ADVERTISEMENT

ನಾನು ಲೇಡೀಸ್‌ ಕಣ್ರೀ: ಸಲಿಂಗಿಗಳ ಪ್ರೇಮದ ಜಗತ್ತಿನೊಳಗೊಂದು ಸುತ್ತು

ಮಂಜುಶ್ರೀ ಎಂ.ಕಡಕೋಳ
Published 17 ಅಕ್ಟೋಬರ್ 2021, 2:22 IST
Last Updated 17 ಅಕ್ಟೋಬರ್ 2021, 2:22 IST
ಶೈಲಜಾ ಪಡಿಂದಲ
ಶೈಲಜಾ ಪಡಿಂದಲ   

‘ನಾನು ಅವನಲ್ಲ ಅವಳು’, ‘ಸೂಪರ್ ಡಿಲಕ್ಸ್’ ನಂಥ ಸಿನಿಮಾಗಳ ಮೂಲಕ ಎಲ್‌ಜಿಬಿಟಿಕ್ಯು ಸಮುದಾಯದ ಕುರಿತು ಭಿನ್ನ ನೋಟ ಹರಿಸಿರುವ ದಕ್ಷಿಣ ಭಾರತೀಯ ಚಿತ್ರರಂಗ ಬದಲಾದ ಸಿನಿಮಾ ಮೌಲ್ಯಗಳಿಗೆ ತನ್ನನ್ನು ಒಗ್ಗಿಸಿಕೊಳ್ಳುತ್ತಿದೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿರುವ ನಾವು ಇಂಥ ಸಮುದಾಯವನ್ನು ನೋಡುವ ನೋಟದಲ್ಲೂ ಪ್ರಗತಿ ಸಾಧಿಸಿದ್ದೇವೆಯೇ ಎನ್ನುವುದು ನಿರ್ದೇಶಕಿ ಶೈಲಜಾ ಪಡಿಂದಲ ಅವರ ಪ್ರಶ್ನೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರ ಇದಕ್ಕೆ ಉತ್ತರವೆಂಬಂತಿದೆ...

***

ಸೃಷ್ಟಿಯಲ್ಲಿ ಹೆಣ್ಣು– ಗಂಡಿನ ನಡುವೆಯಷ್ಟೇ ಪ್ರೇಮದ ಕೊಡುಕೊಳ್ಳುವಿಕೆ ನಡೆಯೋದು ಅಂದುಕೊಂಡವರೇ ಹೆಚ್ಚು. ಹೆಣ್ಣಿನಲ್ಲಿ ಹೆಣ್ಣು, ಗಂಡಿನಲ್ಲಿ ಗಂಡು ಪರಸ್ಪರ ಪ್ರೇಮದ ರುಚಿ ಕಂಡುಕೊಳ್ಳುವವರು ವಿರಳ. ಸೃಷ್ಟಿಯೇ ರೂಪಿಸಿರುವ ಇಂಥ ಪ್ರೇಮದ ಹಿಂದಿರುವುದು ಜೈವಿಕ ಕರಾಮತ್ತೋ ಅಥವಾ ಪ್ರಕೃತಿಯೋ ನಿಗೂಢತೆಯೋ ಎಂಬುದನ್ನು ಅರಿತವರೂ ವಿರಳ. ಅರ್ಧನಾರೀಶ್ವರನ ಪರಿಕಲ್ಪನೆಯನ್ನು ಒಪ್ಪುವ ಸಮಾಜವು ಸಲಿಂಗಿಗಳ ಪ್ರೇಮವನ್ನು ನಿರಾಕರಿಸಲು ಉತ್ಸಾಹ ತೋರುತ್ತದೆ.

ADVERTISEMENT

‘ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿಯೂ ಇಂಥ ಪ್ರೇಮದ ಹೂಗಳು ಅರಳುವುದನ್ನು ತಡೆಯುವುದು ಅಸಾಧ್ಯ’ ಎನ್ನುತ್ತಾರೆ ಕನ್ನಡದಲ್ಲಿ ಲೆಸ್ಬಿಯನ್‌ಗಳಿಗೆ (ಸ್ತ್ರೀ ಸಲಿಂಗಕಾಮ) ಸಂಬಂಧಿಸಿದಂತೆ ಪೂರ್ಣಪ್ರಮಾಣದಲ್ಲಿ ಪ್ರಥಮ ಚಿತ್ರ ನಿರ್ದೇಶಿಸಿರುವ ನಿರ್ದೇಶಕಿ ಶೈಲಜಾ ಪಡಿಂದಲ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶೈಲಜಾ ಅವರು ಪೇಂಟಿಂಗ್ ಮತ್ತು ಶಿಲ್ಪಕಲೆಯ ಪದವೀಧರೆ. ಚಿತ್ರಕಲಾ ಪರಿಷತ್ತಿನಲ್ಲಿ ಓದುವಾಗಲೇ ಸಿನಿಮಾದ ಮೋಹ. ಅದು ಚೆನ್ನೈನ ಎಲ್.ವಿ. ಪ್ರಸಾದ್ ಸಿನಿಮಾ ಮತ್ತು ಟಿ.ವಿ ಅಕಾಡೆಮಿಯಲ್ಲಿ ಸಿನಿಮಾಟೋಗ್ರಫಿ (ಕ್ಯಾಮೆರಾ) ವಿಷಯದಲ್ಲಿ ಸ್ನಾತಕೋತ್ತರ ಪದವಿ ತನಕ ಕರೆದೊಯ್ಯಿತು.

ಕೆಲ ಕಾಲ ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರ ಪುತ್ರ ಬಾಲಕೈಲಾಸಂ ಅವರ ‘ಪುದಿಯತಲೈಮರ್’ ಪತ್ರಿಕೆಯಲ್ಲಿ ಕ್ಯಾಮೆರಾವುಮನ್ ಆಗಿ ಕೆಲಸ ಮಾಡಿದ ಅನುಭವ. ಸುದ್ದಿಮಾಧ್ಯಮದಲ್ಲಿ ಹೇಳಲಾಗದ್ದನ್ನು ಸಿನಿಮಾದಲ್ಲಿ ಹೇಳುವ ತುಡಿತ ಹೆಚ್ಚಾದಾಗ ಅವರ ಮನಸು ಹೊರಳಿದ್ದು ನಿರ್ದೇಶನದತ್ತ. ಅದರಲ್ಲೂ ಗ್ಲ್ಯಾಮರ್ ವ್ಯಾಕರಣ ಮೀರಿ ನಿಜಜೀವನದ ಚಿತ್ರಕಥೆ ಮಾಡಬೇಕೆಂಬ ಆಸೆ ಮೊಳೆತಾಗ ಒಡಮೂಡಿದ್ದು ‘ಮೆಮೊರೀಸ್ ಆಫ್ ಮಷೀನ್’ ಚಿತ್ರಕಥೆ. ಸ್ಕ್ರಿಪ್ಟ್ ತಯಾರಾಗಿ ಎರಡು ವರ್ಷದ ನಂತರ ಅದು ಕಿರುಚಿತ್ರವಾಗಿ ಬಿಡುಗಡೆ ಕಂಡಿತು. ನಂತರ ಅವರನ್ನು ಕಾಡಿದ್ದು ಲೆಸ್ಬಿಯನ್‌ಗಳ ಪ್ರೇಮಕಥೆ. ಈಚೆಗಷ್ಟೇ ‘ತಸ್ವೀರ್’ ದಕ್ಷಿಣ ಏಷ್ಯಾ ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದಿರುವ ‘ನಾನು ಲೇಡೀಸ್’ ಸಿನಿಮಾ ಕನ್ನಡದಲ್ಲಿ ಲೆಸ್ಬಿಯನ್‌ಗಳಿಗೆ ಸಂಬಂಧಿಸಿದ ಮೊದಲ ಸಿನಿಮಾ. ‘ಕ್ವೀರ್’ ವುಮನ್ (ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಪ್ರೀತಿ ಬಯಸುವ) ಪಾತ್ರಗಳ ನಡುವಣದ ಪ್ರೇಮಕಥನವಿದು.

‘ಸಮಾಜದ ಸಿದ್ಧಮಾದರಿಯ ಚೌಕಟ್ಟಿನಲ್ಲಿ ಇರದೇ ಇರುವಂಥ ಮನಃಸ್ಥಿತಿಯವರನ್ನು ಕ್ವೀರ್ ಅಂತ ಕರೆಯಬಹುದು. ಅಂದರೆ ಹೆಣ್ಣೆಂದರೆ ಸೀರೆ ಉಡಬೇಕು, ಕುಂಕುಮ ಇಟ್ಟುಕೊಳ್ಳಬೇಕು, ಜಡೆ ಹಾಕಿಕೊಳ್ಳಬೇಕು... ಇಂಥ ಸಂಗತಿಗಳನ್ನು ಬಿಟ್ಟು ತನಗಿಷ್ಟ ಬಂದಹಾಗೆ ಇರುವ ಹೆಣ್ಣು ಮತ್ತೊಬ್ಬ ಹೆಣ್ಣಿನೊಂದಿಗೆ ಸಾಂಗತ್ಯ ಬಯಸುವ ಕಥೆಯನ್ನು ‘ನಾನು ಲೇಡೀಸ್‌’ನಲ್ಲಿ ತಂದಿದ್ದೇನೆ ಎನ್ನುತ್ತಾರೆ ಶೈಲಜಾ ಪಡಿಂದಲ. 

‘ಹುಡುಗನ ಚಹರೆಯಲ್ಲಿರುವ ಹೆಣ್ಣೊಬ್ಬಳು ತಾನೂ ಹೆಣ್ಣು ಅನ್ನುವುದನ್ನು ಬಿಡಿಸಿ ಹೇಳಿದರೂ ಒಪ್ಪಿಕೊಳ್ಳದ ಸಮಾಜ ಆಕೆಯನ್ನು ಅಪಾರ್ಥ ಮಾಡಿಕೊಂಡು ಭಿನ್ನವಾಗಿ ನೋಡುವಂಥ ಸನ್ನಿವೇಶಗಳು ಸಿನಿಮಾದಲ್ಲಿವೆ. ಮೇಲ್ನೋಟಕ್ಕೆ ತಮಾಷೆಯಾಗಿ ಸಿನಿಮಾದಲ್ಲಿ ತೋರಿಸಿದ್ದರೂ ಆಂತರ್ಯದಲ್ಲಿ ಅವಳೊಳಗಿನ ತಳಮಳಗಳೇನು ಎಂಬುದನ್ನು ಚಿತ್ರದಲ್ಲಿ ಮನಗಾಣಿಸಲು ಯತ್ನಿಸಿದ್ದೇನೆ’ ಎನ್ನುವ ಶೈಲಜಾ ಅವರ ಮನದಲ್ಲಿ ಈಗಾಗಲೇ ಮತ್ತೆರಡು ಚಿತ್ರಗಳ ಕಥೆಗಳು ಹರಳುಗಟ್ಟತೊಡಗಿವೆ.

‘ಕ್ವೀರ್, ಎಲ್‌ಜಿಬಿಟಿಕ್ಯು ಸಮುದಾಯದ ಸಂವೇದನೆಗಳನ್ನು ಈ ಹಿಂದೆ ಭಾರತೀಯ ಸಿನಿಮಾಗಳಲ್ಲಿ ತಪ್ಪಾಗಿ ಅರ್ಥೈಸಿರುವುದೇ ಹೆಚ್ಚು. ‘ಫೈರ್’ ಸಿನಿಮಾ ತೆರೆಗೆ ಬಂದಾಗ ಈ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿತ್ತು. ಕಾಲಾಂತರದಲ್ಲಿ ಸಿನಿಮಾದ ಸಾಂಸ್ಕೃತಿಕ ಮೌಲ್ಯಗಳು ಬದಲಾದಂತೆ ಈ ಸಮುದಾಯದ ನೋಡುವ ಬಗೆಯಲ್ಲೂ ಬದಲಾವಣೆ ಆಗಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ರಂಗ ಇಂಥ ವಿಷಯಗಳನ್ನು ‘ನಾನು ಅವನಲ್ಲ ಅವಳು’, ‘ಸೂಪರ್ ಡೀಲಕ್ಸ್‌’ನಂಥ ಸಿನಿಮಾಗಳಲ್ಲಿ ಮನಗಾಣಿಸಿರುವ ಬಗೆ ಅನನ್ಯ ಎನ್ನುವ ಶೈಲಜಾ ಅವರಿಗೆ ಎಲ್‌ಬಿಟಿಕ್ಯು ಸಮುದಾಯದ ನೈಜ ಸಂವೇದನೆಗಳನ್ನು ರಿಯಲಿಸ್ಟಿಕ್ ಶೈಲಿಯಲ್ಲಿ ಹೇಳಬೇಕೆಂಬ ತುಡಿತವಿದೆ.

‘ಕ್ವೀರ್ ಅಂದಾಕ್ಷಣ ತೃತೀಯಲಿಂಗಿಗಳು ಅಂತ ಪರಿಭಾವಿಸುವವರೇ ಹೆಚ್ಚು. ಆದರೆ, ಅದು ಹಾಗಲ್ಲ ಎಲ್‌ಜಿಬಿಟಿಕ್ಯು ಸಮುದಾಯದ ಹರವು ಬಹು ವಿಸ್ತಾರವಾದದ್ದು. ಒಂದೊಂದು ಸಂವೇದನೆಗೂ ಪ್ರತ್ಯೇಕ ಭಾವಲೋಕವಿದೆ. ಅದನ್ನು ಸಿನಿಮಾದಲ್ಲಿ ಅನಾವರಣಗೊಳಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕನ್ನಡದಲ್ಲಿ ‘ನಾನು ಲೇಡೀಸ್‌’ ಮೂಲಕ ಪ್ರಯತ್ನಿಸಿದ್ದೇನೆ. ದಕ್ಷಿಣ ಭಾರತೀಯ ಸಿನಿರಂಗದಲ್ಲಿ ಇಂಥ ಪ್ರಯೋಗಗಳು ಆಗುತ್ತಿರುವುದು ನನ್ನಂಥವರಿಗೆ ಸ್ಫೂರ್ತಿ. ‘ನಾನು ಲೇಡಿಸ್’ ಬರೀ ರೊಮಾನ್ಸ್, ಲವ್ ಅಲ್ಲ. ಮಧ್ಯಮವರ್ಗದ ಕುಟುಂಬವೊಂದರ ಸಾಂಸ್ಕೃತಿಕ ಮೌಲ್ಯಗಳ ನಡುವೆ ಕ್ವೀರ್ ಜೋಡಿ ಎದುರಿಸುವ ತಳಮಳಗಳೇನು ಅನ್ನುವಂಥದ್ದು ಸಿನಿಮಾದ ಹೂರಣ. ಈಗಾಗಲೇ ಸಿನಿಮಾಕ್ಕೆ ‘ತಸ್ವೀರ್‌’ ಚಿತ್ರೋತ್ಸವದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿರುವುದು ಸಂತಸ ತಂದಿದೆ’ ಎಂದು ಹರ್ಷಿಸುತ್ತಾರೆ ಅವರು.

‘ಇಂಥದ್ದೊಂದು ಸಿನಿಮಾವನ್ನು ಕನ್ನಡ ಚಿತ್ರರಂಗ ಹೇಗೆ ಸ್ವೀಕರಿಸುತ್ತದೆಯೋ ಗೊತ್ತಿಲ್ಲ. ತಂತ್ರಜ್ಞಾನದೊಂದಿಗೆ ನಮ್ಮ ಮೌಲ್ಯಗಳೂ ಪ್ರಗತಿಯೆಡೆಗೆ ಸಾಗುತ್ತಿವೆ. ಹಾಗಾಗಿ, ಇಂಥ ವಿಷಯದ ಸಿನಿಮಾವನ್ನು ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಆರೋಗ್ಯಕರವಾಗಿ ಸ್ವೀಕರಿಸಬಹುದು’ ಅನ್ನುವ ನಂಬಿಕೆ ಅವರದ್ದು.

‘ಭಾರತೀಯ ಸಂಜಾತೆ ಲಂಡನ್‌ನಲ್ಲಿ ನೆಲೆಸಿರುವ ಹರಿಣಿ ದಡ್ಡಲ್ ಸಿನಿಮಾದ ನಿರ್ಮಾಪಕಿ. ಸ್ತ್ರೀವಾದದಲ್ಲಿ ನಂಬಿಕೆಯಿರುವ ಅವರಿಂದಾಗಿ ಚಿತ್ರ ತೆರೆಗೆ ಬರಲು ಸಾಧ್ಯವಾಯಿತು. ಸಿನಿಮಾದಲ್ಲಿ ನನ್ನೊಂದಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ರಂಗ ಕಲಾವಿದೆ ಮೇದಿನಿ ಕೆಳಮನೆ ಅವರ ಸಹಕಾರ ಮಹತ್ವದ್ದು. ಅಂತೆಯೇ ಕ್ಯಾಮೆರಾ ವುಮನ್‌ಗಳಾದ ಚೆಹಕ್ ಬಿಲ್ಗಿ ಮತ್ತು ಕೋಮಲ್ ಕಿಯಾನಿ ಹಾಗೂ ತಂಡದ ಇತರ ತಂತ್ರಜ್ಞರು ಸಿನಿಮಾವನ್ನು ಚೆಂದಗಾಣಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ’ ಎಂದು ಮಾತಿಗೆ ವಿರಾಮ ಹಾಕಿದರು ಶೈಲಜಾ.

ಸಿನಿಮಾ ಟ್ರೇಲರ್ ವೀಕ್ಷಿಸಲು...

ಸಾರಾಂಶ

‘ನಾನು ಅವನಲ್ಲ ಅವಳು’, ‘ಸೂಪರ್ ಡಿಲಕ್ಸ್’ ನಂಥ ಸಿನಿಮಾಗಳ ಮೂಲಕ ಎಲ್‌ಜಿಬಿಟಿಕ್ಯು ಸಮುದಾಯದ ಕುರಿತು ಭಿನ್ನ ನೋಟ ಹರಿಸಿರುವ ದಕ್ಷಿಣ ಭಾರತೀಯ ಚಿತ್ರರಂಗ ಬದಲಾದ ಸಿನಿಮಾ ಮೌಲ್ಯಗಳಿಗೆ ತನ್ನನ್ನು ಒಗ್ಗಿಸಿಕೊಳ್ಳುತ್ತಿದೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿರುವ ನಾವು ಇಂಥ ಸಮುದಾಯವನ್ನು ನೋಡುವ ನೋಟದಲ್ಲೂ ಪ್ರಗತಿ ಸಾಧಿಸಿದ್ದೇವೆಯೇ ಎನ್ನುವುದು ನಿರ್ದೇಶಕಿ ಶೈಲಜಾ ಪಡಿಂದಲ ಅವರ ಪ್ರಶ್ನೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರ ಇದಕ್ಕೆ ಉತ್ತರವೆಂಬಂತಿದೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.