ADVERTISEMENT

ಆಳ–ಅಗಲ: ಕೋವಿಡ್ ದೃಢ ದರ– ರಾಜ್ಯಗಳ ನಡುವೆ ಭಾರಿ ಅಂತರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 19:31 IST
Last Updated 20 ಜನವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    
""
""
""
""

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಭಾರತದಲ್ಲಿ ತೀವ್ರಗತಿಯಲ್ಲಿ ಹರಡಲು ಶುರು ಮಾಡಿದ ಬಳಿಕ ದೇಶದಲ್ಲಿ ಕೋವಿಡ್ ದೃಢಪಡುವ ದರ (ಪಾಸಿಟಿವಿಟಿ ದರ) ಗಣನೀಯವಾಗಿ ಏರಿಕೆಯಾಗಿದೆ. ಡಿಸೆಂಬರ್ ಕೊನೆಯ ಹೊತ್ತಿಗೆ ದೇಶದಲ್ಲಿ ಛಾಪು ಮೂಡಿಸಿದ್ದ ಓಮೈಕ್ರಾನ್, ಜನವರಿ ತಿಂಗಳಿನಲ್ಲಿ ಇಡೀ ದೇಶವನ್ನು ವ್ಯಾಪಿಸಿದ್ದು, ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಲು ಕಾರಣವಾಗಿದೆ. 

ಬಹುತೇಕ ರಾಜ್ಯಗಳಲ್ಲಿ ಕೋವಿಡ್ ದೃಢಪಡುವ ದರ ಐದಾರು ಪಟ್ಟು ಹೆಚ್ಚಳವಾಗಲು ಈ ವೈರಾಣು ಕಾರಣವಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ವಿವಿಧ ರಾಜ್ಯಗಳಲ್ಲಿ ಶೇ 1ರಷ್ಟೂ ಇರದ ದೃಢಪಡುವ ದರ, ಜನವರಿ ತಿಂಗಳ ಮೊದಲ ವಾರದಲ್ಲೇ ಶೇ 2ರಿಂದ ಶೇ 5ರವರೆಗೂ ಏರಿಕೆಯಾಗಿತ್ತು. ವಿವಿಧ ರಾಜ್ಯಗಳಲ್ಲಿ ಕೋವಿಡ್ ದೃಢಪಡುವ ದರದಲ್ಲಿ ಸಾಕಷ್ಟು ಅಂತರವಿದೆ. ಜನವರಿ 3ನೇ ವಾರದ ಹೊತ್ತಿಗೆ ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಈ ದರ ಶೇ 5ರ ಒಳಗಿದೆ. ಐದು ರಾಜ್ಯಗಳಲ್ಲಿ ಈ ದರ ಶೇ 10ರ ಒಳಗಿದೆ. ಆದರೆ ಗೋವಾ, ಕೇರಳ ಹಾಗೂ ಪುದುಚೇರಿಗಳಲ್ಲಿ ಈ ದರ ಶೇ 30 ದಾಟಿದೆ. ಪುದುಚೇರಿಯಲ್ಲಿ ಅತಿಹೆಚ್ಚು ಅಂದರೆ, ಶೇ 43ರಷ್ಟು ಪ್ರಕರಣಗಳು ದೃಢಪಡುತ್ತಿವೆ. 

ಕರ್ನಾಟಕದಲ್ಲಿ ನಾಲ್ಕು ವಾರಗಳ ಹಿಂದೆ ಶೇ 0.5ರಷ್ಟಿದ್ದ ಪಾಸಿಟಿವಿಟಿ ದರವು ಈಗ ಶೇ 18ಕ್ಕೆ ಹೆಚ್ಚಳವಾಗಿರುವುದು, ಕೋವಿಡ್ ವ್ಯಾಪಿಸುತ್ತಿರುವ ಪರಿಯನ್ನು ಸೂಚಿಸುತ್ತದೆ. ಹಾಗೆಯೇ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಪ್ರಕರಣಗಳು ದೃಢಪಡುವ ಪ್ರಮಾಣ ಶೇ 20ನ್ನು ದಾಟಿದೆ. ಕೋವಿಡ್ ಎರಡನೇ ಅಲೆಯ ಪ್ರಭಾವ ದೇಶದಲ್ಲಿ ಕಡಿಮೆಯಾದರೂ, ಕೇರಳದಲ್ಲಿ ಮಾತ್ರ ಹಾಗೆಯೇ ಮುಂದುವರಿದಿತ್ತು. ಅಂದಿನಿಂದ ಈವರೆಗೂ ರಾಜ್ಯದಲ್ಲಿ ಸೋಂಕಿತರು ನಿರಂತರವಾಗಿ ಏರಿಕೆಯಾಗುತ್ತಿದ್ದಾರೆ. ಹೀಗಾಗಿ ರಾಜ್ಯದ ಪಾಸಿಟಿವಿಟಿ ದರ ಅತಿಹೆಚ್ಚು ದಾಖಲಾಗಿದೆ. ಮಣಿಪುರದಲ್ಲಿ ಶೇ 4.7ರಷ್ಟಿದ್ದ ಈ ದರ ಶೇ 7.1ಕ್ಕೆ ಹೆಚ್ಚಳವಾಗಿದೆ. 

ADVERTISEMENT

ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಖಚಿತವಾಗುತ್ತಿರುವ ಪ್ರಮಾಣ ಏರುಗತಿಯಲ್ಲಿದ್ದರೆ, ಕೆಲವು ರಾಜ್ಯಗಳಲ್ಲಿ ನಿಧಾನವಾಗಿ  ಇಳಿಕೆಯಾಗುತ್ತಿರುವುದು ಸಮಾಧಾನ ಮೂಡಿಸಿದೆ. ದೆಹಲಿಯಲ್ಲಿ ಶೇ 30ರಷ್ಟಿದ್ದ ಈ ದರವು 23ಕ್ಕೆ ಕುಸಿದಿದೆ. ಇದು ಸಕಾರಾತ್ಮಕವಾಗಿದ್ದರೂ, ಇನ್ನಷ್ಟು ಕುಸಿತ ಆಗುವವರೆಗೂ ನಿರ್ಬಂಧಗಳನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಗೋವಾದಲ್ಲಿ ಕಳೆದ ವಾರ ಶೇ 45ರಷ್ಟು ಇದ್ದ ಈ ದರ, ಪ್ರಸ್ತುತ 38.76ಕ್ಕೆ ಕುಸಿದಿದೆ. ಬಿಹಾರದಲ್ಲಿ ಜನವರಿ 11–15ರ ನಡುವೆ ನಿತ್ಯವೂ 6,300 ಪ್ರಕರಣಗಳು ವರದಿಯಾಗುತ್ತಿದ್ದು, ಇವು ಕ್ರಮೇಣ ಇಳಿಕೆಯಾಗಿವೆ. ಹೀಗಾಗಿ ದೃಢಪಡುವ ಪ್ರಮಾಣವು ಶೇ 3.67ರಿಂದ ಶೇ 2.94ಕ್ಕೆ ಇಳಿಕೆಯಾಗಿದೆ. ಇನ್ನು, ಛತ್ತೀಸಗಡದಲ್ಲೂ ಸೋಂಕಿತರು ಕಡಿಮೆಯಾಗುತ್ತಿದ್ದು, ದೃಢಪಡುವಿಕೆ ದರವು ಶೇ 11.17ರಿಂದ ಶೇ 10.30ಕ್ಕೆ ಇಳಿಕೆಯಾಗಿದೆ. 

ಪಾಸಿಟಿವಿಟಿ: ಭಾರಿ ಪ್ರಮಾಣದಲ್ಲಿ ಏರಿಕೆ

ದೇಶದಲ್ಲಿ ಕೋವಿಡ್‌ ದೃಢಪಡುವ ಪ್ರಮಾಣ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2022ರ ಮೊದಲ ಇಪತ್ತು ದಿನಗಳಲ್ಲಿ ಕೋವಿಡ್‌ ದೃಢಪಡುವ ಪ್ರಮಾಣವು ಶೇ 2.05ರಿಂದ ಶೇ 16.41ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್‌ ದೃಢಪಡುವ ಪ್ರಮಾಣವು ಏರಿಕೆಯಾಗಿದೆ. ಈ ಪ್ರಮಾಣವು 14.36 ಶೇಕಡಾವಾರು ಅಂಶಗಳಷ್ಟು ಏರಿಕಯಾಗಿದೆ. ಇದು ಶೇ 543ರಷ್ಟು ಏರಿಕೆ

ಹೊಸ ಪ್ರಕರಣಗಳ ಜಿಗಿತ

ಈ ವರ್ಷದ ಮೊದಲ ಇಪತ್ತು ದಿನಗಳಲ್ಲಿ ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆ ಹಲವುಪಟ್ಟು ಹೆಚ್ಚಾಗಿದೆ. ಈ ವರ್ಷದ ಮೊದಲ ದಿನ ಪತ್ತೆಯಾಗಿದ್ದ ಹೊಸ ಪ್ರಕರಣಗಳ ಸಂಖ್ಯೆ 22,775ರಷ್ಟಿತ್ತು. ಆದರೆ 20 ದಿನಗಳ ನಂತರ ಈ ಸಂಖ್ಯೆ 3 ಲಕ್ಷವನ್ನು ದಾಟಿದೆ. ಆದರೆ ಈ ಅವಧಿಯಲ್ಲಿ ಪ್ರತಿದಿನ ನಡೆಸಲಾಗುತ್ತಿರುವ ಕೋವಿಡ್‌ ಪರೀಕ್ಷೆಗಳ ಸಂಖ್ಯೆ 11 ಲಕ್ಷದಿಂದ 19 ಲಕ್ಷಕ್ಕೆ ಏರಿಕೆಯಾಗಿದೆ. ಈಗ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ರೋಗದ ತೀವ್ರತೆ ಕಡಿಮೆ ಇರುವ ಕಾರಣ, ಪರೀಕ್ಷೆಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವೇ ಸೂಚನೆ ನೀಡಿದೆ.

* ಈ ವರ್ಷದ ಆರಂಭದಲ್ಲಿ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆಯು ನಾಲ್ಕು ದಿನಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿತ್ತು

* ಜನವರಿ ಮೊದಲ ವಾರದ ಅಂತ್ಯದ ವೇಳೆಗೆ ಹೊಸ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವ ಅವಧಿಯು ಎರಡು ದಿನಗಳಿಗೆ ಕುಸಿದಿತ್ತು

* ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸದೇ ಇರುವ ಕಾರಣ, ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆಯ ಏರಿಕೆಯೂ ಇಳಿಕೆಯಾಗಿದೆ

* ಈಗ ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಏಳರಿಂದ ಎಂಟು ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದೆ

ಗುಣಮುಖರೇ ಹೆಚ್ಚು

ದೇಶದಲ್ಲಿ ಈಗ ಪತ್ತೆಯಾಗಿರುವ ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ ಶೇ 93ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಪ್ರಮಾಣ ಶೇ 2ಕ್ಕಿಂತಲೂ ಕಡಿಮೆ ಇದೆ. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ, ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಬೀಳುವ ಕೋವಿಡ್‌ ರೋಗಿಗಳ ಪ್ರಮಾಣ ಕಡಿಮೆ ಇದೆ.

ಈಗ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ರೋಗದ ತೀವ್ರತೆ ಕಡಿಮೆ ಇದೆ ಎಂದು ಸರ್ಕಾರದ ಸಂಸ್ಥೆಗಳು ಹೇಳಿವೆ. ಆದರೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಡೆಗಣಿಸಬಾರದು ಎಂದೂ ಈ ಸಂಸ್ಥೆಗಳು ಹೇಳಿವೆ. ರೋಗದ ತೀವ್ರತೆ ಕಡಿಮೆ ಇದ್ದರೂ, ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ಏರಿಕೆಯಾಗುತ್ತಿದೆ. ಜನವರಿ ಆರಂಭದಲ್ಲಿ ಪ್ರತಿದಿನ ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ 100ರ ಆಸುಪಾಸಿನಲ್ಲಿತ್ತು. ಈಗ ಈ ಸಂಖ್ಯೆ 500ರ ಆಸುಪಾಸಿಗೆ ಏರಿಕೆಯಾಗಿದೆ.

ಸಾರಾಂಶ

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಭಾರತದಲ್ಲಿ ತೀವ್ರಗತಿಯಲ್ಲಿ ಹರಡಲು ಶುರು ಮಾಡಿದ ಬಳಿಕ ದೇಶದಲ್ಲಿ ಕೋವಿಡ್ ದೃಢಪಡುವ ದರ (ಪಾಸಿಟಿವಿಟಿ ದರ) ಗಣನೀಯವಾಗಿ ಏರಿಕೆಯಾಗಿದೆ. ಡಿಸೆಂಬರ್ ಕೊನೆಯ ಹೊತ್ತಿಗೆ ದೇಶದಲ್ಲಿ ಛಾಪು ಮೂಡಿಸಿದ್ದ ಓಮೈಕ್ರಾನ್, ಜನವರಿ ತಿಂಗಳಿನಲ್ಲಿ ಇಡೀ ದೇಶವನ್ನು ವ್ಯಾಪಿಸಿದ್ದು, ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಲು ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.