ADVERTISEMENT

ಆರೋಗ್ಯ: ಮಾದಕವಸ್ತುಗಳ ಸಹವಾಸ ಬೇಡ

ಡಾ.ಎ.ಶ್ರೀಧರ
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸದ್ಯದ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳಿರುವ ಪೋಷಕರು, ಅದರಲ್ಲಿಯೂ ಹೆಚ್ಚಾಗಿ ಅತಿ ದೊಡ್ಡ ನಗರಗಳ ವಾಸಿಗರಲ್ಲಿ ಕಾಡುವ ಪ್ರಶ್ನೆ ಎಂದರೇ ತಮ್ಮ ಮಕ್ಕಳು ‘ಡ್ರಗ್ಸ್‌’ ತೆಗೆದುಕೊಳ್ಳುತ್ತಿರಬಹುದೇ ಎನ್ನುವುದು. ಇಂತಹದೊಂದು ಪ್ರಶ್ನೆ ಮೂಡುವುದಕ್ಕೆ ಅತಿ ಮುಖ್ಯ ಕಾರಣವೆಂದರೆ ಮಾದಕವಸ್ತುಗಳನ್ನು ಸೇವಿಸುವವರ ಬಗ್ಗೆ ಹೊರಬೀಳುತ್ತಿರುವ ಸುದ್ದಿಗಳು. ಮದ್ಯ ಮತ್ತು ಮಾದಕವಸ್ತುಗಳ ಚಟ ಬಹಳ ಹಳೆಯ ವ್ಯಸನವಾಗಿದ್ದು ಇದರಿಂದ ಪಾರಾಗುವುದಕ್ಕೆ ವೈದ್ಯಕೀಯ, ನಾಟಿ ಪದ್ಧತಿಗಳ ಚಿಕಿತ್ಸೆ ಅಥವಾ ಪರಿಹಾರದ ಕ್ರಮಗಳೂ ಇವೆ. ಆದರೂ ಕೂಡ ಈ ವ್ಯಸನದಿಂದ ಸಂಪೂರ್ಣವಾಗಿ ಹೊರಬಂದವರು ವಿರಳ. ಈ ಕಾರಣದಿಂದಲೇ ಇದನ್ನು ಮಾನಸಿಕ ಅಸ್ವಸ್ಥತೆ (ತೀವ್ರಸ್ವರೂಪದ ಅಸಹಾಯಕತೆ) ಎಂಬುದಾಗಿ ಪರಿಗಣಿಸಲಾಗುತ್ತದೆ.

ಮಾದಕವಸ್ತುಗಳ ಸೇವನೆಯಿಂದ ಆರೋಗ್ಯಹಾನಿ, ಮಾನಮಾರ್ಯದೆ ಹಾನಿ, ಇತರರಿಗೆ ತೊಂದರೆ ಮತ್ತು ಅಪರಾಧದ ಕಾರ್ಯಗಳು ನಡೆಯುವುದು ವ್ಯಸನಿಗಳಿಗೆ ಗೊತ್ತಿರುತ್ತದೆ; ಆದರೆ ಅವರಿಗೆ ಚಟದಿಂದ ಮುಕ್ತರಾಗಲು ಸಾಧ್ಯವಾಗದು. ಅಷ್ಟೇ ಅಲ್ಲದೆ, ನಿಜವಾಗಿಯೂ ಈ ವಸ್ತುಗಳ ಸೇವನೆಯಿಂದ ಶರೀರಕ್ಕಾಗಲೀ, ಮನಸ್ಸಿಗಾಗಲೀ ಹಿತ, ಹುರುಪು, ಹರುಷ ಬರುವುದು ಗ್ಯಾರಂಟಿಯಲ್ಲ. ಆದರೂ ತಕ್ಷಣದಲ್ಲಿ ಸೇವಸಲೇಬೇಕೆಂಬ ಒತ್ತಡ ಈ ಚಟಕ್ಕೆ ಬಲಿಯಾದವರಲ್ಲಿ ಕಂಡುಬರುತ್ತವೆ.

ಹೊರಬರುವ ಪರಿ
ಕೆಲವರು ಮಾದಕ ವ್ಯಸನಿಗಳು ಯಾವುದೇ ವೈದ್ಯಕೀಯ ಚಿಕಿತ್ಸಾ ಕ್ರಮಗಳಿಗೆ ಒಳಗಾಗದೇ ಅಭ್ಯಾಸವನ್ನು ತೊರೆದಿರುವುದರ ನಿದರ್ಶನಗಳಿವೆ. ವ್ಯಕ್ತಿಗಳು ತಮ್ಮ ವರ್ತನೆಗಳತ್ತ ಹೆಚ್ಚು ನಿಗಾ ವಹಿಸಿದಾಗ ಮದ್ಯ ಅಥವಾ ಮಾದಕ ವ್ಯಸನವನ್ನು ದೂರಸರಿಸುವ ವ್ಯಕ್ತಿ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚು. ಇಂತಹ ಪ್ರಯತ್ನಗಳಲ್ಲಿ ಆತ್ಮೀಯರ ಪಾತ್ರ ಮಹತ್ವದ್ದು. ಗೆಳೆತನ, ಆತ್ಮೀಯ ಸಂಬಂಧಗಳು ಮೂಡಿಸುವ ನೆಮ್ಮದಿ, ಗಾಢವಾದ ನಂಬಿಕೆಗಳು, ಆತ್ಮವಿಶ್ವಾಸ, ಆದರದ ಭಾವಗಳನ್ನು ಬಲಪಡಿಸುತ್ತದೆ. ಇದರಿಂದಾಗಿ ಆತ್ಮವಿಮರ್ಶೆಗೂ ಉತ್ತೇಜನ ದೊರೆಯುತ್ತದೆ.  ಮದ್ಯ ಅಥವಾ ಮಾದಕ ವಸ್ತುಗಳ ಸೇವನೆಯ ಸಮಯ, ಸಂಗಡಿಗರು, ಸನ್ನಿವೇಶಗಳಿಂದ ಸಂಪೂರ್ಣವಾಗಿ ದೂರಸರಿಯುವ ಪ್ರಯತ್ನಗಳು ಸತತವಾಗಿರಬೇಕು. ಮಾದಕವಸ್ತುಗಳನ್ನು ವಿರೋಧಿಸುವಂತಹ ಮನೆಮಂದಿ, ಆತ್ಮೀಯರ ಸಾಂಗತ್ಯವಿದ್ದಲ್ಲಿ ಬಯಕೆಯ ಒತ್ತಡ ಕ್ರಮೇಣ ಕ್ಷೀಣಿಸುತ್ತದೆ. ಹಾಗೆಯೇ ಚಟಕ್ಕೆ ಬೆಂಬಲ ನೀಡುವ ವಸ್ತುಗಳಿಂದ ದೂರ ಉಳಿಯುವುದು ಕೂಡ ಮನಸಿನಲ್ಲಿರುವ ವ್ಯಸನದ ನಿಗ್ರಹದ ಭಾವವನ್ನು ಬೆಂಬಲಿಸುತ್ತದೆ.

ADVERTISEMENT

ಈ ವಿಧದ ಪ್ರಯತ್ನಗಳು ಯಶಸ್ವಿಯಾಗದಿರುವುದಕ್ಕೆ ಬಹುಮುಖ್ಯ ಕಾರಣ ಬಾಲ್ಯದಿಂದಲೇ ರೂಢಿಸಿಕೊಂಡಂತಹ ಸ್ವಾವಲಂಬನೆಯ ಗುಣಗಳು. ದುರದೃಷ್ಟಕರದ ವಿಷಯವೆಂದರೆ ಬದುಕು ಉತ್ತಮವಾಗುವುದಕ್ಕೆ ಇವುಗಳು ಅತ್ಯಗತ್ಯ. ಹೀಗಾಗಿ ಬಾಲ್ಯದುದ್ದಕ್ಕೂ ಇದನ್ನು ಬಲಪಡಿಸುವ ವಾತಾವರಣವೇ ಇರುತ್ತದೆ. ಆದರೆ, ಚಟಕ್ಕೆ ಸಿಕ್ಕಿಕೊಂಡ ನಂತರದಲ್ಲಿ ಈ ಗುಣವೇ ಚಿಕಿತ್ಸೆ, ಚೇತರಿಕೆಗೆ ಅಡ್ಡಿಯಾಗಿ ನಿಲ್ಲುವುದು. ಚಟದಿಂದ ವಿಮುಕ್ತಿ ಪಡೆಯುವ ಸಮಯದಲ್ಲಿ ತನ್ನತನವೆಂಬ ಈ ಪ್ರಬಲ ಲಕ್ಷಣವನ್ನು ತೊರೆಯಲೇಬೇಕು. ಉದಾಹರಣೆಗೆ, ಚಟದಿಂದ ಹೊರಬರುವುದಕ್ಕೆ ಕಾರಣ ಎನ್ನಬಹುದಾದ ಸಂದರ್ಭಗಳೆಂದರೆ: ಅಕ್ಕರೆಯ ಮಗುವಿನ ಮೇಲಿರುವ ಅನುಕಂಪ, ಅನುರಾಗ; ಪ್ರಿಯಕರ ಅಥವಾ ಪ್ರೇಯಸಿಯ ಅಪೇಕ್ಷೆಯನ್ನು ಈಡೇರಿಸುವ ಸಲುವಾಗಿ ಮಾಡುವ ಶಪಥ, ಅಥವಾ ಗುರಿ ಸಾಧಿಸಲೇಬೇಕೆಂಬ ತೀರ್ಮಾನವೂ ಚಟಕ್ಕೆ ಸವಾಲಾಗಿ ನಿಲ್ಲಬಲ್ಲದು. ಈ ಮಾದರಿಯ ನಡೆನುಡಿಗಳು ತನ್ನಷ್ಟಕ್ಕೆ ತಾನೇ, ಅಂದರೇ ಔಷಧ, ಚಿಕಿತ್ಸೆಗಳ ನೆರವು ಪಡೆಯದೆಯೇ, ಸ್ವಂತದ ಮನೋಬಲದಿಂದಲೇ ಚಟವನ್ನು ಸಂಹರಿಸುವುದು. ವ್ಯಸನಿಯ ವಯಸ್ಸು ಏರಿದಂತೆಲ್ಲಾ ವ್ಯಸನದ ಬಲ ಕುಗ್ಗುಬಲ್ಲದೆನ್ನುವುದನ್ನು ಅಂಕಿ–ಅಂಶಗಳ ಮೂಲಕ ಕೆಲವು ಮನೋವೈಜ್ಞಾನಿಕ ಅಧ್ಯಯನಗಳು ಸೂಚಿಸಿವೆ.

ಮನದ ಬಲ ಹೆಚ್ಚು
ಅದೆಷ್ಟೋ ಯುವಕ ಯುವತಿಯರು ಮದ್ಯಸೇವನೆ, ಮಾದಕವಸ್ತು ಸೇವನೆಯನ್ನು ಮಾಡಿರುತ್ತಾರೆ; ಆದರೆ ಅವುಗಳಿಗೆ ದಾಸರಾಗದಿರುವುದರ ಉದಾಹರಣೆಗಳೂ ಇವೆ. ಅದೇ ರೀತಿಯಲ್ಲಿ ಇತಿಮಿತಿಯಿಂದ ಜೀವನದುದ್ದಕ್ಕೂ ಮದ್ಯ ಸೇವಿಸಿ ಹಿತಕರ ಜೀವನ ನಡೆಸಿರುವವರ ಸಂಖ್ಯೆ ದೊಡ್ಡದೇ ಇದೆ. ಅಂದ ಮೇಲೆ ಮಾದಕವಸ್ತುಗಳ ಶಕ್ತಿಗಿಂತಲೂ ಮನದ ಬಲ ಹೆಚ್ಚು ಪ್ರಭಾವಶಾಲಿ. 

ಬಾಲ್ಯದಿಂದಲೇ ಚಟದ ಗುಣಗಳು ದಿನನಿತ್ಯದ ನಡೆನುಡಿಗಳಲ್ಲಿ ಕಂಡುಬರುತ್ತವೆ. ಆರಂಭದ ದಿನಗಳಿಂದಲೇ ಮಕ್ಕಳ ಸ್ವಭಾವ, ಬಯಕೆಗಳನ್ನು ವ್ಯಕ್ತಪಡಿಸುವ ಮತ್ತು ಈಡೇರಿಸಿಕೊಳ್ಳುವುದರತ್ತ ಪೋಷಕರ ಗಮನವಿರಬೇಕು. ಮಕ್ಕಳ ಕೋಪತಾಪಗಳ ರೀತಿ, ಆಸೆ-ನಿರಾಸೆಗಳ ವ್ಯಕ್ತಪಡಿಸುವ ನಡೆನುಡಿಗಳು ಅಸಮರ್ಪಕವೆಂದೆನಿಸಿದಾಗ ಅಂತಹವುಗಳನ್ನು ಸರಿಪಡಿಸುವುದು ಬಹಳ ಮುಖ್ಯ. ಪೋಷಕರು, ಪಾಲಕರು, ಶಿಕ್ಷಕರು ಕೂಡ ಮದ್ಯ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಸೂಕ್ತ ತಿಳಿವಳಿಕೆಯನ್ನು ಪಡೆಯುವುದರಿಂದ ಮಕ್ಕಳ ದುಶ್ಚಟಗಳ ಒಲವನ್ನು ತಡೆಗಟ್ಟಬಹುದು.

ಸಾರಾಂಶ

ಅದೆಷ್ಟೋ ಯುವಕ ಯುವತಿಯರು ಮದ್ಯಸೇವನೆ, ಮಾದಕವಸ್ತು ಸೇವನೆಯನ್ನು ಮಾಡಿರುತ್ತಾರೆ; ಆದರೆ ಅವುಗಳಿಗೆ ದಾಸರಾಗದಿರುವುದರ ಉದಾಹರಣೆಗಳೂ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.