‘ಮೈ ಆಟೋಗ್ರಾಫ್’ ಚಿತ್ರದ ಮುಖಾಂತರ ಚಂದನವನದಲ್ಲಿ ನಟನೆಯ ಜೊತೆ ನಿರ್ದೇಶನಕ್ಕೂ ಸೈ ಎಂದು ಗುರುತಿಸಿಕೊಂಡವರು ನಟ ಕಿಚ್ಚ ಸುದೀಪ್. ಇದಾದ ಬಳಿಕ ಅವರು ಆ್ಯಕ್ಷನ್ ಕಟ್ ಹೇಳಿದ್ದ ‘ಜಸ್ಟ್ ಮಾತ್ ಮಾತಲ್ಲಿ’, ‘ನಂ.73 ಶಾಂತಿನಿವಾಸ’ ಹೀಗೆ ಹಲವು ಚಿತ್ರಗಳೂ ಹಿಟ್ ಆಗಿದ್ದವು. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ನಿರ್ದೇಶನ ಮಾಡಲು ಸುದೀಪ್ ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಕಥೆ ಹೇಳಲೂ ತಯಾರಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್, ‘ಈಗಾಗಲೇ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದ್ದೇನೆ. ಅದು ಬಹಳ ಸೂಕ್ಷ್ಮವಾಗಿದೆ. ಇಡೀ ದಕ್ಷಿಣ ಭಾರತಕ್ಕೆ ಈ ಸಿನಿಮಾ ಮಾಡಬೇಕು ಎನ್ನುವ ಆಸೆ ನನ್ನದು. ಈ ಕುರಿತು ಸಲ್ಮಾನ್ ಖಾನ್ ಅವರ ಜೊತೆ ಮಾತನಾಡಿ, ‘ನಿಮಗೊಂದು ಕಥೆ ಬರೆದಿದ್ದೇನೆ ಅದನ್ನು ಹೇಳಬೇಕು’ ಎಂದು ಕೇಳಿಕೊಂಡಿದ್ದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅವರನ್ನು ಭೇಟಿಯಾಗಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ಪಾತ್ರ ಅಲ್ಲಿ ಅವರು ಮಾಡಿದರೇ ಚೆಂದ, ಇಲ್ಲಿ ನಾನು ಮಾಡಿದರೇ ಚಂದ. ಆಸೆ ಇಟ್ಟುಕೊಂಡು ನಾನೇ ಅಲ್ಲಿ ಮಾಡಬೇಕು ಎಂದರೆ ತಪ್ಪಾಗುತ್ತದೆ. ಇದು ಸಿನಿಮಾದ ಅಗತ್ಯತೆ. ಸಿನಿಮಾನೇ ಬೇರೆ ಗೆಳೆತನವೇ ಬೇರೆ. ಅವರು ಒಪ್ಪಿಕೊಳ್ಳಬೇಕು. ಅವರ ಬಳಿಗೆ ಹೋಗಿ ಚರ್ಚಿಸಿದ ಬಳಿಕವಷ್ಟೇ ಮುಂದಿನದ್ದನ್ನು ಹೇಳಲು ಸಾಧ್ಯ. ಕಥೆಯನ್ನು ಅವರಿಗೆ ಹೇಳುವುದಕ್ಕೆ ನಾನು ಕಾತುರದಿಂದಿದ್ದೇನೆ. ಒಪ್ಪುವುದು ಬಿಡುವುದು ಅವರಿಗೆ ಬಿಟ್ಟಿದ್ದು, ನಾನು ಈ ಕಥೆ ಬರೆದಿದ್ದು ನನಗಾಗಿ. ಆದರೆ ಈ ಕುರಿತು ಜ್ಯಾಕ್ ಮಂಜು ಅವರ ಜೊತೆ ಚರ್ಚಿಸಿದಾಗ ಅವರೂ ಸಲ್ಮಾನ್ ಖಾನ್ ಅವರು ಈ ಪಾತ್ರಕ್ಕೆ ಸೂಕ್ತ ಎಂದರು. ನಿರ್ದೇಶಕನಾಗಿ ನಾನು ನನ್ನ ಕಥೆಗೆ ನ್ಯಾಯ ಒದಗಿಸಬೇಕು, ಅಲ್ಲವೇ’ ಎಂದಿದ್ದಾರೆ.
2019ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ನಟನೆಯ ‘ದಬಾಂಗ್–3’ ಚಿತ್ರದಲ್ಲಿ ಸುದೀಪ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
‘ಗ್ರೇ ಶೇಡ್ ಪಾತ್ರಗಳನ್ನೂ ಮಾಡುತ್ತೇನೆ’
‘ರಣ್ ಚಿತ್ರ ಒಪ್ಪಿದಾಗ ನನಗೆ ಕಾಣಿಸಿದ್ದು ಕೇವಲ ಅಮಿತಾಬ್ ಬಚ್ಚನ್. ನನ್ನ ಸಮಯ ಚೆನ್ನಾಗಿತ್ತು ಹಾಗೂ ಪಾತ್ರವೂ ಅದ್ಭುತವಾಗಿತ್ತು. ನನಗೆ ಸವಾಲಾಗಿದ್ದು ಅಮಿತಾಬ್ ಅವರ ಪಕ್ಕ ನಿಂತು ನಟನೆ ಮಾಡುವುದಕ್ಕಿಂತ ಹಿಂದಿ ಮಾತನಾಡುವುದಾಗಿತ್ತು. ಅಲ್ಲಿಯವರೆಗೂ ನಾನು ಗ್ರೇ ಶೇಡ್ ಪಾತ್ರಗಳನ್ನು ಮಾಡಿರಲಿಲ್ಲ. ‘ರಣ್’ ಚಿತ್ರದಿಂದಾಗಿ ನನಗೆ ‘ಈಗ’ ಚಿತ್ರ ದೊರಕಿತು. ಬ್ಯಾಟ್‌ಮ್ಯಾನ್ ಚಿತ್ರಗಳಲ್ಲಿ ಜೋಕರ್ ಪಾತ್ರ ರಾರಾಜಿಸಿದಂತೆ ಗ್ರೇ ಶೇಡ್ ಪಾತ್ರಗಳು ನನಗೆ ಹಿಡಿಸಿದವು. ಎಲ್ಲರಿಗೂ ಇಷ್ಟ ಆಗುವುದೇ ನೆಗೆಟಿವ್ ಪಾತ್ರಗಳು. ಪ್ರೇಕ್ಷಕರನ್ನು ನಗಿಸುವುದು ಎಷ್ಟು ಕಷ್ಟವೋ ಅವರನ್ನು ಹೆದರಿಸುವುದೂ ಅಷ್ಟೇ ಕಷ್ಟ. ಭವಿಷ್ಯದಲ್ಲೂ ಇಂಥಹ ಗ್ರೇ ಶೇಡ್ ಇರುವ ಪಾತ್ರಗಳನ್ನು ಮಾಡುತ್ತೇನೆ’ ಎನ್ನುತ್ತಾರೆ ಸುದೀಪ್.
ಕೋಟಿಗೊಬ್ಬ–3ಯಲ್ಲಿ ದುಪ್ಪಟ್ಟು ಮನರಂಜನೆ
‘ನಿರ್ದೇಶಕ ಶಿವಕಾರ್ತಿಕ್ ಅವರು ಬೇರೊಂದು ಕಥೆಯನ್ನು ವಿವರಿಸಲು ಸೂರಪ್ಪಬಾಬು ಅವರ ಬಳಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ನಾನೊಂದು ಐಡಿಯಾ ನೀಡಿದೆ. ಕಥೆ ನನ್ನದಲ್ಲ. ಕಥೆಯನ್ನು ಅಭಿವೃದ್ಧಿಪಡಿಸಿದ್ದು ಅವರು. ಎರಡನೇ ಭಾಗವನ್ನು ಕೆ.ಎಸ್.ರವಿಕುಮಾರ್‌ರಂತಹ ಹಿರಿಯ ನಿರ್ದೇಶಕರು ನಿರ್ದೇಶಿಸಿದ್ದರು. ಹೀಗಾಗಿ ನೀವು ಒಪ್ಪಿದರಷ್ಟೇ ಮಾಡೋಣ ಎಂದು ಸೂರಪ್ಪಬಾಬು ಅವರಿಗೆ ಹೇಳಿದ್ದೆ. ನಾಲ್ಕೈದು ಬಾರಿ ಕಥೆಯನ್ನು ಬದಲಾಯಿಸಿದ ಬಳಿಕ ಮುಂದುವರಿಯಲು ಒಪ್ಪಿಗೆ ನೀಡಿದ್ದೆ. ಶಿವಕಾರ್ತಿಕ್ ಅದ್ಭುತ ನಿರ್ದೇಶಕ. ಶ್ರಮಜೀವಿ. ಮೊದಲ ಚಿತ್ರಕ್ಕೇ ದೊಡ್ಡ ದೊಡ್ಡ ಕಲಾವಿದರನ್ನು ನಿಭಾಯಿಸಿದ್ದಾರೆ. ಯಶಸ್ಸು ಇಲ್ಲದೇ ಸೀಕ್ವೆಲ್ ಮಾಡಲು ಸಾಧ್ಯವಿಲ್ಲ. ಕೋಟಿಗೊಬ್ಬ–2ಗಿಂತ ಹೆಚ್ಚಿನ ಮನರಂಜನೆ ಈ ಚಿತ್ರದಲ್ಲಿದೆ. ವಿದೇಶಗಳಲ್ಲಿ ಚಿತ್ರೀಕರಣ ಅನುಭವ ಅದ್ಭುತವಾಗಿತ್ತು. ರವಿಶಂಕರ್ ಅವರ ಪಾತ್ರವನ್ನು ಬಹಳ ಅದ್ಭುತವಾಗಿ ಇಲ್ಲಿ ತೆಗೆದುಕೊಂಡಿದ್ದಾರೆ’ ಎಂದರು ಸುದೀಪ್.
‘ಎಲ್ಲ ರಾಜ್ಯಗಳಲ್ಲೂ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿಲ್ಲ. ಕೋಟಿಗೊಬ್ಬ–3 ಚಿತ್ರವು ಇಲ್ಲಿ ಬಿಡುಗಡೆಯಾದ ನಂತರ ಇತರೆ ಭಾಷೆಗಳಿಗೆ ಡಬ್ ಆಗಬಹುದು’ ಎನ್ನುತ್ತಾರೆ ಸುದೀಪ್.
‘ಮೈ ಆಟೋಗ್ರಾಫ್’ ಚಿತ್ರದ ಮುಖಾಂತರ ಚಂದನವನದಲ್ಲಿ ನಟನೆಯ ಜೊತೆ ನಿರ್ದೇಶನಕ್ಕೂ ಸೈ ಎಂದು ಗುರುತಿಸಿಕೊಂಡವರು ನಟ ಕಿಚ್ಚ ಸುದೀಪ್. ಇದಾದ ಬಳಿಕ ‘ಜಸ್ಟ್ ಮಾತ್ ಮಾತಲ್ಲಿ’, ‘ನಂ.73 ಶಾಂತಿನಿವಾಸ’ ಹೀಗೆ ಕೆಲ ಹಿಟ್ ಚಿತ್ರಗಳಿಗೂ ಸುದೀಪ್ ಆ್ಯಕ್ಷನ್ ಕಟ್ ಹೇಳಿದ್ದರು. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ನಿರ್ದೇಶನ ಮಾಡಲು ಸುದೀಪ್ ಸಜ್ಜಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.