ಮಂಡ್ಯ/ ಮೈಸೂರು: ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದ, ಸಾಲ ಮನ್ನಾ ಯೋಜನೆಯ ಹಣ ದುರುಪಯೋಗ ಪ್ರಕರಣ ರಾಷ್ಟ್ರದ ಗಮನ ಸೆಳೆದಿತ್ತು. ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ವಿಚಾರಣಾ ಹಂತದಲ್ಲಿದೆ.
2009–10ನೇ ಸಾಲಿನಲ್ಲಿ ಆಗಿನ ಪ್ರಧಾನಿ ಮನಮೋಹನ್‌ಸಿಂಗ್ ಅವಧಿಯಲ್ಲಿ ಘೋಷಿಸಲಾಗಿದ್ದ ಸಾಲ ಮನ್ನಾ ಯೋಜನೆಯಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ₹ 62 ಲಕ್ಷ ಪಡೆದಿತ್ತು. ಕೃಷಿ ಸಂಬಂಧಿತ ಉಪಕಸುಬುಗಳಿಗೆ ಸಾಲ ಪಡೆದವರ ಅನುಕೂಲಕ್ಕಾಗಿ ಯೋಜನೆಯನ್ನು ಜಾರಿಗೊಳಿಸಿತ್ತು. ವ್ಯಾಪಾರಿ, ಉದ್ಯಮಿ ಹಾಗೂ ನೌಕರರಿಗೆ ನೀಡಿದ್ದ ಸಾಲವನ್ನೇ ಕೃಷಿ ಸಂಬಂಧಿತ ಸಾಲ ಎಂದು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಡಳಿತ ಮಂಡಳಿಯು ಯೋಜನೆಯಡಿ ಹಣ ಪಡೆದಿತ್ತು.
ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಾದ ನಂತರ ನಡೆದ ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗಿತ್ತು. ಸಹಕಾರ ಇಲಾಖೆ ನಡೆಸಿದ ತನಿಖೆಯಲ್ಲೂ ಆರೋಪ ಸಾಬೀತಾಗಿ ಹಣವನ್ನು ವಾಪಸ್ ಕಟ್ಟಿಸುವಂತೆ ಆದೇಶ ನೀಡಿತ್ತು.
ಸಿಎಜಿ ವರದಿಯಲ್ಲೂ ಬ್ಯಾಂಕ್ ಅವ್ಯವಹಾರ ದಾಖಲಾಗಿತ್ತು. ಸಿಟಿ ಬ್ಯಾಂಕ್ ಸೇರಿ ಕರ್ನಾಟಕದ 3 ಸಹಕಾರ ಬ್ಯಾಂಕ್‌ಗಳಲ್ಲಿ ನಡೆದ ಅವ್ಯವಹಾರ ಲೋಕಸಭೆಯಲ್ಲೂ ಪ್ರತಿಧ್ವನಿಸಿತ್ತು.
ನಂತರ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಯಿತು, ವಿಚಾರಣೆ ಬಾಕಿ ಉಳಿದಿದೆ. ‘ಆರೋಪಿಗಳು ಸರಿಯಾಗಿ ಕೋರ್ಟ್‌ಗೆ ಹಾಜರಾಗದ ಕಾರಣ, ವಿಚಾರಣೆ ಕುಂಟುತ್ತಾ ಸಾಗಿದೆ’ ಎಂದು ವಕೀಲರೊಬ್ಬರು ತಿಳಿಸಿದರು.
ವ್ಯವಸ್ಥಾಪಕರ ಖಾತೆಗೆ ಹಣ!: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಹುಣಸೂರು ಶಾಖೆಯಲ್ಲಿ ರೈತರಿಗೆ ಸೇರಬೇಕಾದ ₹ 40.52 ಕೋಟಿ ಹಣ ಹಿಂದಿನ ವ್ಯವಸ್ಥಾಪಕರಾಗಿದ್ದ ರಾಮಪ್ಪ ಪೂಜಾರಿ ಅವರ ಖಾತೆಗೆ ಜಮಾಗೊಂಡ ಪ್ರಕರಣ 2018ರಲ್ಲಿ ಬಹಿರಂಗವಾಗಿತ್ತು. ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಆರೋಪಿ ರಾಮಪ್ಪ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿದೆ.
₹ 2 ಕೋಟಿ ದುರ್ಬಳಕೆ ಮಾಡಿಕೊಂಡಿದ್ದ ಕ್ಯಾಷಿಯರ್
ಕಲಬುರಗಿ: ಇಲ್ಲಿನ ಕಲಬುರಗಿ–ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಳಂದ ಶಾಖೆಯಲ್ಲಿ 2019-20ನೇ ಸಾಲಿನಲ್ಲಿ ₹ 2 ಕೋಟಿ ದುರ್ಬಳಕೆ ಮಾಡಿಕೊಂಡಿದ್ದ ಆರೋಪದ ಮೇರೆಗೆ ಶಾಖೆಯ ಕ್ಯಾಷಿಯರ್ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಪಗಳನ್ನು ಒಪ್ಪಿಕೊಂಡಿರುವ ನೌಕರ, ಅದರಲ್ಲಿ ಒಂದಷ್ಟು ಭಾಗವನ್ನು ಬ್ಯಾಂಕಿಗೆ ಮರು ಪಾವತಿಸಿದ್ದಾರೆ.
‘ಅಮಾನತು ಮಾಡಿದರೆ ಸಾಲದು. ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ನಾವು ಆಡಳಿತ ಮಂಡಳಿ ಸಭೆಯಲ್ಲಿ ಒತ್ತಾಯಿಸಿದ್ದೆವು. ಅದರಂತೆ ತನಿಖೆ ಇನ್ನೂ ನಡೆಯುತ್ತಿದೆ’ ಎನ್ನುತ್ತಾರೆ ಬ್ಯಾಂಕ್ ನಿರ್ದೇಶಕ ಸೋಮಶೇಖರ ಗೋನಾಯಕ.
ಮುಳುವಾದ ಆಡಳಿತಾತ್ಮಕ ವೈಫಲ್ಯ
ಕೋಲಾರ: ಆಡಳಿತಾತ್ಮಕ ವೈಫಲ್ಯ ಹಾಗೂ ಹಣಕಾಸು ವ್ಯವಹಾರದಲ್ಲಿನ ಅಶಿಸ್ತಿನಿಂದಾಗಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ), ಹಿಂದೆ ಆರ್ಥಿಕ ನಷ್ಟದ ಸುಳಿಗೆ ಸಿಲುಕಿ ದಿವಾಳಿಯಾಯಿತು.
ಬ್ಯಾಂಕ್‌ನ ಆಡಳಿತ ಮಂಡಳಿಯು ಸಾಲ ವಸೂಲಾತಿಯನ್ನು ಗಂಭೀರವಾಗಿ ಪರಿಗಣಿಸದ ಕಾರಣ, ಸಾಲ ವಸೂಲಾತಿ ಪ್ರಕ್ರಿಯೆ ಹಳಿ ತಪ್ಪಿತು. ದಿನದಿಂದ ದಿನಕ್ಕೆ ಸಾಲದ ಪ್ರಮಾಣ ಹೆಚ್ಚುತ್ತಲೇ ಸಾಗಿ ಠೇವಣಿದಾರರಿಗೆ ಠೇವಣಿ ಹಣವನ್ನೂ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಇದರಿಂದ ಬ್ಯಾಂಕ್‌ನ ಮೇಲೆ ನಂಬಿಕೆ ಕಳೆದುಕೊಂಡ ಠೇವಣಿದಾರರು ಹಣ ಹೂಡಿಕೆಗೆ ಹಿಂದೇಟು ಹಾಕಿದರು. ಹೀಗಾಗಿ ಬ್ಯಾಂಕ್‌ಗೆ ಹಣದ ಹರಿವು ಕಡಿಮೆಯಾಯಿತು.
ದುರ್ಬಲ ಆಡಳಿತ ಮಂಡಳಿಗೆ ಸಿಬ್ಬಂದಿ ಮೇಲೆ ಹಿಡಿತವಿರಲಿಲ್ಲ. ಪರಿಸ್ಥಿತಿಯ ಲಾಭ ಪಡೆದ ಸಿಬ್ಬಂದಿ, ಬ್ಯಾಂಕ್‌ನ ಹಣ ದುರ್ಬಳಕೆ ಮಾಡಿಕೊಂಡರು. ಸಿಬ್ಬಂದಿಯ ಕಪಿಮುಷ್ಟಿಯಲ್ಲಿದ್ದ ಆಡಳಿತ ಮಂಡಳಿಯು ಸ್ವತಂತ್ರವಾಗಿ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳದೆ ಎಡವಿದ್ದು ಬ್ಯಾಂಕನ್ನು ಮುಳುಗಿಸಿತು. ರಾಜಕೀಯ ಮರ್ಜಿಗೆ ಮಣಿದು ನೀಡಿದ ದೊಡ್ಡ ಮಟ್ಟದ ಸಾಲಗಳು ವಸೂಲಾಗದೆ ಅನುತ್ಪಾದಕ ಸಾಲ (ಎನ್‌ಪಿಎ) ಹೆಚ್ಚಿತು.
ಸಂಪೂರ್ಣ ದಿವಾಳಿಯಾದ ಬ್ಯಾಂಕನ್ನು ಬೆಂಗಳೂರು ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜತೆ ವಿಲೀನಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ, 2014ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಬ್ಯಾಂಕ್‌ನ ನಸೀಬು ಬದಲಾಗಿ ಲಾಭ ಗಳಿಕೆ ಹಾದಿಯಲ್ಲಿ ದಾಪುಗಾಲಿಟ್ಟಿದೆ.
ಬಿಡಿಸಿಸಿ ಬೆನ್ನಿಗಂಟಿದ ಹಗರಣಗಳು
ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪದೇ ಪದೇ ಹಗರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕುತ್ತಿದೆ.
1991ರಿಂದ 1999ರ ಅವಧಿಯಲ್ಲಿ ₹ 5.95 ಕೋಟಿ ಮೊತ್ತದ ಸಾಲ ವಿತರಣೆಯಲ್ಲಿ ಅಕ್ರಮ ನಡೆದಿತ್ತು. ಬ್ಯಾಂಕ್‌ನ ಆಗಿನ ಅಧ್ಯಕ್ಷ ನಾರಾಯಣ ಗೌಡ, ನಿರ್ದೇಶಕ ನರಸೇಗೌಡ, ಜವಾಹರ್ ಗೃಹ ನಿರ್ಮಾಣ ಸಹಕಾರ ಸಂಘದ ಖಜಾಂಚಿಯಾಗಿದ್ದ ಚಂದ್ರಶೇಖರ್, ಎಂ.ಬಿ. ಅರುಣ್ ಕುಮಾರ್ ಮತ್ತು ಬೆಟ್ಟಸ್ವಾಮಿ ಗೌಡ ವಿರುದ್ಧ ಸಿಬಿಐ ತನಿಖೆ ನಡೆಸಿತ್ತು.
ಈ ಪ್ರಕರಣದ ವಿಚಾರಣೆ ಕಳೆದ ವಾರವಷ್ಟೇ ನಿರ್ಣಾಯಕ ಹಂತ ತಲುಪಿದೆ. ಎಲ್ಲ ಆರೋಪಿಗಳ ವಿರುದ್ಧ ಅಕ್ಟೋಬರ್ 4ರಂದು ಆರೋಪ ನಿಗದಿ ಮಾಡಿರುವ ಸಿಬಿಐ ವಿಶೇಷ ನ್ಯಾಯಾಲಯ, ವಿಚಾರಣೆಯ ಅಂತಿಮ ಹಂತದ ಪ್ರಕ್ರಿಯೆ ಆರಂಭಿಸಿದೆ.
2015ರಲ್ಲಿ ಬಿಡಿಸಿಸಿ ಬ್ಯಾಂಕ್‌ನ ರೇಷ್ಮೆ ವಿನಿಮಯ ಕೇಂದ್ರದ ನೌಕರ ಕೃಷ್ಣಮೂರ್ತಿ ತನ್ನ ಪತ್ನಿಯ ಖಾತೆಗೆ ಬ್ಯಾಂಕ್‌ನ ₹ 11.47 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಈ ಪ್ರಕರಣವೂ ನ್ಯಾಯಾಲಯದಲ್ಲಿದೆ.
ಕಪ್ಪುಹಣದ ವಹಿವಾಟಿಗೂ ಬಳಕೆ
ರಾಜ್ಯದ ಹಲವು ಪ್ರಮುಖ ಸಹಕಾರ ಬ್ಯಾಂಕ್‌ಗಳು ಕಪ್ಪುಹಣದ ಅಕ್ರಮ ಚಲಾವಣೆ ಮತ್ತು ಸಕ್ರಮಗೊಳಿಸುವ ಕೆಲಸಕ್ಕೆ ಬಳಕೆಯಾಗುತ್ತಿವೆ. 2016ರಲ್ಲಿ ನೋಟುಗಳನ್ನು ಅಮಾನ್ಯ ಮಾಡಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಬೆಳಗಾವಿ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಬೃಹತ್ ಸಹಕಾರ ಬ್ಯಾಂಕ್‌ಗಳಲ್ಲಿ ಸಂಶಯಾಸ್ಪದ ರೀತಿಯಲ್ಲಿ ನೂರಾರು ಕೋಟಿ ರೂಪಾಯಿ ಜಮೆಯಾಗಿತ್ತು.
ಸಹಕಾರ ಬ್ಯಾಂಕ್‌ಗಳನ್ನು ಕಪ್ಪು ಹಣದ ಅಕ್ರಮ ವಹಿವಾಟಿಗೆ ಬಳಸುತ್ತಿರುವ ಶಂಕೆಯ ಮೇಲೆ 2016ರಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಿದ್ದರು. ಹಲವು ಬ್ಯಾಂಕ್‌ಗಳು ಈಗಲೂ ಗ್ರಾಹಕರ ಸಮಗ್ರ ದಾಖಲೆಗಳನ್ನು ಬಹಿರಂಗಪಡಿಸದೇ ಬೃಹತ್ ಪ್ರಮಾಣದ ವಹಿವಾಟು ನಡೆಸುತ್ತಿರುವ ದೂರುಗಳೂ ಇವೆ.
ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದ, ಸಾಲ ಮನ್ನಾ ಯೋಜನೆಯ ಹಣ ದುರುಪಯೋಗ ಪ್ರಕರಣ ರಾಷ್ಟ್ರದ ಗಮನ ಸೆಳೆದಿತ್ತು. ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ವಿಚಾರಣಾ ಹಂತದಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.