ಬೆಂಗಳೂರು: ಆಗಸ್ಟ್ 15, 2021ರಂದು ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಧಾನ ಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್’ ಎಂಬ ₹100 ಲಕ್ಷ ಕೋಟಿ ಮೊತ್ತದ ಯೋಜನೆಯನ್ನು ಘೋಷಿಸಿದ್ದರು.
ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ, ಕೈಗಾರಿಕೆಗಳ ಬಲವರ್ಧನೆ ಮತ್ತು ಉತ್ಪಾದನೆ ಹೆಚ್ಚಳ ಹಾಗೂ ವಿವಿಧ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಇದರ ಉದ್ದೇಶವಾಗಿದೆ.
ಡಿಜಿಟಲೀಕರಣಕ್ಕೆ ಮುನ್ನುಡಿ
ಪ್ರಮುಖವಾಗಿ ಗತಿಶಕ್ತಿ ಯೋಜನೆ ಮೂಲಕ, 16 ವಿವಿಧ ಸಚಿವಾಲಯಗಳನ್ನು ಮತ್ತು ಅಧೀನ ಇಲಾಖೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರುವುದು ಮತ್ತು ವಿವಿಧ ಆರ್ಥಿಕ ವಲಯಗಳ ಸಂಪರ್ಕ ಯೋಜನೆ ರೂಪಿಸುವ ಕಾರ್ಯಕ್ರಮವನ್ನು ಸರ್ಕಾರ ಹೊಂದಿದೆ.
ಗತಿಶಕ್ತಿ ಯೋಜನೆ ಮೂಲಕ ಯಾವ ಕ್ಷೇತ್ರಕ್ಕೆ ಆದ್ಯತೆ?
ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ, ಗತಿಶಕ್ತಿ ಯೋಜನೆಯಿಂದ ದೇಶದ ವಿವಿಧ ಉತ್ಪಾದನಾ ವಲಯ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಕಾರ್ಯಕ್ರಮವಿದೆ. ಅಲ್ಲದೆ, ಮುಂದೆ ಹೆಚ್ಚುವರಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಗುರಿ ಹೊಂದಿದೆ.
ಉತ್ಪಾದನೆ ಮತ್ತು ರಫ್ತು ಹೆಚ್ಚಳ, ದೇಶಿಯ ಉತ್ಪನ್ನಗಳಿಗೆ ಮತ್ತಷ್ಟು ಮಾರುಕಟ್ಟೆ ಸೃಷ್ಟಿ, ಜಾಗತಿಕವಾಗಿ ಭಾರತೀಯ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯವರ್ಧನೆ ಕೂಡ ಇದರಲ್ಲಿ ಸೇರಿದೆ.
ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ-ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ವಿಶೇಷತೆಗಳೇನು?
ಗತಿಶಕ್ತಿ ಯೋಜನೆ ಮೂಲಕ ಕೇಂದ್ರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಜಾರಿಯಾಗಿರುವ ಭಾರತ್‌ಮಾಲಾ, ಸಾಗರಮಾಲಾ, ಉಡಾನ್, ಒಳನಾಡು ಜಲಸಾರಿಗೆ ಮತ್ತು ಬಂದರು ಸಹಿತ ವಿವಿಧ ಯೋಜನೆಗಳ ಮೂಲಸೌಕರ್ಯ ಅಭಿವೃದ್ಧಿ.
ವಸ್ತ್ರೋದ್ಯಮ, ಫಾರ್ಮಸಿ, ಮೀನುಗಾರಿಕೆ, ಎಲೆಕ್ಟ್ರಾನಿಕ್ ಪಾರ್ಕ್, ರಕ್ಷಣಾ ಮತ್ತು ಉದ್ಯಮ ಕಾರಿಡಾರ್ ಹಾಗೂ ಕೃಷಿ-ಯಂತ್ರೋಪಕರಣ ವಲಯಗಳಲ್ಲಿ ಹೆಚ್ಚಿನ ಸವಲತ್ತು ಮತ್ತು ಸಂಪರ್ಕ ಯೋಜನೆ, ವಿಸ್ತರಣೆ.
ಇಸ್ರೋ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಸಂಬಂಧಿತ ಇಲಾಖೆಗಳ ಮೂಲಕ ವಿವಿಧ ತಂತ್ರಜ್ಞಾನ ಸಹಯೋಗ ಹಾಗೂ ಅಭಿವೃದ್ಧಿ ಕಾರ್ಯಕ್ರಮ
ಉದ್ಯಮದಲ್ಲಿ ಉತ್ಪಾದಕತೆ ಹೆಚ್ಚಳ, ಸ್ಪರ್ಧಾತ್ಮಕತೆ, ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ ಮತ್ತು ಹೊಸ ಆರ್ಥಿಕ ವಲಯ ಸೃಷ್ಟಿಗೆ ಉತ್ತೇಜನ
ಸರಕು ಸಾಗಣೆಗೆ ಪೂರಕವಾಗಿ ವೇಗದ ಮತ್ತು ತಡೆರಹಿತ ಸಂಪರ್ಕ ಜಾಲ, ಅರ್ಥಿಕ ವಲಯದಿಂದ ಉತ್ಪಾದನೆ ಮತ್ತು ಮಾರುಕಟ್ಟೆಗೆ ವಿಶೇಷ ಸಂಪರ್ಕ
ಉದ್ಯಮ ಪ್ರೋತ್ಸಾಹ ಮತ್ತು ಆಂತರಿಕ ಮಾರಾಟ ಇಲಾಖೆ ನೋಡಲ್ ಸಚಿವಾಲಯದ ರೀತಿ ಕಾರ್ಯನಿರ್ವಹಿಸಲಿದ್ದು, ವಿವಿಧ ಯೋಜನೆಗಳ ಜಾರಿ ಮತ್ತು ಅವುಗಳ ನಿರ್ವಹಣೆ, ನಿಯತವಾಗಿ ಪರಿಶೀಲನೆ ಕೈಗೊಳ್ಳಲಿದೆ.
ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ವಿವಿಧ ಅಧೀನ ಇಲಾಖೆಗಳ ಕಾರ್ಯದರ್ಶಿಗಳ ಸಮಿತಿ ರಚಿಸಿ, ಅದರ ಮೂಲಕ ಯೋಜನೆ ಜಾರಿ ಮತ್ತು ಬದಲಾವಣೆ, ಉಸ್ತುವಾರಿ ಪರಿಶೀಲನೆ ನಡೆಯಲಿದೆ.
ಪ್ರಸ್ತುತ ಇರುವ ಮತ್ತು ಉದ್ದೇಶಿತ ವಿಶೇಷ ಆರ್ಥಿಕ ವಲಯಗಳನ್ನು ಒಂದೇ ವೇದಿಕೆಯಡಿ, ಮೂರು ಹಂತಗಳಲ್ಲಿ ನಿರ್ವಹಿಸಲಾಗುತ್ತದೆ. 2014-15ರ ಸಾಲಿನಲ್ಲಿ ಸ್ಥಿತಿಗತಿ, 2020-21ರಲ್ಲಿನ ಸಾಧನೆಗಳು ಮತ್ತು 2024-25ರಲ್ಲಿ ಯೋಜಿತ ಮಧ್ಯಸ್ಥಿಕೆ ಎಂದು ವಿಂಗಡಿಸಲಾಗುತ್ತದೆ.
ಜನರು ಮತ್ತು ಉದ್ಯಮ ಸಮೂಹಗಳು, ಹೂಡಿಕೆದಾರರಿಗೆ ಮುಂಬರುವ ಯೋಜನೆಗಳ ಬಗ್ಗೆ ಸವಿವರ ನೀಡಲಾಗುತ್ತದೆ. ಇದರಿಂದ ಪ್ರಸಕ್ತ ಯೋಜನೆ, ಉದ್ದೇಶಿತ ಯೋಜನೆ ಕುರಿತು ಹೂಡಿಕೆದಾರರು ನಿರ್ಧಾರ ಕೈಗೊಳ್ಳಲು ಮತ್ತು ಪೂರಕವಾಗಿ ಕಾರ್ಯಯೋಜನೆ ರೂಪಿಸಲು ನೆರವಾಗುತ್ತದೆ.
ವಿವಿಧ ರೀತಿಯಲ್ಲಿ ಉದ್ಯೋಗ ಸೃಷ್ಟಿ, ಜಾಗತಿಕ ಮಟ್ಟದಲ್ಲಿ ದೇಶದ ಸ್ಥಳೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು, ಸುಲಭ ಮತ್ತು ಕಡಿಮೆ ವೆಚ್ಚದ ಸಾಗಾಟ ಮತ್ತು ಪೂರೈಕೆ ಸರಪಣಿ ರೂಪಿಸುವ ಯೋಚನೆಯನ್ನು ಗತಿಶಕ್ತಿ ಯೋಜನೆ ಹೊಂದಿದೆ.
ಗತಿಶಕ್ತಿ ಯೋಜನೆ ಮೂಲಕ ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.