ADVERTISEMENT

ದೇಶದಲ್ಲಿ ಕಲ್ಲಿದ್ದಲು ಕೊರತೆ: ಕಾರಣವೇನು? ಪರಿಣಾಮಗಳೇನು? ಇಲ್ಲಿದೆ ವಿವರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 2:07 IST
Last Updated 12 ಅಕ್ಟೋಬರ್ 2021, 2:07 IST
   

ದೇಶದಲ್ಲಿ ಈಗ ಎದುರಾಗಿರುವ ಕಲ್ಲಿದ್ದಲು ಕೊರತೆಗೆ ಸರ್ಕಾರವು ಹಲವು ಕಾರಣಗಳನ್ನು ಮುಂದಿಡುತ್ತಿದೆ. ಮುಖ್ಯವಾಗಿ ಭಾರಿ ಮಳೆಯಿಂದ ಕಲ್ಲಿದ್ದಲು ಗಣಿಗಳು ಕೆಲಸ ಮಾಡುತ್ತಿಲ್ಲ ಮತ್ತು ವಿದ್ಯುತ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ ಪರಿಸ್ಥಿತಿಗೆ ಸರ್ಕಾರವು ಮೂರು ಪ್ರಮುಖ ಕಾರಣಗಳನ್ನು ಬೊಟ್ಟುಮಾಡಿ ತೋರಿಸುತ್ತಿದೆ.

1. ಅತಿ ಮಳೆಯಿಂದ ಕಲ್ಲಿದ್ದಲು ಕೊರತೆ

ಈ ಸಾಲಿನ ಮುಂಗಾರಿನ ಅವಧಿ ದೀರ್ಘವಾಗಿದೆ. ಛತ್ತೀಸಗಡ, ಜಾರ್ಖಂಡ್‌ನಲ್ಲಿನ ಬಹುತೇಕ ಕಲ್ಲಿದ್ದಲು ಗಣಿಗಳು ಜಲಾವೃತವಾಗಿ ಕಲ್ಲಿದ್ದಲ್ಲನ್ನು ತೆಗೆಯಲು ಸಾಧ್ಯವಾಗಿಲ್ಲ. ಮುಂಗಾರಿನ ಅವಧಿಯಲ್ಲಿ ಎಷ್ಟೋ ದಿನ ಕಲ್ಲಿದ್ದಲು ಗಣಿಗಳು ಕಾರ್ಯನಿರ್ವಹಿಸಿಲ್ಲ. ಆ ಅವಧಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸಿಲ್ಲ. ಆದರೆ ಅದೇ ಅವಧಿಯಲ್ಲಿ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ. ಅಲ್ಲಿನ ಸಂಗ್ರಹ ಮುಗಿಯುತ್ತಾ ಬಂದಿದೆ. ಆದರೆ ನಿರೀಕ್ಷಿತ ಅವಧಿಯಲ್ಲಿ ಕಲ್ಲಿದ್ದಲು ಗಣಿಗಳು ಕಾರ್ಯಾರಂಭ ಮಾಡದೇ ಇದ್ದ ಕಾರಣ ಕಲ್ಲಿದ್ದಲು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರಲಿಲ್ಲ. ಹೀಗಾಗಿ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಾಗಿದೆ. ಈಗ ಗಣಿಗಳು ಕಾರ್ಯಾರಂಭ ಮಾಡಿದ್ದು, ಕಡಿಮೆ ಸಂಗ್ರಹವಿರುವ ಸ್ಥಾವರಗಳಿಗೆ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸರ್ಕಾರವು ಹೇಳಿದೆ. 

ADVERTISEMENT

2. ಆಮದು ಸಮಸ್ಯೆ

ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲಿನ ಸಮಸ್ಯೆ ಉಂಟಾಗಿದೆ. ಚೀನಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಹಲವು ದೇಶಗಳಿಗೆ ಕಲ್ಲಿದ್ದಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವೂ ಕಲ್ಲಿದ್ದಲನ್ನು ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಲ್ಲಿದ್ದಲಿನ ಕೊರತೆ ಇರುವ ಕಾರಣ, ಭಾರತಕ್ಕೂ ಕಲ್ಲಿದ್ದಲು ಆಮದು ಆಗುವಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ದೇಶದ ಕಲ್ಲಿದ್ದಲಿನ ಗಣಿಗಳ ಮೇಲೆ ಒತ್ತಡ ಹೆಚ್ಚಾಗಿದೆ. 

3. ಅತಿಯಾದ ಬೇಡಿಕೆ

ಕೋವಿಡ್‌ನ ಎರಡನೇ ಲಾಕ್‌ಡೌನ್‌ ತೆರವಾದ ನಂತರ ದೇಶದ ಎಲ್ಲೆಡೆ ಆರ್ಥಿಕ ಚಟುವಟಿಕೆ ಪುನರಾರಂಭವಾಗಿದೆ. ಕೈಗಾರಿಕೆಗಳು, ವಿದ್ಯುತ್ ಹೆಚ್ಚು ಬಳಸುವ ಸೇವಾ ಕ್ಷೇತ್ರಗಳು ಕೆಲಸ ಶುರು ಮಾಡಿವೆ. ಹೀಗಾಗಿ ದೇಶದಲ್ಲಿ ಈ ಹಿಂದಿಗಿಂತ ವಿದ್ಯುತ್‌ಗೆ ಹೆಚ್ಚು ಬೇಡಿಕೆ ಇದೆ. ಆ ಬೇಡಿಕೆಯನ್ನು ಪೂರೈಸಲು, ಉಷ್ಣ ವಿದ್ಯುತ್ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತದೆ. ಈ ಬಾರಿ ಮುಂಗಾರಿನ ಅವಧಿ ದೀರ್ಘವಾಗಿದ್ದ ಕಾರಣ ಹೆಚ್ಚು ವಿದ್ಯುತ್ ಬಳಕೆ ಮಾಡಲಾಗಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ಸಂಗ್ರಹದಲ್ಲಿದ್ದ ಕಲ್ಲಿದ್ದಲನ್ನು ಬಳಸಲಾಗಿದೆ. ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಲು ಅಥವಾ ಮುಗಿಯಲೂ ಇದೂ ಒಂದು ಪ್ರಮುಖ ಕಾರಣ ಎಂದು ಸರ್ಕಾರ ಹೇಳಿದೆ.

ಆದರೆ 2020-21ನೇ ಸಾಲಿನಲ್ಲಿ ಬಳಕೆಯಾದ ಒಟ್ಟು ವಿದ್ಯುತ್‌ಗೆ ಹೋಲಿಸಿದರೆ, 2021-22ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಬಳಕೆಯಾದ ವಿದ್ಯುತ್‌ನ ಪ್ರಮಾಣ ಇಳಿಕೆಯಾಗಿದೆ. 2020-21ನೇ ಸಾಲಿನಲ್ಲಿ ಒಟ್ಟು 1.27 ಲಕ್ಷ ಕೋಟಿ ಯುನಿಟ್‌ಗಳಿಗೆ ಬೇಡಿಕೆ ಬಂದಿತ್ತು. ಆದರೆ 2021-22ನೇ ಆರ್ಥಿಕ ವರ್ಷದ (ಏಪ್ರಿಲ್‌ನಿಂದ ಆಗಸ್ಟ್‌ ಅಂತ್ಯದವರೆಗೆ) ಕೇವಲ 46,624 ಕೋಟಿ ಯುನಿಟ್‌ಗಳಿಗೆ ಬೇಡಿಕೆ ಬಂದಿದೆ. ಅರ್ಧ ವರ್ಷ ಕಳೆದರೂ ಈ ಹಿಂದಿನ ವರ್ಷದಲ್ಲಿದ್ದ ಬೇಡಿಕೆಯಲ್ಲಿ ಅರ್ಧದಷ್ಟೂ ಬೇಡಿಕೆ ಬಂದಿಲ್ಲ. ಆದರೆ, ‘ಬೇಡಿಕೆ ಹೆಚ್ಚಿದ ಕಾರಣ, ಅದನ್ನು ಪೂರೈಸಲು ಹೆಚ್ಚುವರಿ ಕಲ್ಲಿದ್ದಲು ಬಳಕೆ ಮಾಡಲಾಗಿದೆ. ಹೀಗಾಗಿ ಕಲ್ಲಿದ್ದಲು ಕೊರತೆಯಾಗಿದೆ’ ಎಂದು ಸರ್ಕಾರ ಹೇಳುತ್ತಿದೆ. 

ಪರಿಣಾಮಗಳು

ಆರ್ಥಿಕ ಚಟುವಟಿಕೆ ಮತ್ತೆ ಕುಸಿಯುವ ಸಾಧ್ಯತೆ: ಕಲ್ಲಿದ್ದಲಿನ ಕೊರತೆ ಕಾರಣ ವಿದ್ಯುತ್‌ ಉತ್ಪಾದನೆಯಲ್ಲಿ ಕಡಿತವಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದ ಉದ್ಯಮಗಳು ಈಗ ಚೇತರಿಕೆಯ ಹಾದಿಯಲ್ಲಿವೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2021ರ ಆಗಸ್ಟ್‌ನಲ್ಲಿದ್ದ ವಿದ್ಯುತ್‌ ಬೇಡಿಕೆಯು 2019ರ ಆಗಸ್ಟ್‌ನ ವಿದ್ಯುತ್ ಬೇಡಿಕೆಗಿಂತ ಶೇ 17ರಷ್ಟು ಜಾಸ್ತಿ ಇದೆ. ಇಂಥ ಸಮಯದಲ್ಲಿ ಉದ್ಯಮಗಳಿಗೆ ವಿದ್ಯುತ್‌ ಕೊರತೆ ಕಾಡಿದರೆ ದೇಶದಲ್ಲಿ ಆರ್ಥಿಕ ಚೇತರಿಕೆಗೆ ಮತ್ತೆ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಅಕ್ಟೋಬರ್‌ ಎರಡನೇ ವಾರದಿಂದ ದೇಶದಲ್ಲಿ ಸಾಲುಸಾಲು ಹಬ್ಬಗಳು ಶುರುವಾಗುವುದರಿಂದ ಹಲವಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳೂ  ಉತ್ಪಾದನೆ ಹೆಚ್ಚಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿವೆ. ವಿದ್ಯುತ್‌ ವ್ಯತ್ಯಯ ಉಂಟಾದರೆ ಈ ಉದ್ದಿಮೆಗಳು ಚೇತರಿಸಿಕೊಳ್ಳಲು ಸಿಕ್ಕಿದ್ದ ಉತ್ತಮ ಅವಕಾಶ ಕೈತಪ್ಪಿದಂತಾಗುತ್ತದೆ.

ದರ ಹೆಚ್ಚಳದ ಬೀತಿ: ಕಲ್ಲಿದ್ದಲನ್ನು ಭಾರಿ ದರ ನೀಡಿ ಕೊಳ್ಳುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಉಕ್ಕು ಉತ್ಪನ್ನದ ದರ ಹೆಚ್ಚಳವಾಗಬಹುದು ಎಂದು ಈ ಹಿಂದೆಯೇ ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌ ಸಂಸ್ಥೆ ಹೇಳಿತ್ತು. ಕಲ್ಲಿದ್ದಲು, ವಿದ್ಯುತ್‌ ಅಭಾವದಿಂದ ಪೆಟ್ರೋಲಿಯಂ, ಅಲ್ಯುಮಿನಿಯಂ, ಸಿಮೆಂಟ್‌, ಸಕ್ಕರೆ ಸೇರಿ ಇತರ ವಸ್ತುಗಳ ಬೆಲೆಗಳೂ ಹೆಚ್ಚಳವಾಗಬಹುದು. ರೆಫ್ರಿಜಿರೇಟರ್‌ ಮೇಲೆ ಅವಲಂಬಿತವಾಗಿರುವ ಆಹಾರ ತಯಾರಿಕೆ ಮತ್ತು ಸಂಸ್ಕರಣಾ ಕ್ಷೇತ್ರಕ್ಕೂ ಹೆಚ್ಚಿನ ತೊಂದರೆ ಆಗಲಿದೆ.

ಇವುಗಳನ್ನೂ ಓದಿ‌

ಸಾರಾಂಶ

ದೇಶದಲ್ಲಿ ಈಗ ಎದುರಾಗಿರುವ ಕಲ್ಲಿದ್ದಲು ಕೊರತೆಗೆ ಸರ್ಕಾರವು ಹಲವು ಕಾರಣಗಳನ್ನು ಮುಂದಿಡುತ್ತಿದೆ. ಮುಖ್ಯವಾಗಿ ಭಾರಿ ಮಳೆಯಿಂದ ಕಲ್ಲಿದ್ದಲು ಗಣಿಗಳು ಕೆಲಸ ಮಾಡುತ್ತಿಲ್ಲ ಮತ್ತು ವಿದ್ಯುತ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ ಪರಿಸ್ಥಿತಿಗೆ ಸರ್ಕಾರವು ಮೂರು ಪ್ರಮುಖ ಕಾರಣಗಳನ್ನು ಬೊಟ್ಟುಮಾಡಿ ತೋರಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.