ದೇಶದಲ್ಲಿ ವಿದ್ಯುತ್ ಕೊರತೆಯ ಕಾರ್ಮೋಡ ಆವರಿಸುತ್ತಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರ ಸ್ಥಿತಿಗೆ ತಲುಪುವ ಸೂಚನೆಗಳಿವೆ.
ದೆಹಲಿ, ಪಂಜಾಬ್, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಕಲ್ಲಿದ್ದಲು ಬಿಕ್ಕಟ್ಟಿನ ಬಗ್ಗೆ ದನಿ ಎತ್ತಿವೆ. ತಕ್ಷಣ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ಕೆಲವು ರಾಜ್ಯಗಳು ಈಗಾಗಲೇ ವಿದ್ಯುತ್ ಕಡಿತ
ಪ್ರಕಟಿಸಿದ್ದರೆ, ಸಂಭಾವ್ಯ ವಿದ್ಯುತ್ ಕಡಿತದ ಬಗ್ಗೆ ಇನ್ನೂ ಕೆಲವು ರಾಜ್ಯಗಳು ಜನರಿಗೆ ಮುನ್ಸೂಚನೆ ನೀಡಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ದಿಗಿಲು ಬೀಳುವಂಥದ್ದು ಏನೂ ಇಲ್ಲ ಎಂದು ಪ್ರತಿಪಾದಿಸುತ್ತಿದೆ.
ಧಾರಾಕಾರ ಮಳೆಯು ಕಲ್ಲಿದ್ದಲು ಸಾಗಣೆಗೆ ಅಡ್ಡಿಪಡಿಸಿದೆ. ಜೊತೆಗೆ ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ದಾಖಲೆಯ ದರ ಏರಿಕೆಯ ಕಾರಣ, ಅವುಗಳ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದಿಸುತ್ತಿವೆ.
ದೇಶದಲ್ಲಿ 135 ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿವೆ. ದೇಶದ ವಿದ್ಯುತ್ ಅಗತ್ಯದ ಶೇ 50ಕ್ಕಿಂತ ಹೆಚ್ಚನ್ನು ಇವು ಪೂರೈಸುತ್ತವೆ. ಅಕ್ಟೋಬರ್ 5ರ ಮಾಹಿತಿ ಪ್ರಕಾರ, ಈ ಪೈಕಿ 106 ಸ್ಥಾವರಗಳಲ್ಲಿ ಶೇ 80ಕ್ಕಿಂತಲೂ ಹೆಚ್ಚು ಕಲ್ಲಿದ್ದಲು ಖಾಲಿಯಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಇದೂ ಖಾಲಿಯಾದರೆ, ಪರಿಸ್ಥಿತಿ ಬಿಗಡಾಯಿಸಲಿದೆ.
ಮಹಾರಾಷ್ಟ್ರದ 13, ಕೇರಳದ 4, ಪಂಜಾಬ್‌ನ ಮೂರು ಸ್ಥಾವರಗಳು ಕಲ್ಲಿದ್ದಲು ಇಲ್ಲದೆ ಈಗಾಗಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ವಿದ್ಯುತ್ ಉಳಿತಾಯ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ಜನರಿಗೆ ಮನವಿ ಮಾಡಿದೆ. ಲೋಡ್ ಶೆಡ್ಡಿಂಗ್ ಮಾಡುವ ಸೂಚನೆಯನ್ನು ಕೇರಳ ಸರ್ಕಾರ ನೀಡಿದೆ. ವಿದ್ಯುತ್ತನ್ನು ವಿವೇಚನೆಯಿಂದ ಬಳಸುವಂತೆ ಟಾಟಾ ಪವರ್ ಸಂಸ್ಥೆಯು ಜನರನ್ನು ಕೇಳಿಕೊಂಡಿದೆ. ಆದರೆ ಜನರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ ಎಂದು ಕಿಡಿಕಾರಿರುವ ಕೇಂದ್ರ ಸರ್ಕಾರವು ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ. ದೆಹಲಿಯಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಬಿಗಡಾಯಿಸಿದ್ದು, ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ.
ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರದಲ್ಲಿ 3330 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕಡಿತವಾಗಿದ್ದು ಅನ್ಯ ಮೂಲಗಳಿಂದ ಉತ್ಪಾದನೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪಂಜಾಬ್‌ನಲ್ಲಿ ಈಗಾಗಲೇ 3ರಿಂದ 6 ಗಂಟೆ ವಿದ್ಯುತ್ ಕಡಿತ ಘೋಷಿಸಲಾಗಿದ್ದು, ಇದರ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆಗಳೂ ಆರಂಭವಾಗಿವೆ. ರಾಜ್ಯದ ಒಟ್ಟು 5,620 ಮೆಗಾವಾಟ್ ಸಾಮರ್ಥ್ಯದ ಪೈಕಿ ಈಗ 2,800 ಮೆಗಾವಾಟ್ ಮಾತ್ರ ಉತ್ಪಾದನೆಯಾಗುತ್ತಿದೆ. ಖಾಸಗಿ ಸಂಸ್ಥೆಗಳು ಮತ್ತು ಅಕ್ಕಪಕ್ಕದ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ.
ಕರ್ನಾಟಕದಲ್ಲೂ ಕಲ್ಲಿದ್ದಲು ಕೊರತೆ ಇದ್ದು, 4 ರೇಕ್ ಕಲ್ಲಿದ್ದಲು ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಮತ್ತು ಒಡಿಶಾದ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಗಣಿಗಳಿಂದ ಕರ್ನಾಟಕಕ್ಕೆ ಕಲ್ಲಿದ್ದಲು ಹಂಚಿಕೆಯಾಗಿದ್ದು, ಈ ಎರಡೂ ಯೋಜನೆಗಳಿಗೆ ಅನುಮತಿ ಸಿಗಬೇಕಿದೆ.
ರಾಜಸ್ಥಾನದಲ್ಲಿ ನಿತ್ಯ ಒಂದು ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಎಂಟು ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಗೆ ಮಧ್ಯಪ್ರದೇಶ ಸರ್ಕಾರ ಟೆಂಡರ್ ಹೊರಡಿಸಿದೆ. ಗುಜರಾತ್, ಪಂಜಾಬ್, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಿಗೆ ವಿದ್ಯುತ್ ಪೂರೈಸುವ ಟಾಟಾ ಸಂಸ್ಥೆಯು ತನ್ನ ಗುಜರಾತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಿದೆ. ಆಂಧ್ರ ಪ್ರದೇಶದಲ್ಲಿ ಒಂದೆರಡು ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನಿದೆ. ಇದು ಮುಂಬರುವ ಕತ್ತಲ ದಿನಗಳ ಮುನ್ಸೂಚನೆಯಾಗಿದೆ.
1. ಅತಿ ಮಳೆಯಿಂದ ಕಲ್ಲಿದ್ದಲು ಕೊರತೆ
ಈ ಸಾಲಿನ ಮುಂಗಾರಿನ ಅವಧಿ ದೀರ್ಘವಾಗಿದೆ. ಛತ್ತೀಸಗಡ, ಜಾರ್ಖಂಡ್‌ನಲ್ಲಿನ ಬಹುತೇಕ ಕಲ್ಲಿದ್ದಲು ಗಣಿಗಳು ಜಲಾವೃತವಾಗಿ ಕಲ್ಲಿದ್ದಲ್ಲನ್ನು ತೆಗೆಯಲು ಸಾಧ್ಯವಾಗಿಲ್ಲ. ಮುಂಗಾರಿನ ಅವಧಿಯಲ್ಲಿ ಎಷ್ಟೋ ದಿನ ಕಲ್ಲಿದ್ದಲು ಗಣಿಗಳು ಕಾರ್ಯನಿರ್ವಹಿಸಿಲ್ಲ. ಆ ಅವಧಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸಿಲ್ಲ. ಆದರೆ ಅದೇ ಅವಧಿಯಲ್ಲಿ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ. ಅಲ್ಲಿನ ಸಂಗ್ರಹ ಮುಗಿಯುತ್ತಾ ಬಂದಿದೆ. ಆದರೆ ನಿರೀಕ್ಷಿತ ಅವಧಿಯಲ್ಲಿ ಕಲ್ಲಿದ್ದಲು ಗಣಿಗಳು ಕಾರ್ಯಾರಂಭ ಮಾಡದೇ ಇದ್ದ ಕಾರಣ ಕಲ್ಲಿದ್ದಲು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರಲಿಲ್ಲ. ಹೀಗಾಗಿ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಾಗಿದೆ. ಈಗ ಗಣಿಗಳು ಕಾರ್ಯಾರಂಭ ಮಾಡಿದ್ದು, ಕಡಿಮೆ ಸಂಗ್ರಹವಿರುವ ಸ್ಥಾವರಗಳಿಗೆ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸರ್ಕಾರವು ಹೇಳಿದೆ.
2. ಆಮದು ಸಮಸ್ಯೆ
ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲಿನ ಸಮಸ್ಯೆ ಉಂಟಾಗಿದೆ. ಚೀನಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಹಲವು ದೇಶಗಳಿಗೆ ಕಲ್ಲಿದ್ದಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವೂ ಕಲ್ಲಿದ್ದಲನ್ನು ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಲ್ಲಿದ್ದಲಿನ ಕೊರತೆ ಇರುವ ಕಾರಣ, ಭಾರತಕ್ಕೂ ಕಲ್ಲಿದ್ದಲು ಆಮದು ಆಗುವಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ದೇಶದ ಕಲ್ಲಿದ್ದಲಿನ ಗಣಿಗಳ ಮೇಲೆ ಒತ್ತಡ ಹೆಚ್ಚಾಗಿದೆ.
3. ಅತಿಯಾದ ಬೇಡಿಕೆ
ಕೋವಿಡ್‌ನ ಎರಡನೇ ಲಾಕ್‌ಡೌನ್ ತೆರವಾದ ನಂತರ ದೇಶದ ಎಲ್ಲೆಡೆ ಆರ್ಥಿಕ ಚಟುವಟಿಕೆ ಪುನರಾರಂಭವಾಗಿದೆ. ಕೈಗಾರಿಕೆಗಳು, ವಿದ್ಯುತ್ ಹೆಚ್ಚು ಬಳಸುವ ಸೇವಾ ಕ್ಷೇತ್ರಗಳು ಕೆಲಸ ಶುರು ಮಾಡಿವೆ. ಹೀಗಾಗಿ ದೇಶದಲ್ಲಿ ಈ ಹಿಂದಿಗಿಂತ ವಿದ್ಯುತ್‌ಗೆ ಹೆಚ್ಚು ಬೇಡಿಕೆ ಇದೆ. ಆ ಬೇಡಿಕೆಯನ್ನು ಪೂರೈಸಲು, ಉಷ್ಣ ವಿದ್ಯುತ್ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತದೆ. ಈ ಬಾರಿ ಮುಂಗಾರಿನ ಅವಧಿ ದೀರ್ಘವಾಗಿದ್ದ ಕಾರಣ ಹೆಚ್ಚು ವಿದ್ಯುತ್ ಬಳಕೆ ಮಾಡಲಾಗಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ಸಂಗ್ರಹದಲ್ಲಿದ್ದ ಕಲ್ಲಿದ್ದಲನ್ನು ಬಳಸಲಾಗಿದೆ. ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಲು ಅಥವಾ ಮುಗಿಯಲೂ ಇದೂ ಒಂದು ಪ್ರಮುಖ ಕಾರಣ ಎಂದು ಸರ್ಕಾರ ಹೇಳಿದೆ.
ಆದರೆ 2020-21ನೇ ಸಾಲಿನಲ್ಲಿ ಬಳಕೆಯಾದ ಒಟ್ಟು ವಿದ್ಯುತ್‌ಗೆ ಹೋಲಿಸಿದರೆ, 2021-22ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಬಳಕೆಯಾದ ವಿದ್ಯುತ್‌ನ ಪ್ರಮಾಣ ಇಳಿಕೆಯಾಗಿದೆ. 2020-21ನೇ ಸಾಲಿನಲ್ಲಿ ಒಟ್ಟು 1.27 ಲಕ್ಷ ಕೋಟಿ ಯುನಿಟ್‌ಗಳಿಗೆ ಬೇಡಿಕೆ ಬಂದಿತ್ತು. ಆದರೆ 2021-22ನೇ ಆರ್ಥಿಕ ವರ್ಷದ (ಏಪ್ರಿಲ್‌ನಿಂದ ಆಗಸ್ಟ್ ಅಂತ್ಯದವರೆಗೆ) ಕೇವಲ 46,624 ಕೋಟಿ ಯುನಿಟ್‌ಗಳಿಗೆ ಬೇಡಿಕೆ ಬಂದಿದೆ. ಅರ್ಧ ವರ್ಷ ಕಳೆದರೂ ಈ ಹಿಂದಿನ ವರ್ಷದಲ್ಲಿದ್ದ ಬೇಡಿಕೆಯಲ್ಲಿ ಅರ್ಧದಷ್ಟೂ ಬೇಡಿಕೆ ಬಂದಿಲ್ಲ. ಆದರೆ, ‘ಬೇಡಿಕೆ ಹೆಚ್ಚಿದ ಕಾರಣ, ಅದನ್ನು ಪೂರೈಸಲು ಹೆಚ್ಚುವರಿ ಕಲ್ಲಿದ್ದಲು ಬಳಕೆ ಮಾಡಲಾಗಿದೆ. ಹೀಗಾಗಿ ಕಲ್ಲಿದ್ದಲು ಕೊರತೆಯಾಗಿದೆ’ ಎಂದು ಸರ್ಕಾರ ಹೇಳುತ್ತಿದೆ.
ಪರಿಣಾಮಗಳು
ಆರ್ಥಿಕ ಚಟುವಟಿಕೆ ಮತ್ತೆ ಕುಸಿಯುವ ಸಾಧ್ಯತೆ: ಕಲ್ಲಿದ್ದಲಿನ ಕೊರತೆ ಕಾರಣ ವಿದ್ಯುತ್ ಉತ್ಪಾದನೆಯಲ್ಲಿ ಕಡಿತವಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದ ಉದ್ಯಮಗಳು ಈಗ ಚೇತರಿಕೆಯ ಹಾದಿಯಲ್ಲಿವೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2021ರ ಆಗಸ್ಟ್‌ನಲ್ಲಿದ್ದ ವಿದ್ಯುತ್ ಬೇಡಿಕೆಯು 2019ರ ಆಗಸ್ಟ್‌ನ ವಿದ್ಯುತ್ ಬೇಡಿಕೆಗಿಂತ ಶೇ 17ರಷ್ಟು ಜಾಸ್ತಿ ಇದೆ. ಇಂಥ ಸಮಯದಲ್ಲಿ ಉದ್ಯಮಗಳಿಗೆ ವಿದ್ಯುತ್ ಕೊರತೆ ಕಾಡಿದರೆ ದೇಶದಲ್ಲಿ ಆರ್ಥಿಕ ಚೇತರಿಕೆಗೆ ಮತ್ತೆ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ ಎರಡನೇ ವಾರದಿಂದ ದೇಶದಲ್ಲಿ ಸಾಲುಸಾಲು ಹಬ್ಬಗಳು ಶುರುವಾಗುವುದರಿಂದ ಹಲವಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳೂ ಉತ್ಪಾದನೆ ಹೆಚ್ಚಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿವೆ. ವಿದ್ಯುತ್ ವ್ಯತ್ಯಯ ಉಂಟಾದರೆ ಈ ಉದ್ದಿಮೆಗಳು ಚೇತರಿಸಿಕೊಳ್ಳಲು ಸಿಕ್ಕಿದ್ದ ಉತ್ತಮ ಅವಕಾಶ ಕೈತಪ್ಪಿದಂತಾಗುತ್ತದೆ.
ದರ ಹೆಚ್ಚಳದ ಬೀತಿ: ಕಲ್ಲಿದ್ದಲನ್ನು ಭಾರಿ ದರ ನೀಡಿ ಕೊಳ್ಳುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಉಕ್ಕು ಉತ್ಪನ್ನದ ದರ ಹೆಚ್ಚಳವಾಗಬಹುದು ಎಂದು ಈ ಹಿಂದೆಯೇ ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಸಂಸ್ಥೆ ಹೇಳಿತ್ತು. ಕಲ್ಲಿದ್ದಲು, ವಿದ್ಯುತ್ ಅಭಾವದಿಂದ ಪೆಟ್ರೋಲಿಯಂ, ಅಲ್ಯುಮಿನಿಯಂ, ಸಿಮೆಂಟ್, ಸಕ್ಕರೆ ಸೇರಿ ಇತರ ವಸ್ತುಗಳ ಬೆಲೆಗಳೂ ಹೆಚ್ಚಳವಾಗಬಹುದು. ರೆಫ್ರಿಜಿರೇಟರ್ ಮೇಲೆ ಅವಲಂಬಿತವಾಗಿರುವ ಆಹಾರ ತಯಾರಿಕೆ ಮತ್ತು ಸಂಸ್ಕರಣಾ ಕ್ಷೇತ್ರಕ್ಕೂ ಹೆಚ್ಚಿನ ತೊಂದರೆ ಆಗಲಿದೆ.
ದೇಶದಲ್ಲಿ ಈಗ ಎದುರಾಗಿರುವ ಕಲ್ಲಿದ್ದಲು ಕೊರತೆಗೆ ಸರ್ಕಾರವು ಹಲವು ಕಾರಣಗಳನ್ನು ಮುಂದಿಡುತ್ತಿದೆ. ಮುಖ್ಯವಾಗಿ ಭಾರಿ ಮಳೆಯಿಂದ ಕಲ್ಲಿದ್ದಲು ಗಣಿಗಳು ಕೆಲಸ ಮಾಡುತ್ತಿಲ್ಲ ಮತ್ತು ವಿದ್ಯುತ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ ಪರಿಸ್ಥಿತಿಗೆ ಸರ್ಕಾರವು ಮೂರು ಪ್ರಮುಖ ಕಾರಣಗಳನ್ನು ಬೊಟ್ಟುಮಾಡಿ ತೋರಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.