ಚಿತ್ರ: ಕೋಟಿಗೊಬ್ಬ 3
ನಿರ್ದೇಶಕರು:ಶಿವ ಕಾರ್ತಿಕ್
ನಿರ್ಮಾಪಕರು: ಸೂರಪ್ಪ ಬಾಬು
ತಾರಾಗಣ: ಕಿಚ್ಚ ಸುದೀಪ್, ಮಡೋನಾ ಸೆಬಾಸ್ಟಿಯನ್, ಅಫ್ತಾಬ್ ಶಿವದಾಸಾನಿ, ನವಾಬ್ ಶಾ, ಶ್ರದ್ಧಾ ದಾಸ್, ರವಿಶಂಕರ್
ಸಂಗೀತ: ಅರ್ಜುನ್ ಜನ್ಯಾ
ಕಿಚ್ಚ ಸುದೀಪ್ ಅಭಿನಯದಲ್ಲಿ 2016ರಲ್ಲಿ ತೆರೆಕಂಡಿದ್ದ ‘ಕೋಟಿಗೊಬ್ಬ–2’ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ ಚಿತ್ರ. ಅದ್ಧೂರಿತನ ಹಾಗೂ ಸುದೀಪ್ ಅವರ ನೈಜ ಅಭಿನಯಿಂದಾಗಿ ಈ ಚಿತ್ರವು ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
ಇದೇ ಸಿನಿಮಾದ ಎಳೆಯನ್ನಿಟ್ಟುಕೊಂಡು ನಿರ್ಮಿಸಿರುವ ‘ಕೋಟಿಗೊಬ್ಬ–3’ ಚಿತ್ರದ ಕಥೆಯು ಅದೇ ಜಾಡಿನಲ್ಲಿ ಸಾಗಿದ್ದರೂ ಇನ್ನಷ್ಟು ದೃಶ್ಯವೈಭವ, ಅದ್ಧೂರಿತನವನ್ನು ಮೈಗೂಡಿಸಿಕೊಂಡಿದೆ.
ಶಿವ, ಸತ್ಯ ಹಾಗೂ ಗೋಸ್ಟ್ ಹೀಗೆ ಮೂರು ಗೆಟಪ್‌ಗಳಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧ ಹೊಡೆದಾಟ, ಸಾಹಸ ದೃಶ್ಯಗಳಿಗೆ ಮೀಸಲಾದರೆ ದ್ವಿತೀಯಾರ್ಧದಲ್ಲಿ ಅಲ್ವ ಭಾವನಾತ್ಮಕ ಅಂಶಗಳಿಗೂ ನಿರ್ದೇಶಕ ಶಿವ ಕಾರ್ತಿಕ್ ಅವರು ಒತ್ತು ನೀಡಿದ್ದಾರೆ.
ಜಾನು ಎಂಬ ಅನಾಥ ಬಾಲಕಿಗೆ ಚಿಕಿತ್ಸೆ ಕೊಡಿಸಲು ಪೋಲ್ಯಾಂಡ್ ಗೆ ತೆರಳುವ ಸತ್ಯ ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ನಡೆಯುವ ದರೋಡೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾನೆ. ದರೋಡೆ ಮಾಡಿರುವುದು ನಾನಲ್ಲ, ನನ್ನಂತೆಯೇ ಇರುವ ಶಿವ ಎಂದು ಆತ ಗೋಗರೆದರೂ ಯಾರೂ ನಂಬುವುದಿಲ್ಲ. ಹೀಗೆ ಶಿವ ನಡೆಸುವ ಎಲ್ಲಾ ಅಪರಾಧ ಕೃತ್ಯಗಳಿಗೂ ಸತ್ಯ ಬಲಿಪಶುವಾಗುತ್ತಾನೆ. ಕೊನೆಗೆ ಈ ಗೊಂದಲದಿಂದ ಆತ ಹೊರಬರುವುದೇ ಈ ಚಿತ್ರದ ಮುಖ್ಯ ಕಥಾಹಂದರ.
ಚಿತ್ರದ ಬಹುಭಾಗದವರೆಗೂ ಶಿವ ಮತ್ತು ಸತ್ಯ ಬೇರೆ ಬೇರೆ ವ್ಯಕ್ತಿಗಳೇ ಅಥವಾ ಒಬ್ಬನೇ ವ್ಯಕ್ತಿಯೇ ಎನ್ನುವ ಗೊಂದಲದ ಗೂಡೊಳಗೆ ಪ್ರೇಕ್ಷಕರು ಸಿಲುಕುವಂತೆ ಮಾಡಿದ್ದಾರೆ ನಿರ್ದೇಶಕರು.
ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿರುವ ಅಭಿರಾಮಿ ಅವರು ಭಾವನಾತ್ಮಕ ದೃಶ್ಯಗಳಿಗೆ ಜೀವ ತುಂಬಿದ್ದಾರೆ.ಈ ಪಾತ್ರವು ಫ್ಲ್ಯಾಷ್ ಬ್ಯಾಕ್ ಮೂಲಕ ಬಂದರೂ ಮನಸ್ಸಿಗೆ ನಾಟುವ ಪಾತ್ರವಾಗಿದೆ.
ಚೇಸಿಂಗ್, ಹೊಡೆದಾಟದ ದೃಶ್ಯಗಳು ಚಿತ್ರದ ಬಹುಭಾಗವನ್ನು ಆವರಿಸಿಕೊಂಡಿವೆ. ಕೆಲವು ದೃಶ್ಯಗಳು ವಾಸ್ತವಕ್ಕೆ ನಿಲುಕದಿದ್ದರೂ ಸಿನಿಮಾ ಎಂದು ಸಮಾಧಾನಪಟ್ಟುಕೊಳ್ಳಬಹುದು.
ಸುದೀಪ್ ಅವರೇ ಮೂರು ಗೆಟಪ್‌ಗಳಲ್ಲಿ ತೆರೆಯನ್ನಾವರಿಸಿಕೊಳ್ಳುವುದರಿಂದ ಕೆಲವೆಡೆ ಉಳಿದ ಪಾತ್ರಗಳು ಗೌಣ ಎನಿಸದಿರದು. ನಾಯಕಿಗೆ ಹೆಚ್ಚು ಅಭಿನಯಕ್ಕೆ ಅವಕಾಶ ಇಲ್ಲದಿದ್ದರೂ ಮೆಡೋನಾ ಸೆಬಾಸ್ಟಿಯನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರದ ದ್ವಿತೀಯಾರ್ಧದಲ್ಲಿ ಸುದೀಪ್- ರವಿಶಂಕರ್ ಜೋಡಿ ಮೋಡಿ ಮಾಡುತ್ತದೆ. ಮೊದಲಾರ್ಧದಲ್ಲಿ ಚಿತ್ರದ ಕಥೆಯು ಗಂಭೀರವಾಗಿ ಸಾಗಿದರೆ ದ್ವಿತೀಯಾರ್ಧದಲ್ಲಿ ಅಲ್ಲಲ್ಲಿ ಮೂಡಿ ಬರುವ ನವಿರು ಹಾಸ್ಯ ಸನ್ನಿವೇಶಗಳು ನಗೆಯುಕ್ಕಿಸುತ್ತವೆ.
ಇಂಟರ್‌ಪೋಲ್ ಅಧಿಕಾರಿಗಳಾಗಿ ನಟಿಸಿರುವ ಅಫ್ತಾಬ್ ಶಿವದಾಸಾನಿ ಮತ್ತು ಶ್ರದ್ಧಾ ದಾಸ್ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರೂ. ಈ ಪಾತ್ರಗಳು ನಾಯಕನ ಮುಂದೆ ಯಾವುದೇ ಸವಾಲುಗಳನ್ನು ಸೃಷ್ಟಿಸದೆ ಕೇವಲ ಹೆಸರಿಗೆ ಮಾತ್ರ ಎಂಬಂತೆ ಭಾಸವಾಗದಿರದು. ಚಿತ್ರದ ಹಾಡುಗಳು ಅಷ್ಟಾಗಿ ಆಪ್ತ ಎನಿಸುವುದಿಲ್ಲ.
ಖಳನಟನ ಪಾತ್ರದ ಮೂಲಕ ನವಾಬ್ ಶಾ ಅವರು ಚಿತ್ರಕ್ಕೆ ಕಳೆ ತಂದುಕೊಟ್ಟಿದ್ದಾರೆ. ತಬಲಾ ನಾಣಿ, ರಂಗಾಯಣ ರಘ ಮೊದಲಾದವರು ನಟಿಸಿದ್ದರೂ ಆ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು.
ಕೋಟಿಗೊಬ್ಬ–3’ ಚಿತ್ರದ ಕಥೆಯು ಸಾಕಷ್ಟು ದೃಶ್ಯವೈಭವ, ಅದ್ಧೂರಿತನವನ್ನು ಮೈಗೂಡಿಸಿಕೊಂಡಿದೆ. ಶಿವ, ಸತ್ಯ ಹಾಗೂ ಗೋಸ್ಟ್ ಹೀಗೆ ಮೂರು ಗೆಟಪ್‌ಗಳಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧ ಹೊಡೆದಾಟ, ಸಾಹಸ ದೃಶ್ಯಗಳಿಗೆ ಮೀಸಲಾದರೆ ದ್ವಿತೀಯಾರ್ಧದಲ್ಲಿ ಅಲ್ವ ಭಾವನಾತ್ಮಕ ಅಂಶಗಳಿಗೂ ನಿರ್ದೇಶಕ ಶಿವ ಕಾರ್ತಿಕ್ ಅವರು ಒತ್ತು ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.