ಮುಂಬೈ: ‘ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧಿತನಾಗಿರುವ ಬಾಲಿವುಡ್ ನಟ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ತನ್ನ ತಂದೆಯಿಂದ ಮನಿ ಆರ್ಡರ್ ಮೂಲಕ ₹ 4,500 ಪಡೆದಿದ್ದಾರೆ’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಮುಂಬೈನ ಕ್ರೂಸ್ ಹಡಗೊಂದರಿಂದ ವಶಪಡಿಸಿಕೊಂಡ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಆರ್ಯನ್, ಇಲ್ಲಿನ ಆರ್ಥರ್ ರಸ್ತೆಯ ಜೈಲಿನಲ್ಲಿದ್ದು ಅವರು ಜೈಲಿನ ಒಳಗಿನಿಂದಲೇ ವಿಡಿಯೊ ಕಾಲ್ ಮೂಲಕ ತಮ್ಮ ತಂದೆ–ತಾಯಿಯೊಂದಿಗೆ ಮಾತನಾಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ವಿಶೇಷ ನ್ಯಾಯಾಲಯವು ಆರ್ಯನ್ ಮತ್ತು ಇತರ ಇಬ್ಬರ ಜಾಮೀನು ಅರ್ಜಿಯ ಆದೇಶವನ್ನು ಅ. 20ಕ್ಕೆ ಮುಂದೂಡಿದ್ದು, ಅಲ್ಲಿಯ ತನಕ ಆರ್ಯನ್ ಜೈಲಿನಲ್ಲಿರಬೇಕಾಗುತ್ತದೆ. ಕೋವಿಡ್–19 ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಮಗನ ಭೇಟಿಗೆ ಅವರ ಪೋಷಕರಿಗೆ ಅನುಮತಿ ನೀಡಿಲ್ಲ. ಹಾಗಾಗಿ, ವಾರಕ್ಕೆ ಎರಡು ಬಾರಿ ವಿಡಿಯೊ ಕಾಲ್ ಮೂಲಕ ಪೋಷಕರೊಂದಿಗೆ ಮಾತನಾಡಲು ಅನುಮತಿ ನೀಡಲಾಗಿದೆ’ ಎಂದು ಜೈಲಿನ ಅಧಿಕಾರಿಯಬ್ಬರು ಮಾಹಿತಿ ನೀಡಿದ್ದಾರೆ.
ಜೈಲಿನ ಊಟ: ’ಜೈಲಿನಲ್ಲಿ ತಯಾರಿಸಲಾಗುತ್ತಿರುವ ಆಹಾರವನ್ನೇ ಆರ್ಯನ್ ಅವರಿಗೆ ನೀಡಲಾಗುತ್ತಿದೆ. ಹೊರಗಿನ ಊಟಕ್ಕೆ ಅನುಮತಿ ನೀಡಿಲ್ಲ. ಇಲ್ಲಿ ನೀಡಲಾಗುತ್ತಿರುವ ಆಹಾರವು ಗುಣಮಟ್ಟದ್ದಾಗಿದ್ದು, ಅಗತ್ಯವಿರುವ ಮಾನದಂಡಗಳ ಪ್ರಕಾರವೇ ನೀಡಲಾಗುತ್ತಿದೆ. ಜೈಲಿನ ಆವರಣದಲ್ಲಿ ಕ್ಯಾಂಟೀನ್ ಸೌಲಭ್ಯವಿದ್ದು, ಅಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಶಾರುಕ್ ಖಾನ್ ಮನಿ ಆರ್ಡರ್ ಮೂಲಕ ಮಗನಿಗೆ ₹ 4,500 ಕಳಿಸಿದ್ದು, ಆರ್ಯನ್ ಸೋಮವಾರ ಅದನ್ನು ಪಡೆದಿದ್ದಾರೆ’ ಎಂದರು.
‘ಜೈಲಿನಲ್ಲಿರುವ ವಿಚಾರಾಣಾಧೀನರಿಗೆ ನೀಡುವ ಗುರುತಿನ ಸಂಖ್ಯೆಯನ್ನು ಆರ್ಯನ್ ಅವರಿಗೂ ನೀಡಲಾಗಿದೆ’ ಎಂದೂ ಅವರು ತಿಳಿಸಿದರು.
ಪ್ರಕರಣದಲ್ಲಿ ಬಂಧಿತರಾದ ಆರ್ಯನ್ ಮತ್ತು ಇತರ ಐವರ ಕ್ವಾಂಟೈನ್ ಅವಧಿ ಮುಗಿದ ಕಾರಣ, ಇಲ್ಲಿನ ಆರ್ಥರ್ ರಸ್ತೆ ಜೈಲಿನ ಸಾಮಾನ್ಯ ಬ್ಯಾರಕ್‌ಗೆ ಅವರೆಲ್ಲರನ್ನೂ ವರ್ಗಾಯಿಸಲಾಗಿದೆ’ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
‘ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧಿತನಾಗಿರುವ ಬಾಲಿವುಡ್ ನಟ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ತನ್ನ ತಂದೆಯಿಂದ ಮನಿ ಆರ್ಡರ್ ಮೂಲಕ ₹ 4,500 ಪಡೆದಿದ್ದಾರೆ’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.