತವೆ; ನರಗಳ, ರಸಗ್ರಂಥಿಗಳ ಹಾಗೂ ಮನಸ್ಸಿನ ಕಾರ್ಯಕ್ಷಮತೆಯನ್ನೂ ಹೆಚ್ಚಿಸುತ್ತವೆ.

ADVERTISEMENT

ಹಿಂದೆ ಒಂದು ಮಾತಿತ್ತು: ‘ಸೂರ್ಯನನ್ನು ದಿಟ್ಟಿಸಿ ನೋಡಿದರೆ ಕಣ್ಣು ಇಂಗಿ’.  ಕಣ್ಣಿನಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ ಎಂದು ಇದರರ್ಥ. ಇದನ್ನೆ ಇಂದು ‘ಡ್ರೈ ಐಸ್’ ಎಂದು ಕರೆಯುವುದು. ಇದಕ್ಕೆ ಕೇವಲ ಸೂರ್ಯನ ಬೆಳಕನ್ನು ನೋಡುವುದು ಅಷ್ಟೇ ಅಲ್ಲ, ಯಾವುದೇ ರೀತಿಯ ಬೆಳಕಿನ ಮೂಲಗಳ – ಎಂದರೆ ಮೊಬೈಲ್, ಕಂಪ್ಯೂಟರ್, ಟಿ.ವಿ.ಯ ನಿರಂತರ ವೀಕ್ಷಣೆ – ಇದೇ ಪರಿಣಾಮವನ್ನು ಬೀರುತ್ತದೆ. ಇಂದು ಈ ವಸ್ತುಗಳಿಲ್ಲದೆ ಜೀವನವೇ ಸಾಧ್ಯವಿಲ್ಲ ಎನ್ನುವ ಹಂತಕ್ಕೆ ತಲುಪಿದ್ದೇವೆ. ಅದರಲ್ಲೂ ಕೋವಿಡ್‌ನಿಂದಾಗಿ ವ್ಯಾಯಾಮವೂ ಇಲ್ಲದೆ, ಮನೆಯಲ್ಲೇ ಕುಳಿತು ಕೆಲಸಮಾಡುವುದು, ಪಾಠ ಕೇಳುವುದು, ಅಂತರ್ಜಾಲದ ಅಧಿಕ ಬಳಕೆ ಕೂಡ ಕಣ್ಣಿನ ತೇವಾಂಶವನ್ನು ಕಡಿಮೆ ಮಾಡಿ ಕಣ್ಣನ್ನು ಒಣಗಿಸುತ್ತದೆ. ಇದರಿಂದ ಅರೆ ತಲೆನೋವು ಕಣ್ಣುರಿ ಕಣ್ಣುನೋವಲ್ಲದೆ, ಮನೋರೋಗಗಳು, ನರಸಂಬಂಧಿರೋಗಗಳೂ ಬರಬಹುದು. ಇಂಥ ತೊಂದರೆಗಳಿಂದ ತಪ್ಪಿಸಿಕೊಳ್ಳಲು, ನಿತ್ಯವೂ ಕಣ್ಣಿಗೆ ಔಷಧಿಯಿಂದ ತಯಾರಿಸಿದ ಕಾಡಿಗೆ ಅಥವಾ ಸುರಮಾ ಹಚ್ಚುವುದು, ಗುಲಾಬಿಜಲ (ರೋಸ್ ವಾಟರ್) ಹಾಕುವುದು, ಕಣ್ಣನ್ನು ತ್ರಿಫಲಾ ಕಷಾಯದಿಂದ ತೊಳೆಯುವುದು, ಹತ್ತಿ ಅಥವಾ ಹತ್ತಿಬಟ್ಟೆಯನ್ನು ತುಪ್ಪದಲ್ಲಿ ನೆನೆಸಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣುಗಳನ್ನು ಒಣಗುವುದರಿಂದ ತಪ್ಪಿಸಬಹುದು. ಕಣ್ಣಿಗೆ ಸಂಬಂಧಿಸಿದ ಅನೇಕ ವ್ಯಾಯಾಮಗಳನ್ನು ಮಾಡುವುದರಿಂದ ಕಣ್ಣಿನ ಸ್ನಾಯುಗಳು ಮತ್ತು ಮಾಂಸಖಂಡಗಳು ಬಲಗೊಳ್ಳುತ್ತವೆ.

ಸಾರಾಂಶ

ಈಗ ನಾವು ನಮ್ಮ ಕಣ್ಣುಗಳನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದೇವೆ. ಮೊಬೈಲನ್ನು ಪದೇ ಪದೇ ನೋಡುತ್ತಿರುವುದು, ಹತ್ತಿರ ಹಿಡಿದು ನೋಡುವುದು, ಮಲಗಿ ನೋಡುವುದು, ಕತ್ತಲಲ್ಲಿ ಎಂದರೆ ಮುಸುಕು ಹಾಕಿಕೊಂಡು ಮೊಬೈಲಿನ ಬೆಳಕಿನಲ್ಲೇ ನೋಡುವುದು, ಚಲನಚಿತ್ರಗಳ ನಿರಂತರ ವೀಕ್ಷಣೆ, ಅತಿಯಾದ ಅಂತರ್ಜಾಲದ ಉಪಯೋಗಗಳು, ಮೊಬೈಲ್– ಕಂಪ್ಯೂಟರ್‌ ಗೇಮ್‌ಗಳ ಗೀಳು – ಇವು ಕಣ್ಣಿನ ನರಮಂಡಲಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.