ADVERTISEMENT

ಆಳ-ಅಗಲ: ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಉಗ್ರರ ಷಡ್ಯಂತ್ರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 19:30 IST
Last Updated 10 ಅಕ್ಟೋಬರ್ 2021, 19:30 IST
ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಸತೀಂದರ್‌ ಕೌರ್‌ ಅವರ ಹತ್ಯೆಯ ಬಳಿಕ ಕುಟುಂಬದ ಸದಸ್ಯರ ಆಕ್ರಂದನ (ಪಿಟಿಐ-ಚಿತ್ರ)
ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಸತೀಂದರ್‌ ಕೌರ್‌ ಅವರ ಹತ್ಯೆಯ ಬಳಿಕ ಕುಟುಂಬದ ಸದಸ್ಯರ ಆಕ್ರಂದನ (ಪಿಟಿಐ-ಚಿತ್ರ)   
""

ಐದು ದಿನಗಳಲ್ಲಿ ಏಳು ಮಂದಿ ನಾಗರಿಕರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡುವುದರೊಂದಿಗೆ ದೇಶದ ಗಮನವು ಮತ್ತೆ ಕಾಶ್ಮೀರದತ್ತ ಹರಿದಿದೆ. ಈ ಘಟನೆಗಳಿಂದಾಗಿ ಅಲ್ಲಿ ಈ ವರ್ಷ ಈವರೆಗೆ 25ಕ್ಕೂ ಹೆಚ್ಚು ನಾಗರಿಕರ ಹತ್ಯೆ ಆಗಿದೆ ಎಂಬುದೂ ಚರ್ಚೆಗೆ ಬಂತು. ಉಗ್ರರ ಕಾರ್ಯಾಚರಣೆ ವಿಧಾನದಲ್ಲಿ ಬದಲಾವಣೆ ಆಗಿರುವುದನ್ನು ಈ ವರ್ಷದ ನಾಗರಿಕರ ಹತ್ಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಜತೆಗೆ, ಹತ್ಯೆಗೆ ಉಗ್ರರು ಗುರಿ ಮಾಡಿರುವ ವ್ಯಕ್ತಿಗಳನ್ನು ಗಮನಿಸಿದರೆ, ಯಾವುದೋ ನಿರ್ದಿಷ್ಟ ಗುರಿಯನ್ನು ಉಗ್ರರು ಹಾಕಿಕೊಂಡಿದ್ದಾರೆ ಎಂಬುದೂ ಅರಿವಾಗುತ್ತದೆ.

ಶ್ರೀನಗರದ ಪ್ರಮುಖ ಔಷಧ ವ್ಯಾಪಾರಿ ಮತ್ತು ಕಾಶ್ಮೀರಿ ಪಂಡಿತ ಸಮುದಾಯದ ಗಣ್ಯ 70 ವರ್ಷದ ಮಖನ್‌ ಲಾಲ್‌ ಬಿಂದ್ರೂ ಅವರನ್ನು ಜನದಟ್ಟಣೆಯ ಇಕ್ಬಾಲ್‌ ಪಾರ್ಕ್‌ನಲ್ಲಿರುವ ಔಷಧ ಅಂಗಡಿಯಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ನಿಗಾ ಇರುವ ಪ್ರದೇಶದಲ್ಲಿಯೇ ಈ ಹತ್ಯೆ ನಡೆದಿದೆ. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಮತ್ತು ನಂತರ 1990ರ ದಶಕದಲ್ಲಿ ಹಿಂಸಾಚಾರಕ್ಕೆ ಬೆದರಿ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದಿದ್ದಾರೆ. ಬಿಂದ್ರೂ ಅವರಂತಹ ಕೆಲವರಷ್ಟೇ ಅಲ್ಲಿ ಉಳಿದಿದ್ದಾರೆ.

ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಹಿಂಸಾಚಾರ ನಡೆಸುವ ಪ್ರವೃತ್ತಿ ಕಾಶ್ಮೀರದಲ್ಲಿ ಹಿಂದೆ ಕಂಡು ಬಂದಿರಲಿಲ್ಲ. ಹಾಗಾಗಿಯೇ ಕೋಮು ಸಾಮರಸ್ಯ ಮೂಡಿತ್ತು. ಈ ಸಾಮರಸ್ಯವನ್ನು ಕದಡುವುದೇ ಈಗಿನ ಹತ್ಯೆಗಳ ಹಿಂದಿರುವ ಉದ್ದೇಶ ಎಂದು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಅವರೂ ಹೇಳಿದ್ದಾರೆ.

ADVERTISEMENT

ವಿಶೇಷ ಸ್ಥಾನ ರದ್ದತಿ ಮತ್ತು ಕಾಶ್ಮೀರದ ಹೊರಗಿನವರು ಜಮೀನು ಖರೀದಿಸಲು ದೊರಕಿರುವ ಅವಕಾಶದ ಬಗ್ಗೆ ಕಾಶ್ಮೀರದ ಜನರಲ್ಲಿ ಅನುಮಾನ ಇದೆ. ಕಾಶ್ಮೀರದ ಜನಸಂಖ್ಯಾ ಚಿತ್ರಣವನ್ನು ಬದಲಾಯಿಸಿ, ಈಗ ಬಹುಸಂಖ್ಯಾತರಾಗಿರುವ ಮುಸ್ಲಿಮರನ್ನು ಅಲ್ಪಸಂಖ್ಯಾತರನ್ನಾಗಿಸುವ ಹುನ್ನಾರ ಕೇಂದ್ರ ಸರ್ಕಾರದ್ದು ಎಂದು ಅವರು ಭಾವಿಸಿದ್ದಾರೆ. ಈ ಭಾವನೆಯನ್ನೇ ಉಗ್ರರು ತಮ್ಮ ಷಡ್ಯಂತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪಂಡಿತ ಸಮುದಾಯದಲ್ಲಿ ಭೀತಿ ಮೂಡಿಸುವುದೇ ಬಿಂದ್ರೂ ಹತ್ಯೆಯ ಹಿಂದಿನ ಉದ್ದೇಶ. ಬಿಂದ್ರೂ ಅವರು ಆರ್‌ಎಸ್‌ಎಸ್‌ ಪರವಾಗಿ ಕೆಲಸ ಮಾಡುತ್ತಿದ್ದರು ಎಂಬ ಹುಸಿ ಆರೋಪವನ್ನು ಉಗ್ರರು ಮಾಡಿದ್ದಾರೆ. ಕಣಿವೆಯ ಹಿಂದೂ–ಮುಸ್ಲಿಮರ ನಡುವೆ ಅಪನಂಬಿಕೆ ಮೂಡಿಸುವ ಹುನ್ನಾರ ಇದರ ಹಿಂದೆ ಇದೆ. 

ಶ್ರೀನಗರದ ಈದ್ಗಾ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ನುಗ್ಗಿದ್ದ ಉಗ್ರರು ಪ್ರಾಂಶುಪಾಲೆ ಸತೀಂದರ್‌ ಕೌರ್‌ ಮತ್ತು ಶಿಕ್ಷಕ ದೀಪಕ್‌ ಚಂದ್‌ ಅವರನ್ನು ಹತ್ಯೆ ಮಾಡಿದ್ದಾರೆ. ಸತೀಂದರ್‌ ಅವರು ಸಿಖ್‌ ಮತ್ತು ಚಂದ್‌ ಅವರು ಹಿಂದೂ ಧರ್ಮಕ್ಕೆ ಸೇರಿದವರು. ಬಿಂದ್ರೂ ಅವರ ಹತ್ಯೆಯ ದಿನವೇ, ಬಿಹಾರ ಮೂಲದ ವೀರೇಂದ್ರ ಪಾಸ್ವಾನ್‌ ಎಂಬ ಬೀದಿಬದಿ ವ್ಯಾಪಾರಿಯನ್ನೂ ಉಗ್ರರು ಹತ್ಯೆ ಮಾಡಿದ್ದಾರೆ. 

2019ರಲ್ಲಿಯೂ ಇಂತಹ ಕಾರ್ಯತಂತ್ರವನ್ನು ಉಗ್ರರು ಅನುಸರಿಸಿದ್ದರು. ಪಶ್ಚಿಮ ಬಂಗಾಳದ ಐವರು ಕಾರ್ಮಿಕರನ್ನು 2019ರ ಅಕ್ಟೋಬರ್‌ನಲ್ಲಿ ಉಗ್ರರು ಹತ್ಯೆ ಮಾಡಿದ್ದರು. ಇವರೆಲ್ಲರೂ ಮುಸ್ಲಿಮರು. ಹಾಗೆಯೇ, ಸುಮಾರು 40 ವರ್ಷಗಳಿಂದ ಕಾಶ್ಮೀರದಲ್ಲಿ ಆಭರಣ ವ್ಯಾಪಾರಿಯಾಗಿದ್ದ ಪಂಜಾಬ್‌ ಮೂಲದ ಸತ್ಪಾಲ್‌ ನಿಶ್ಚಲ್‌ಗೆ ಕಾಶ್ಮೀರದ ನಿವಾಸಿ ಎಂಬ ಪ್ರಮಾಣಪತ್ರ 2020ರ ಡಿಸೆಂಬರ್‌ನಲ್ಲಿ ಸಿಕ್ಕಿತ್ತು. ಡಿಸೆಂಬರ್‌ 31ರಂದು ಅವರನ್ನು ಉಗ್ರರು ಕೊಂದಿದ್ದರು. 

ಈ ರೀತಿಯ ಹತ್ಯೆಯ ಮೂಲಕ, ಕಾಶ್ಮೀರದ ಜನರ ಹಕ್ಕುಗಳ ರಕ್ಷಕರು ತಾವು ಎಂದು ಬಿಂಬಿಸಿ ಕಾಶ್ಮೀರಿಗರ ಸಹಾನುಭೂತಿ ಪಡೆದುಕೊಳ್ಳುವ, ಕೋಮು ಸಾಮರಸ್ಯ ಕದಡುವ ಎರಡೆರಡು ಕಾರ್ಯಸೂಚಿಯನ್ನು ಉಗ್ರರು ಹೊಂದಿರುವುದು ನಿಚ್ಚಳವಾಗಿದೆ.

ಕಾಶ್ಮೀರದಲ್ಲಿ ‘ಹೈಬ್ರಿಡ್’ ಉಗ್ರರ ಉಪಟಳ

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ‘ಹೈಬ್ರಿಡ್’ ಉಗ್ರರನ್ನು (ತಾತ್ಕಾಲಿಕ ಉಗ್ರರು) ಬಳಸಿಕೊಂಡು ಕಣಿವೆಯ ವಾತಾವರಣ ಕದಡಲು ಯತ್ನಿಸುತ್ತಿವೆ. ಹೈಬ್ರಿಡ್ ಉಗ್ರರು ಬೇರಾರೂ ಅಲ್ಲ, ಅವರೆಲ್ಲರೂ ಕಾಶ್ಮೀರದ ಯುವಕರೇ ಎಂದು ಖಚಿತ ಮೂಲಗಳನ್ನು ಆಧರಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ಯುವಕರು ಪೂರ್ಣಪ್ರಮಾಣದ ಉಗ್ರರಲ್ಲ. ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾಶ್ಮೀರದ ಯುವಕರನ್ನು ನಾಗರಿಕರ ಹತ್ಯೆಗಳಂತಹ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ.

ಈ ಎಲ್ಲ ನಾಗರಿಕ ಹತ್ಯೆ ಪ್ರಕರಣಗಳಲ್ಲಿ ಪಿಸ್ತೂಲ್ ಬಳಕೆಯಾಗಿದೆ. ಹೊಸದಾಗಿ ನೇಮಕವಾದವರು ಅಥವಾ ಸಂಘಟನೆ ಸೇರುವ ಹಂತದಲ್ಲಿರುವ ಯುವಕರು ಈ ಕೃತ್ಯಗಳನ್ನು ಎಸಗಿದ್ದಾರೆ. ಅಚ್ಚರಿಯೆಂದರೆ, ನಾಗರಿಕರ ಹತ್ಯೆ ಕೆಲಸ ಪೂರ್ಣಗೊಂಡ ಬಳಿಕ ಅವರು ತಮ್ಮ ಎಂದಿನ ಕೆಲಸಗಳಿಗೆ ಮರಳುತ್ತಾರೆ. ಹೀಗಾಗಿ ಇವರನ್ನು ಶಂಕಿತರು ಎಂದು ಗುರುತಿಸಲು ಕಷ್ಟವಾಗುತ್ತಿದೆ. ಇವರು ಪೊಲೀಸರು ಅಥವಾ ಗುಪ್ತಚರ ಸಂಸ್ಥೆಗಳ ನಿಗಾ ಪಟ್ಟಿಯಲ್ಲೂ ಇಲ್ಲ. ಸಾಮಾನ್ಯ ಜನರನ್ನೇ ಈ ಕೃತ್ಯಗಳಿಗೆ ಆಯ್ಕೆ ಮಾಡುವ ಉಗ್ರರ ತಂತ್ರ ಕಣಿವೆಯಲ್ಲಿ ಕೆಲಸ ಮಾಡುತ್ತಿದೆ.    

ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ರದ್ದತಿಗೂ ಮುನ್ನ ನಡೆಯುತ್ತಿದ್ದ ದಾಳಿಗಳು ಹಾಗೂ ಉಗ್ರರ ಒಳನುಸುಳುವಿಕೆಗೆ ಕಾಶ್ಮೀರದಲ್ಲಿ ನೇಮಕ ಮಾಡಲಾದ ಉಗ್ರರ ಜೊತೆಗೆ ಪಾಕಿಸ್ತಾನದ ಮೂಲದ ಹಾಗೂ ಅಲ್ಲಿ ತರಬೇತಿ ಪಡೆದವರನ್ನು ನಿಯೋಜಿಸಲಾಗುತ್ತಿತ್ತು. ಆದರೆ ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಕಾರಣ, ಅಲ್ಲಿ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಹೀಗಾಗಿ ಉಗ್ರರೂ ಹೊಸ ರೀತಿಯ ಷಡ್ಯಂತ್ರದ ಮೊರೆ ಹೋಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಈಗ ಕಾಶ್ಮೀರದ ಯುವಕರನ್ನು ಉಗ್ರಗಾಮಿ ಸಂಘಟನೆಗೆ ನೇರವಾಗಿ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ನೇಮಕಾತಿ ಮಾಡಿಕೊಂಡರೂ ಅವರಿಗೆ ಒಂದು ಕೆಲಸ ನಿಯೋಜಿಸಿ, ಮತ್ತೆ ಅವರು ತಮ್ಮ ಕೆಲಸಕ್ಕೆ ವಾಪಸಾಗುವಂತೆ ಸೂಚಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಪೊಲೀಸರು ಹಾಗೂ ಗುಪ್ತಚರ ವಿಭಾಗದ ನಿಗಾದಿಂದ ತಪ್ಪಿಸಿಕೊಳ್ಳಬಹುದು ಎಂಬುದು ಉಗ್ರ ಸಂಘಟನೆಗಳ ಲೆಕ್ಕಾಚಾರ. ಇದೇ ಯೋಜನೆಯನ್ನು ಉಗ್ರರು ಕಾರ್ಯಗತಗೊಳಿಸಿ, ಇದೇ ವರ್ಷ 28 ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಕಾಶ್ಮೀರದ ಐ.ಜಿ. ವಿಜಯ್ ಕುಮಾರ್ ಹೇಳಿದ್ದಾರೆ. 

ನಾಗರಿಕರ ಹತ್ಯೆ ಘಟನೆಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಭದ್ರತಾಪಡೆಗಳು ಇಂತಹ ಕೆಲವು ನಾಗರಿಕರನ್ನು ಗುರುತಿಸಿವೆ. ಹೈಬ್ರಿಡ್ ಭಯೋತ್ಪಾದಕರನ್ನು ಸೆರೆಹಿಡಿಯಲು ಭದ್ರತಾ ಪಡೆಗಳ ಸಹಕಾರದೊಂದಿಗೆ ಕಾರ್ಯಾಚರಣೆ  ನಡೆಸಲಾಗುತ್ತಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ. 

‘ಭಾರಿ ಸಂಖ್ಯೆಯ ಭಯೋತ್ಪಾದಕರ ಹತ್ಯೆ ಹಾಗೂ ಉಗ್ರರ ಬೆಂಬಲ ವ್ಯವಸ್ಥೆ ನಿಷ್ಕ್ರಿಯವಾಗಿರುವುದು ಭಯೋತ್ಪಾದಕ ಸಂಘಟನೆಗಳಲ್ಲಿ ನಿರಾಶೆ ಮೂಡಿಸಿದೆ. ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿರುವ ಅವರು, ಮಹಿಳೆಯರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಗುರಿಯಾಗಿಸಲು ಪ್ರಾರಂಭಿಸಿದ್ದಾರೆ’ ಎಂದಿದ್ದಾರೆ. 

400 ಜನರ ವಶ

ಸರಣಿ ಹತ್ಯೆಗಳನ್ನು ನಿಲ್ಲಿಸುವುದಕ್ಕಾಗಿ ಭದ್ರತಾ ಪಡೆಗಳು ತ್ವರಿತ ಕಾರ್ಯಾಚರಣೆ ನಡೆಸುತ್ತಿವೆ. ಪ್ರತ್ಯೇಕತಾವಾದಿಗಳ ಸಂಪರ್ಕ ಹೊಂದಿರುವ ಆರೋಪದ ಮೇಲೆ ಈವರೆಗೆ ಸುಮಾರು 400ಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ ಮತ್ತು ಬಂಧಿಸಿವೆ. ಜಮಾತ್‌–ಎ–ಇಸ್ಲಾಮಿ, ತೆಹ್ರೀಕ್‌–ಎ–ಹುರಿಯತ್‌ ಸಂಘಟನೆಗಳ ಸದಸ್ಯರು, ಭೂಗತರಾಗಿ ಭಯೋತ್ಪಾದಕ ಕಾರ್ಯಾಚರಣೆ ನಡೆಸುವವರು, ಭದ್ರತಾ ಪಡೆ ಮತ್ತು ನಾಗರಿಕರ ಮೇಲೆ ಕಲ್ಲು ತೂರಾಟ ಮಾಡಿದ್ದವರು ಬಂಧಿತರಲ್ಲಿ ಸೇರಿದ್ದಾರೆ. 

ಈ ಸರಣಿ ಹತ್ಯೆಗಳನ್ನು ನಡೆಸಿದ ದ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಉಗ್ರರ ಕುರಿತು ಭದ್ರತಾ ಸಂಸ್ಥೆಗಳಿಗೆ ಈ ಮೊದಲು ಯಾವ ಸುಳಿವೂ ಇರಲಿಲ್ಲ. ಈಗ ಹತ್ಯೆಗಳ ಹಿಂದಿನ ಕಾರ್ಯತಂತ್ರದ ಬಗ್ಗೆ ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿದೆ. ನಾಗರಿಕರ ಮೇಲೆ ನಡೆಯುತ್ತಿರುವ ದಾಳಿಯ ಸರಪಳಿಯನ್ನು ಮುರಿಯುವ ಸಲುವಾಗಿ ಶಂಕಿತರನ್ನು ಬಂಧನದಲ್ಲಿ ಇರಿಸಲಾಗಿದೆ. ಅತಿ ಹೆಚ್ಚು ಹತ್ಯೆಗಳು ವರದಿಯಾಗಿರುವುದು ಶ್ರೀನಗರದಲ್ಲಿ. ಇಲ್ಲಿಯೇ ಸುಮಾರು 70 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಇತ್ತೀಚೆಗೆ ನಡೆದ ದಾಳಿಗಳ ಬಗ್ಗೆ ಅವರಿಂದ ಸದ್ಯಕ್ಕೆ ಪೊಲೀಸರಿಗೆ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಂಸ್ಥೆಗಳಿಗೆ ಸಹಕಾರ ನೀಡಲು ರಾ, ಗುಪ್ತಚರ ಇಲಾಖೆ, ಒಳನುಸುಳುವಿಕೆ ನಿಗ್ರಹ ಪರಿಣಿತರ ತಂಡ ಕಾಶ್ಮೀರಕ್ಕೆ ತೆರಳಿವೆ. ಇದೇ ವೇಳೆ, ನಾಗರಿಕರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುತ್ತಿರುವ ಮೊಕದ್ದಮೆ ಸಂಬಂಧ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) 40 ಶಿಕ್ಷಕರಿಗೆ ಸಮನ್ಸ್‌ ಜಾರಿ ಮಾಡಿದೆ. ಅದರಂತೆ ಆ ಶಿಕ್ಷಕರು ವಿಚಾರಣೆಗೆ ಒಳಪಡಲಿದ್ದಾರೆ.

ಕಾರ್ಗೊಗೆ ಎಸ್‌ಪಿ ನೇಮಕ: ‘ಕಾರ್ಗೊ’ ಎಂದು ಕರೆಯಲಾಗುವ ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಾರ್ಯಪಡೆಗೆ (ಎಸ್‌ಒಜಿ) ಐದು ತಿಂಗಳುಗಳ ಬಳಿಕ ಪೂರ್ಣಾವಧಿ ಎಸ್‌ಪಿಯನ್ನು ನೇಮಿಸಲಾಗಿದೆ. ಸರಣಿ ದಾಳಿಗಳು ನಡೆದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಉಗ್ರರ ಚಟುವಟಿಕೆಯ ಏರಿಳಿತ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ರದ್ದತಿಯ ನಂತರ, ಅಲ್ಲಿ ಉಗ್ರರ ಚಟುವಟಿಕೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. 2019ರ ಆಗಸ್ಟ್‌ 5ರಂದು ವಿಶೇ‍‍ಷ ಸ್ಥಾನ ರದ್ದು ಮಾಡಿದ ನಂತರ, ಭಯೋತ್ಪಾದಕ ಚಟುವಟಿಕೆ, ನಾಗರಿಕರ ಹತ್ಯೆಯಲ್ಲಿ ಏರಿಳಿತ ಕಂಡು ಬಂದಿದೆ. 2018ಕ್ಕೆ ಹೋಲಿಸಿದರೆ, 2019ರಲ್ಲಿ ಮತ್ತು 2020ರಲ್ಲಿ ಕಡಿಮೆ ಘಟನೆಗಳು ವರದಿಯಾಗಿವೆ. ಆದರೆ 2021ರಲ್ಲಿ ಎಷ್ಟು ಘಟನೆಗಳು ಜರುಗಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ.

* 2018ಕ್ಕೆ ಹೋಲಿಸಿದರೆ 2019ರಲ್ಲಿ ಕಲ್ಲುತೂರಾಟದ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2020ರಲ್ಲಿ ಮತ್ತು 2021ರಲ್ಲಿ ಎಷ್ಟು ಘಟನೆಗಳು ವರದಿಯಾಗಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ

* 2019ರ ನಂತರ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗಳ ಸಂಖ್ಯೆ ಇಳಿಕೆಯಾಗಿದೆ

* 2018ರಲ್ಲಿ ಉಗ್ರರ ದಾಳಿಯಲ್ಲಿ 38 ನಾಗರಿಕರಷ್ಟೇ ಮೃತಪಟ್ಟಿದ್ದರು. 2019ರಲ್ಲಿ ಈ ಸಂಖ್ಯೆ 54ಕ್ಕೆ ಏರಿಕೆಯಾಗಿತ್ತು. 2020ರಲ್ಲಿ 45ಕ್ಕೆ ಇಳಿಕೆಯಾಗಿದೆ. ಆದರೆ 2018ಕ್ಕೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚೇ ಇದೆ

* 2018ಕ್ಕೆ ಹೋಲಿಸಿದರೆ, ಸೇನೆ ಮತ್ತು ಪೊಲೀಸ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರ ಸಂಖ್ಯೆಯೂ ನಂತರದ ವರ್ಷಗಳಲ್ಲಿ ಇಳಿಕೆಯಾಗಿದೆ. ಭದ್ರತಾ ಸಿಬ್ಬಂದಿಯ ಸಾವಿನ ಸಂಖ್ಯೆಯೂ ಇಳಿಕೆಯಾಗಿದೆ

ಸಾರಾಂಶ

ಐದು ದಿನಗಳಲ್ಲಿ ಏಳು ಮಂದಿ ನಾಗರಿಕರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡುವುದರೊಂದಿಗೆ ದೇಶದ ಗಮನವು ಮತ್ತೆ ಕಾಶ್ಮೀರದತ್ತ ಹರಿದಿದೆ. ಈ ಘಟನೆಗಳಿಂದಾಗಿ ಅಲ್ಲಿ ಈ ವರ್ಷ ಈವರೆಗೆ 25ಕ್ಕೂ ಹೆಚ್ಚು ನಾಗರಿಕರ ಹತ್ಯೆ ಆಗಿದೆ ಎಂಬುದೂ ಚರ್ಚೆಗೆ ಬಂತು. ಉಗ್ರರ ಕಾರ್ಯಾಚರಣೆ ವಿಧಾನದಲ್ಲಿ ಬದಲಾವಣೆ ಆಗಿರುವುದನ್ನು ಈ ವರ್ಷದ ನಾಗರಿಕರ ಹತ್ಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಜತೆಗೆ, ಹತ್ಯೆಗೆ ಉಗ್ರರು ಗುರಿ ಮಾಡಿರುವ ವ್ಯಕ್ತಿಗಳನ್ನು ಗಮನಿಸಿದರೆ, ಯಾವುದೋ ನಿರ್ದಿಷ್ಟ ಗುರಿಯನ್ನು ಉಗ್ರರು ಹಾಕಿಕೊಂಡಿದ್ದಾರೆ ಎಂಬುದೂ ಅರಿವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.