ADVERTISEMENT

ಬೆಂಗಳೂರಿನ 'ಎಂಟಿಆರ್‌ 1924' ಶಾಖೆ ಲಂಡನ್‌ಗೆ ವಿಸ್ತರಣೆ

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 19 ಜನವರಿ 2022, 7:13 IST
Last Updated 19 ಜನವರಿ 2022, 7:13 IST
ಮಾವಳ್ಳಿ ಟಿಫಿನ್‌ ರೂಮ್ಸ್‌
ಮಾವಳ್ಳಿ ಟಿಫಿನ್‌ ರೂಮ್ಸ್‌   

ಬೆಂಗಳೂರು: ನಗರದ ಹೆಸರಾಂತ ರೆಸ್ಟೋರೆಂಟ್‌ ಮಾವಳ್ಳಿ ಟಿಫಿನ್‌ ರೂಮ್ಸ್‌ (ಎಂಟಿಆರ್‌) ಲಂಡನ್‌ನಲ್ಲಿ ಹೊಸ ಹೋಟೆಲ್‌ ತೆರೆಯುತ್ತಿದ್ದು, ಗುರುವಾರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಲಂಡನ್‌ನ ಹೈರೋ ಪ್ರದೇಶದಲ್ಲಿ ಎಂಟಿಆರ್‌ ಶಾಖೆ ತೆರೆದಿದ್ದು, 'ವಿದೇಶದಲ್ಲಿರುವ ರೆಸ್ಟೋರೆಂಟ್‌ಗಳನ್ನು ನಮ್ಮ ಪರಿಕಲ್ಪನೆಯಲ್ಲಿ ಆಸಕ್ತಿ ಹೊಂದಿರುವ ಸ್ನೇಹಿತರು ನಡೆಸುತ್ತಿದ್ದಾರೆ' ಎಂದು ಎಂಟಿಆರ್‌ ರೆಸ್ಟೋರೆಂಟ್‌ಗಳ ನಿರ್ವಹಣಾ ಪಾಲುದಾರರಾಗಿರುವ ಹೇಮಮಾಲಿನಿ ಮಯ್ಯ ತಿಳಿಸಿದ್ದಾರೆ.

ದಕ್ಷಿಣ ಭಾರತದ ಸರವಣ ಭವನ ಸೇರಿದಂತೆ ಹೈರೋದಲ್ಲಿ ಹಲವು ಭಾರತೀಯ ರೆಸ್ಟೋರೆಂಟ್‌ಗಳು ಇವೆ.

ADVERTISEMENT

'ಕರ್ನಾಟಕ ಪ್ರಾತಿನಿಧಿಕ ಆಹಾರವನ್ನೇ ಪೂರೈಸುತ್ತೇವೆ. ಇಂತಹ ಆಹಾರವನ್ನು ಸೇವಿಸಲು ಬೇರೆ ಯಾವ ಜಾಗವೂ ಇಲ್ಲ' ಎಂದು ಹೇಮಮಾಲಿನಿ ಹೇಳಿದ್ದಾರೆ. ಶತಕದ ಸಮೀಪದಲ್ಲಿರುವ ಎಂಟಿಆರ್‌ನ ಎಲ್ಲ ರೆಸ್ಟೋರೆಂಟ್‌ಗಳಲ್ಲೂ ಕರ್ನಾಟಕ ಪ್ರಾತಿನಿಧಿಕ ಆಹಾರಗಳು ಸಿಗುತ್ತವೆ.

'ಲಂಡನ್‌ನಲ್ಲಿ ಗ್ರ್ಯಾನೈಟ್‌ ಟೇಬಲ್‌ ಸಿಗುವುದು ಸ್ವಲ್ಪ ಸವಾಲಿನ ವಿಚಾರ. ಹಾಗಾಗಿ ಗ್ರ್ಯಾನೈಟ್‌ನಂತೆ ಕಾಣುವ ಟೇಬಲ್‌ಗಳನ್ನು ಅಳವಡಿಸಿದ್ದೇವೆ' ಮಯ್ಯ ತಿಳಿಸಿದರು.

98 ವರ್ಷಗಳ ಹಿಂದೆ ಮಾವಳ್ಳಿ ಟಿಫಿನ್‌ ರೂಮ್ಸ್‌ ಹೆಸರಿನಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನ ಮುಖ್ಯದ್ವಾರದಲ್ಲಿ ಆರಂಭಗೊಂಡಿತ್ತು. ಮಾವಳ್ಳಿ ಎಂಬುದು ಆ ಪ್ರದೇಶದ ಹೆಸರು. ಇತ್ತೀಚಿನ ವರ್ಷಗಳಲ್ಲಿ 'ಎಂಟಿಆರ್‌ 1924' ಎಂದು ರೆಸ್ಟೋರೆಂಟ್‌ನ ಹೆಸರನ್ನು ಮಾರ್ಪಡಿಸಿಕೊಳ್ಳಲಾಗಿದೆ.

'ಲಂಡನ್‌ನಿಂದ ಆಗಮಿಸಿದ್ದ ಇಬ್ಬರಿಗೆ 4 ತಿಂಗಳ ಕಾಲ ತರಬೇತಿ ತರಬೇತಿ ನೀಡಲಾಗಿದೆ. ರೆಸ್ಟೋರೆಂಟ್‌ ಸಿಬ್ಬಂದಿಯಾಗಿ ಸ್ಥಳೀಯರನ್ನು ನೇಮಿಸಲಾಗಿದೆ. ಅವರು ಭಾರತೀಯರೇ ಆಗಿರುತ್ತಾರೆ. ಯಾವುದೇ ನಿರ್ಬಂಧಗಳಿಲ್ಲ. ಉದಾಹರಣೆಗೆ ಲಂಡನ್‌ ನಿವಾಸಿಗಳಿಗೆ 'ಬಿಸಿ ಬೇಳೆ ಬಾತ್‌' ಎಂದರೇನು ಎಂಬುದನ್ನೆಲ್ಲ ವಿವರಿಸಬಲ್ಲರು' ಎಂದು ಹೇಮಮಾಲಿನಿ ವಿವರಸಿದ್ದಾರೆ.

4 ವಿದೇಶಿ ಶಾಖೆಗಳು
ಬೆಂಗಳೂರಿನಲ್ಲಿ ಎಂಟಿಆರ್‌ನ 8 ಶಾಖೆಗಳಿವೆ. ಮೈಸೂರು ಮತ್ತು ಉಡುಪಿಯಲ್ಲಿ ತಲಾ ಒಂದು ಶಾಖೆಯಿದೆ. ಸಿಂಗಾಪುರ ಮತ್ತು ದುಬೈನಲ್ಲಿ 2015ರಲ್ಲಿ ತಲಾ ಒಂದೊಂದು ಶಾಖೆ ತೆರೆಯಲಾಗಿದೆ. ಎರಡು ವರ್ಷಗಳ ಹಿಂದೆ ಮಲೇಷ್ಯಾದಲ್ಲಿ ಒಂದು ಶಾಖೆ ತೆರೆಯಲಾಗಿದೆ.

ಸಾರಾಂಶ

ಬೆಂಗಳೂರಿನ ಹೆಸರಾಂತ ರೆಸ್ಟೋರೆಂಟ್‌ ಮಾವಳ್ಳಿ ಟಿಫಿನ್‌ ರೂಮ್ಸ್‌ (ಎಂಟಿಆರ್‌) ಲಂಡನ್‌ನಲ್ಲಿ ಹೊಸ ಹೋಟೆಲ್‌ ತೆರೆಯುತ್ತಿದ್ದು, ಗುರುವಾರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.