ಪವನ್ ಶೌರ್ಯ ನಟನೆಯಲ್ಲಿ ನಿರ್ಮಾಣವಾಗುತ್ತಿದೆ ‘ನಾಚಿ’. ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಅವರಿಗೆ ಈ ಅವಕಾಶ ಕೂಡಿಬಂದಿದೆ.
ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ ಗೌಡ ಮತ್ತು ಮೀನಾ ವೆಂಕಟ್ ಗೌಡ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಶಶಾಂಕ್ ರಾಜ್ ಅವರ ನಿರ್ದೇಶನವಿದೆ.
ಇತ್ತೀಚೆಗೆ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ.
ತಾತ ಮೊಮ್ಮಗಳ ಸುತ್ತ ಪ್ರಧಾನವಾಗಿ ಬೆಸೆದುಕೊಂಡ ಕತೆ ʻನಾಚಿʼ ಚಿತ್ರದ್ದು. ನಚಿತಾ ಎನ್ನುವುದು ಆಕೆಯ ಹೆಸರು. ಈ ಪಾತ್ರದಲ್ಲಿ ಮೌರ್ಯಾನಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ ಸುಮಾರು 15 ಚಿತ್ರಗಳಲ್ಲಿ ಕಾಣಿಸಿಕೊಂಡ ಅನುಭವ ಮೌರ್ಯಾನಿ ಅವರದ್ದು.
ನಚಿತಾಳನ್ನು ಎಲ್ಲರೂ ಪ್ರೀತಿಯಿಂದ ʻನಾಚಿʼ ಎಂದು ಕರೆಯುತ್ತಿರುತ್ತಾರೆ. ಪುರಾತತ್ವ ಅಧ್ಯಯನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ಆಕೆ. ಅದೊಮ್ಮೆ ಮಲೆನಾಡಿನ ಪ್ರದೇಶವೊಂದರಲ್ಲಿ ಪ್ರಾಚ್ಯವಸ್ತುಗಳ ಸಂಶೋಧನೆಗೆಂದು ಹೋದಾಗ ಅದು ತನ್ನದೇ ಪೂರ್ವಜರ ಮನೆ ಎಂದು ಗೊತ್ತಾಗುತ್ತದೆ. ಇದರ ಜೊತೆ ನಿಧಿಯ ಕತೆ ಕೂಡಾ ತೆರೆದುಕೊಳ್ಳುತ್ತದೆ. ಇತಿಹಾಸ, ವಿಜ್ಞಾನ, ಪ್ರೀತಿ, ಹಾಸ್ಯ, ಥ್ರಿಲ್ಲರ್, ಹಾರರ್ ಅಂಶಗಳೊಂದಿಗೆ ಆಕ್ಷನ್ ಕೂಡಾ ಕತೆಯಲ್ಲಿ ಬೆಸೆದುಕೊಂಡಿದೆ. ಅಂತಿಮವಾಗಿ ʻಸೈನ್ಸ್ ಬಿಯಾಂಡ್ ಸೆನ್ಸ್ʼ ಎನ್ನುವ ಸಿದ್ದಾಂತದ ಹಿನ್ನೆಲೆಯಲ್ಲಿ ʻನಾಚಿʼ ಚಿತ್ರದ ಕಥೆಯಿದೆ ಎಂದಿದೆ ಚಿತ್ರತಂಡ.
ಮಲೆನಾಡಿನ ಸುಂದರ ತಾಣಗಳಲ್ಲಿ ʻನಾಚಿʼಗಾಗಿ ಚಿತ್ರೀಕರಣ ನಡೆಸಲಾಗಿದೆ. ಯಕ್ಷಗಾನ, ಭೂತಕೋಲಗಳ ದೃಶ್ಯಗಳನ್ನು ನೈಜವಾಗಿ ಸೆರೆ ಹಿಡಿಯಲಾಗಿದೆ. ನಾಲ್ಕು ಫೈಟ್, ಮೂರು ಹಾಡು, ʻನಾಚಿʼ ಚಿತ್ರದಲ್ಲಿರಲಿದೆ.
ಆರ್ಯಭಟ ಜಾಗ್ವಾರ್, ಕ್ರಿಷ್, ಪ್ರಿಯಾ ಶೆಟ್ಟಿ, ಶ್ರೇಯಾ ಶೆಟ್ಟಿ, ನೀನಾಸಂ ನಂಜಪ್ಪ, ಖಳನಟನಾಗಿ ಪ್ರಶಾಂತ್, ಮನೀಶ್ ತಾರಾಗಣದಲ್ಲಿದ್ದಾರೆ. ಎಸ್.ಎಲ್. ಎನ್ ಸ್ವಾಮಿ ತಾತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ್ ಗೌಡ ನಿರ್ಮಿಸುತ್ತಿರುವ ಐದನೇ ಚಿತ್ರವಿದು.
ಪವನ್ ಶೌರ್ಯ ನಟನೆಯಲ್ಲಿ ನಿರ್ಮಾಣವಾಗುತ್ತಿದೆ ‘ನಾಚಿ’. ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಅವರಿಗೆ ಈ ಅವಕಾಶ ಕೂಡಿಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.