ಬ್ರೌನಿ... ಈ ಹೆಸರು ಕೇಳದವರು, ಇದರ ರುಚಿ ನೋಡದವರು ಬಹುಶಃ ಕಡಿಮೆ ಎನ್ನಬಹುದು. ಬ್ರೌನಿ ಎಂದಾಕ್ಷಣ ನಾಲಿಗೆಯಲ್ಲಿ ನೀರೂರದೇ ಇರದು. ಬಾಯಿಯ ಚಪಲ ಉಂಟಾದಾಗೆಲ್ಲಾ ಇದನ್ನು ತಿನ್ನುವ ಮೂಲಕ ಚಪಲ ತೀರಿಸಿಕೊಳ್ಳಬಹುದು. ಬ್ರೌನಿ ಬೇಕು ಎನ್ನಿಸಿದಾಗ ಬೇಕರಿಗೋ, ಪಾರ್ಲರ್‌ಗೋ ಹೋಗುವುದಕ್ಕಿಂತ ಮನೆಯಲ್ಲೇ ಸಿಗುವ ಕೆಲ ಉತ್ಪನ್ನಗಳಿಂದ ತಯಾರಿಸಿ ತಿನ್ನಬಹುದು. ಕೋಕೊವಾ ಪುಡಿ, ಹಿಟ್ಟು, ಸಕ್ಕರೆ ಹಾಗೂ ಒಂದೆರಡು ಮೊಟ್ಟೆ ಇದ್ದರೆ ರುಚಿಕರವಾಗ ಬ್ರೌನಿ ತಯಾರಿಸಬಹುದು. ಇದು ತಿನ್ನಲೂ ಬಹಳ ರುಚಿಯಾಗಿರುತ್ತದೆ.
ಬ್ರೌನಿಯನ್ನು ತಯಾರಿಸುವುದು ಕೂಡ ಒಂದು ಕಲೆ. ಇದರ ಹದವು ನಾವು ಖರೀದಿಸಿದ ಕೋಕೊವಾ ಪೌಡರ್ ಅನ್ನು ಅವಲಂಬಿಸಿದೆ. ಮೊದಲು ಕೋಕೊವಾ ಪುಡಿಯನ್ನು ಸ್ವಲ್ಪ ಬಿಸಿನೀರಿಗೆ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಬೇಕು. ನಂತರ ಕೆಲ ನಿಮಿಷಗಳ ಕಾಲ ಹಾಗೇ ಬಿಡಬೇಕು. ಆಗ ಅದು ಪರಿಮಳ ಹೊರ ಸೂಸಲು ಆರಂಭಿಸುತ್ತದೆ. ಕೋಕೊವಾ ಪೌಡರ್ ನಿಧಾನಕ್ಕೆ ಕರಗಿ ದಪ್ಪವಾಗುತ್ತದೆ. ನಂತರ ಇದನ್ನು ಯಾವುದೇ ಮಿಶ್ರಣದೊಂದಿಗೆ ಸೇರಿಸಿದರೂ ಇದರ ಪರಿಮಳ ಬೇಯಿಸಿದ ಮೇಲೂ ಹಾಗೇ ಇರುತ್ತದೆ. ಕೆಲವರು ಕೋಕೊವಾ ಪುಡಿಯನ್ನು ಎಣ್ಣೆಯಲ್ಲಿ ಮಿಶ್ರಣ ಮಾಡುತ್ತಾರೆ. ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಕೋಕೊವಾ ಪುಡಿ ಸೇರಿಸಿ ಮಿಶ್ರಣ ಮಾಡುತ್ತಾರೆ.
ಕೈಯಲ್ಲಿ ತಿರುಗಿಸುವ ಮಿಕ್ಸರ್
ಬ್ರೌನಿ ತಯಾರಿಸುವಾಗ ಸರಳವಾಗಿರುವ ಕೈಯಿಂದಲೇ ತಿರುಗಿಸುವ ಮಿಕ್ಸರ್ ಬಳಕೆ ಉತ್ತಮ. ಇದರಲ್ಲಿ ವೇಗವಾಗಿ ಹಾಗೂ ಸರಳವಾಗಿ ತಿರುಗಿಸಬಹುದು. ಕೈಯಲ್ಲಿ ತಿರುಗಿಸುವ ಮಿಕ್ಸರ್ ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೂ ಇದರ ಬಳಕೆ ಉತ್ತಮ. ಕೃತಕ ಚಾಕೊಲೇಟ್ ಮಿಶ್ರಣವನ್ನು ನೊರೆ ಬರುವಂತೆ ಮಾಡಬೇಕಾಗುತ್ತದೆ. ಒಮ್ಮೆ ಎಲ್ಲವೂ ಚೆನ್ನಾಗಿ ಬೆರೆತ ನಂತರ ಇದು ಮೃದುವಾಗುತ್ತದೆ. ನಂತರ ಇದಕ್ಕೆ ಮೊಟ್ಟೆ ಹಾಗೂ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಡಿದ್ದರೆ ಮೇಲ್ಭಾಗ ಬಿರುಕು ಬಿಡುವ ಸಾಧ್ಯತೆ ಇದೆ.
ಬ್ರೌನಿ ತಯಾರಿಸುವ ಮೊದಲು ಮಿಶ್ರಣ ಮಾಡಿ ಹದಕೊಳಿಸುವ ರೀತಿ ಬಹಳ ಮುಖ್ಯ. ಮಿಶ್ರಣದಲ್ಲಿ ಕೊಂಚ ವ್ಯತ್ಯಾಸವಾದರೂ ಬ್ರೌನಿ ಹದಗೆಡುತ್ತದೆ. ಹಿಟ್ಟು ಹಾಗೂ ಅಡುಗೆ ಸೋಡಾ ಸೇರಿಸುವ ಮೊದಲೇ ಉಳಿದೆಲ್ಲಾ ಸಾಮಗ್ರಿಗಳಿಂದ ಚೆನ್ನಾಗಿ ಮಿಶ್ರಣವನ್ನು ತಯಾರಿಸಿಕೊಂಡಿರಬೇಕು.
ಕೋಕಾ ಬ್ರೌನಿ ತಯಾರಿಸುವುದು
ಬೇಕಾಗುವ ಸಾಮಗ್ರಿಗಳು: ಕೆನೊಲಾ ಅಥವಾ ನಿಮಗೆ ಹಿಡಿಸುವ ಎಣ್ಣೆ – ಮುಕ್ಕಾಲು ಕಪ್, ಕೋಕೊವಾ ಪುಡಿ – ಮುಕ್ಕಾಲು ಕಪ್, ಹಿಟ್ಟು – ಅರ್ಧ ಕಪ್, ಅಡುಗೆ ಸೋಡಾ– ಕಾಲು ಚಮಚ, ಉಪ್ಪು – ಅರ್ಧ ಚಮಚ, ಮೊಟ್ಟೆ – 3, ಸಕ್ಕರೆ – ಒಂದು ಕಾಲು ಕಪ್, ಕಂದು ಸಕ್ಕರೆ – ಮುಕ್ಕಾಲು ಕಪ್, ವೆನಿಲಾ – 1 ಚಮಚ.
ತಯಾರಿಸವ ವಿಧಾನ: ಓವೆನ್‌ನಲ್ಲಿ ಪಾತ್ರೆಯನ್ನು ಇರಿಸಿ 325 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬಿಸಿಮಾಡಿಕೊಳ್ಳಿ. ಅಗಲದ ಪಾತ್ರೆಗೆ ಸುತ್ತಲೂ ಬೆಣ್ಣೆ ಅಥವಾ ತುಪ್ಪ ಸವರಿ ಅದಕ್ಕೆ ಅದರ ತೆಳ್ಳಗೆ ಹಿಟ್ಟನ್ನು ಉದುರಿಸಿ. ನಂತರ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅದಕ್ಕೆ ಕೋಕೊವಾ ಪುಡಿ ಸೇರಿಸಿ ಆ ಮಿಶ್ರಣ ಚೆನ್ನಾಗಿ ಸೇರಿಕೊಂಡು ಮೃದುವಾಗುವವರೆಗೂ ಕಲೆಸಿ. ಇದನ್ನು 5 ನಿಮಿಷ ಹಾಗೇ ಬಿಡಿ. ಒಂದು ಕಪ್‌ನಲ್ಲಿ ಹಿಟ್ಟು, ಅಡುಗೆ ಸೋಡಾ ಹಾಗೂ ಉಪ್ಪು ಸೇರಿಸಿ ಕಲೆಸಿ ಒಂದೆಡೆ ಇಡಿ.
ನಂತರ ಮೊಟ್ಟೆ, ಪುಡಿ ಮಾಡಿಟ್ಟುಕೊಂಡ ಸಕ್ಕರೆಯನ್ನು ಒಂದು ದೊಡ್ಡ ಬೌಲ್‌ನಲ್ಲಿ ಹಾಕಿ ಇದನ್ನು ಎಲೆಕ್ಟ್ರಿಕ್ ಮಿಕ್ಸರ್‌ನಲ್ಲಿ ಮದ್ಯಮ ವೇಗದಲ್ಲಿ ಕಲೆಸಿ. ಅದಕ್ಕೆ ವೆನಿಲ್ಲಾ ಸೇರಿಸಿ.
ಅರ್ಧದಷ್ಟು ಕೋಕೊವಾ ಮಿಶ್ರಣವನ್ನು ಮೊಟ್ಟೆಯ ಮಿಶ್ರಣಕ್ಕೆ ಸೇರಿಸಿ. ಅದನ್ನು ಮಧ್ಯಮ ವೇಗದಲ್ಲಿ 5 ನಿಮಿಷಗಳ ಕಾಲ ಕಲೆಸಿ. ನಂತರ ಉಳಿದ ಕೋಕಾ ಮಿಶ್ರಣ ಸೇರಿಸಿ ಮಧ್ಯಮ ವೇಗದಲ್ಲಿ ತಿರುಗಿಸಿ. ಇದನ್ನು ಬೇಕಿಂಗ್ ಪ್ಯಾನ್ ಮೇಲೆ ಹರಡಿ. ಇದನ್ನು 25 ನಿಮಿಷಗಳ ಕಾಲ ಬೇಯಿಸಿ. ಬ್ರೌನಿ ಚೆನ್ನಾಗಿ ಬೆಂದ ಮೇಲೆ ಮೇಲಿಂದ ಉಬ್ಬಿರುವುದು ಕಾಣಿಸುತ್ತದೆ. ಬ್ರೌನಿ ರೆಡಿಯಾದ ಮೇಲೆ ಎರಡು ದಿನಗಳ ಕಾಲ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಕೆಡದಂತೆ ಇಡಬಹುದು.
ಬ್ರೌನಿಯನ್ನು ತಯಾರಿಸುವುದು ಕೂಡ ಒಂದು ಕಲೆ. ಇದರ ಹದವು ನಾವು ಖರೀದಿಸಿದ ಕೋಕೊವಾ ಪೌಡರ್ ಅನ್ನು ಅವಲಂಬಿಸಿದೆ. ಮೊದಲು ಕೋಕೊವಾ ಪುಡಿಯನ್ನು ಸ್ವಲ್ಪ ಬಿಸಿನೀರಿಗೆ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಬೇಕು. ನಂತರ ಕೆಲ ನಿಮಿಷಗಳ ಕಾಲ ಹಾಗೇ ಬಿಡಬೇಕು. ಆಗ ಅದು ಪರಿಮಳ ಹೊರ ಸೂಸಲು ಆರಂಭಿಸುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.