ಹೈದರಾಬಾದ್: 'ಟಾಲಿವುಡ್ ಜಕ್ಕಣ್ಣ' ಎಂಬ ಬಿರುದು ಹೊಂದಿರುವ ದಕ್ಷಿಣ ಭಾರತ ಸಿನಿರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರಿಗೆ ಇಂದು (ಅ.10) 48 ನೇ ಜನ್ಮದಿನದ ಸಂಭ್ರಮ.
ತಮ್ಮ 20 ವರ್ಷದ ಸಿನಿ ಪಯಣದಲ್ಲಿ ಅವರು ನಿರ್ದೇಶನ ಮಾಡಿದ್ದು ಕೇವಲ 11 ಚಿತ್ರಗಳಾದರೂ ಅವರು ಭಾರತೀಯ ಚಿತ್ರರಂಗದ ನಂಬರ್ 1 ಡೈರೆಕ್ಟರ್ ಎಂಬ ಹಿರಿಮೆಯನ್ನು ಉಳಿಸಿಕೊಂಡಿದ್ದಾರೆ.
ಅವರ ಜನ್ಮದಿನಕ್ಕೆ ಟಾಲಿವುಡ್, ಬಾಲಿವುಡ್ ಸೇರಿದಂತೆ ತಮಿಳು, ಕನ್ನಡ ಹಾಗೂ ಮಲೆಯಾಳಂ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ನಟರಾದ ಮಹೇಶ್ ಬಾಬು, ರಾಮ್ ಚರಣ್, ಅಜಯ್ ದೇವಗನ್, ಜೂನಿಯರ್ ಎನ್‌ಟಿಆರ್, ಪ್ರಭಾಸ್, ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಸೇರಿದಂತೆ ಅನೇಕರು ಜಕ್ಕಣ್ಣನಿಗೆ ಶುಭಾಶಯ ಕೋರಿದ್ದಾರೆ.
ಅಕ್ಟೋಬರ್ 10, 1973 ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿಯ ಅಮರೇಶ್ವರ ಕ್ಯಾಂಪ್‌ನಲ್ಲಿ ಜನಿಸಿದ ಕೋಡೂರಿ ಶ್ರೀಶೈಲ ಶ್ರೀ ರಾಜಮೌಳಿ ಅವರು ಹುಟ್ಟಿದ್ದು ಕರ್ನಾಟಕದಲ್ಲಾದರೂ ಅವರು ಮೂಲತಃ ಆಂಧ್ರಪ್ರದೇಶದ ಪೂರ್ವ ಗೋಧಾವರಿ ಜಿಲ್ಲೆಯ ಕೋವೂರಿನವರು.
ಸಿನಿಮಾ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದಿರುವ ರಾಜಮೌಳಿ ಖ್ಯಾತ ಕಥೆಗಾರ ಕೆ.ವಿ ವಿಜಯೇಂದ್ರ ಪ್ರಸಾದ್ ಅವರ ಮಗ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ರಾಜಮೌಳಿ ಅವರ ಸಹೋದರ ಸಂಬಂಧಿ. ವಸ್ತ್ರ ವಿನ್ಯಾಸಕಿ ರಮಾ ರಾಜಮೌಳಿ ಅವರನ್ನು ಎಸ್‌ಎಸ್ ರಾಜಮೌಳಿ 2001 ರಲ್ಲಿ ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು.
2001 ರಲ್ಲಿ ಜೂನಿಯರ್ ಎನ್‌ಟಿಆರ್ ಅಭಿನಯದ ‘ಸ್ಟುಡೆಂಟ್ ನಂಬರ್ 1’ ಸಿನಿಮಾ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಇಳಿದ ರಾಜಮೌಳಿ ‘ಸಿಂಹಾದ್ರಿ’, ‘ಸೈ’, ‘ಛತ್ರಪತಿ’, ‘ವಿಕ್ರಮಾರ್ಕುಡು’, ‘ಯಮದೋಂಗಾ’, ‘ಮಗಧೀರ’, ‘ಮರ್ಯಾದಾ ರಾಮಣ್ಣ’, ‘ಈಗಾ’, ‘ಬಾಹುಬಲಿ’ ಎಂಬ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ಇದೀಗ ಅವರ ‘ಆರ್‌ಆರ್‌ಆರ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
‘ಈಗಾ’ ಸಿನಿಮಾಕ್ಕೆ ಮಾತ್ರ ರಾಜಮೌಳಿ ಅವರು ಕಥೆ ಬರೆದಿದ್ದು ಬಿಟ್ಟರೆ, ಉಳಿದಂತೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಕೊಡುವ ಕಥೆಗಳನ್ನು ಅದ್ಭುತವಾಗಿ ಸಿನಿಮಾ ಮಾಡಿ ಒಬ್ಬ ಅದ್ಭುತ ಫಿಲ್ಮ ಮೇಕರ್ ಎನಿಸಿಕೊಂಡಿದ್ದಾರೆ. ರಾಜಮೌಳಿ ಅವರು ಮಹಾಭಾರತದ ಬಗ್ಗೆ ದೊಡ್ಡ ಬಜೆಟ್‌ನ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೈದರಾಬಾದ್: ಟಾಲಿವುಡ್ ಜಕ್ಕಣ್ಣ ಎಂಬ ಬಿರುದು ಹೊಂದಿರುವ ದಕ್ಷಿಣ ಭಾರತ ಸಿನಿರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರಿಗೆ ಇಂದು (ಅ.10) 48 ನೇ ಜನ್ಮದಿನದ ಸಂಭ್ರಮ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.