ಬೆಂಗಳೂರು: ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.
ಪರಿಸರ ಸಂರಕ್ಷಣೆ ಹಾಗೂ ಪರಿಸರ ಸುಸ್ಥಿರತೆ ಕಾಪಾಡುವುದರ ಕುರಿತು ರಿಷಬ್ ಶೆಟ್ಟಿ ಪ್ರತಿಪಾದಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿದ್ದಾರೆ.
ರಿಷಬ್ ಹೇಳಿದ್ದೇನು?
ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ.
ಪರಿಸರ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ- ನಿರ್ದೇಶಕನಾಗಿ, ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ.
ಪರಿಸರ ಸುಸ್ಥಿರತೆಯ ಶೋಧನೆಗೆ ಜಾಗತಿಕ ಏಜೆನ್ಸಿಗಳು ಹಾಗೂ ಸರ್ಕಾರದ ಸಂಸ್ಥೆಗಳು ಮುಂಚೂಣಿಯಲ್ಲಿದೆ. ಜೊತೆಗೆ ಭಾರತದಲ್ಲಿ ನಾಗರಿಕ ಸಮಾಜ ಸಹ ಸ್ಥಳೀಯ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಇಂತಹ ಪರಿಸರ ಪ್ರಜ್ಞೆಗೆ ಸಿನಿಮಾ ಎಂಬ ಮಾಧ್ಯಮವು ಕನ್ನಡಿ ಹಿಡಿಯುತ್ತದೆ ಹಾಗೂ ವಾಸ್ತವವನ್ನು ಜಗತ್ತಿಗೆ ತೋರಿಸುವ ಪ್ರಮುಖ ಪಾತ್ರ ನಿರ್ವಹಿಸುತ್ತವೆ, ಹಲವಾರು ಭಾರತೀಯ ಸಿನಿಮಾಗಳು ಕಾಲ್ಪನಿಕ ಹಾಗೂ ವಾಸ್ತವ ಕತೆಗಳ ಮೂಲಕ ಪರಿಸರ ಸಂರಕ್ಷಣೆಯ ವಿಚಾರ ಹೇಳಿದ್ದು, ಈ ಕುರಿತು ಜಾಗೃತಿ ಮೂಡಿಸಿವೆ ಎಂಬುದು ನಮ್ಮ ಹೆಮ್ಮೆ.
ಇತ್ತೀಚಿನ ನನ್ನ ಕಾಂತಾರ ಸಿನಿಮಾದಲ್ಲಿ ಸಹ, ನಿಸರ್ಗದ ಮಡಿಲಲ್ಲಿ, ಮನುಷ್ಯನ ಜೀವನ, ಜನರ ಸ್ಥಳೀಯ ನಂಬಿಕೆ, ಆಚರಣೆ ಕುರಿತ ಪ್ರಮುಖ ಅಂಶಗಳು ಅಡಕವಾಗಿವೆ.
ಪರಿಸರದ ಜತೆ ನಾವು ಹೊಂದಿರುವ ನಂಟು, ಅದು ನಮ್ಮ ಮೇಲೆ ಬೀರುವ ಪರಿಣಾಮ, ಸಹಬಾಳ್ವೆ, ಸಾಂಸ್ಕೃತಿಕ ಹಿರಿಮೆಗಳು ಹೇಗೆ ಪರಸ್ಪರ ಅವಲಂಬಿಸಿದೆ ಎಂಬುದನ್ನು ಕಾಂತಾರ ಸಿನಿಮಾ ತೋರಿಸಿದೆ.
ಸ್ಥಳೀಯ ಪರಿಸರ ರಕ್ಷಣೆ, ಇದರಲ್ಲಿ ಸರ್ಕಾರದ ಪಾತ್ರ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದಾಯಗಳ ಪ್ರಾಮುಖ್ಯತೆಗಳನ್ನು ಸಿನಿಮಾ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಕಾಂತಾರದಂತಹ ಸಿನಿಮಾಗಳು ವಾಸ್ತವವನ್ನು ತೆರೆದಿಡುವ ಜತೆಗೆ ಪರಿಸರದ
ಸವಾಲುಗಳನ್ನು ಎದುರಿಸಲು, ಸಮಸ್ಯೆಗಳನ್ನು ಬಗೆಹರಿಸಲು ಜನರಿಗೆ ಸ್ಫೂರ್ತಿ ನೀಡುತ್ತವೆ. ಭಾವನೆಗಳನ್ನು ಜಾಗೃತಗೊಳಿಸಿ, ಪರಿಸರ ರಕ್ಷಣೆಯತ್ತ ಜನ ಕೆರಳುವಂತೆ ಮಾಡುತ್ತವೆ. ಇಂತಹ ಪ್ರಯತ್ನ ಪರಿಶ್ರಮವನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು ಎಂಬುದಾಗಿ ಇಲಿ ನೆರೆದಿರುವ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ.
-ರಿಷಬ್ ಶೆಟ್ಟಿ
ಸಿಎಂ ಬೊಮ್ಮಾಯಿ ಅಭಿನಂದನೆ...
ಹೆಮ್ಮೆಯ ಕನ್ನಡಿಗನೊಬ್ಬ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಕನ್ನಡದಲ್ಲಿ ಮಾತನಾಡಿದ್ದು ನಿಜಕ್ಕೂ ಅದ್ಭುತ. ಅಭಿನಂದನೆಗಳು ರಿಷಬ್ ಶೆಟ್ಟಿ. ನಿಮ್ಮ ಕನ್ನಡಪ್ರೇಮಕ್ಕೆ ನನ್ನ ಹೃದಯಾಂತರಾಳದಿಂದ ಗೌರವವನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪರಿಸರವನ್ನು ಉಳಿಸಿ-ಬೆಳೆಸಲು ನಮ್ಮ ಸರ್ಕಾರ ಸಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
'ಕಾಂತಾರ' ಸಿನಿಮಾ ಪ್ರದರ್ಶನ
ಸ್ವಿಟ್ಜರ್ಲೆಂಡ್‌ನ ಜಿನಿವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಾರ್ಚ್ 17ರಂದು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಪ್ರದರ್ಶನಗೊಳ್ಳಲಿದೆ.
ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.