ಚೆನ್ನೈ: ತಮಿಳುನಾಡಿನ 9 ಜಿಲ್ಲೆಗಳ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ತಮಿಳು ನಟ ವಿಜಯ್ ಅವರ 100ಕ್ಕೂ ಹೆಚ್ಚು ಅಭಿಮಾನಿಗಳು ಗೆಲುವು ಸಾಧಿಸಿದ್ದಾರೆ.
ಈ ಬೆಳವಣಿಗೆಯು ತಮಿಳುನಾಡಿನಲ್ಲಿ ನಟ ವಿಜಯ್ ಅವರ ರಾಜಕೀಯ ಜೀವನದ ಕುರಿತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ತಳಪತಿ ವಿಜಯ್ ಮಕ್ಕಳ್ ಇಯಕ್ಕಂನ (ಟಿವಿಎಂಐ) 169 ಸದಸ್ಯರು ಚುನಾವಣೆಯಲ್ಲಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಅ. 6ರಿಂದ 9ರವರೆಗೆ ನಡೆದ ವಿವಿಧ ಹಂತದ ಚುನಾವಣೆಯಲ್ಲಿ 115 ಮಂದಿ ಜಯ ಸಾಧಿಸಿದ್ದು, ಅದರಲ್ಲಿ 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಅವರ ನಾಮ್ ತಮಿಜರ್ ಕಚ್ಚಿ (ಎನ್‌ಟಿಕೆ) ಹಾಗೂ ಮಕ್ಕಳ್ ನೀದಿ ಮೈಯಮ್ (ಎಂಎನ್ಎಂ)ನಂಥ ಪಕ್ಷಗಳು ಈ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿಲ್ಲ. ಈ ಹಿನ್ನೆಲೆಯಲ್ಲಿ ವಿಜಯ್ ಅಭಿಮಾನಿಗಳ ಗೆಲುವು ಗಮನ ಸೆಳೆದಿದೆ. ಎನ್‌ಟಿಕೆ 2016ರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಎಂಎನ್ಎಂ 2019ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದೆ.
ವಿಜಯ್ ಅವರ ಅಭಿಮಾನಿಗಳು ಮುಖ್ಯವಾಗಿ ಗ್ರಾಮ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ವಿಜಯ್ ಮಕ್ಕಳ ಇಯಕ್ಕಂನ ಒಬ್ಬ ಸದಸ್ಯ ವಿಲ್ಲುಪುರಂ ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಭಿಮಾನಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರೂ, ನಟ ವಿಜಯ್ ತಮ್ಮ ಚಿತ್ರವನ್ನು ಮತ್ತು ಟಿವಿಎಂಐ ಧ್ವಜವನ್ನು ಪ್ರಚಾರದ ಸಮಯದಲ್ಲಿ ಬಳಸಲು ಅನುಮತಿ ನೀಡಿದ್ದರು.
‘ಈ ಗೆಲುವು ನಮ್ಮ ನಾಯಕನದ್ದು (ವಿಜಯ್). ನಾವು ಅವರ ಫೋಟೊಗಳೊಂದಿಗೆ ಜನರ ಬಳಿಗೆ ಹೋದೆವು. ಜನರು ನಮ್ಮ ನಾಯಕನಿಗೆ ಮತ ಹಾಕಿದ್ದಾರೆ ಎಂಬುದನ್ನು ನಾವು ದೃಢವಾಗಿ ನಂಬುತ್ತೇವೆ. ವಿಜಯ್ ಅವರ ರಾಜಕೀಯ ಪ್ರವೇಶದ ಕುರಿತು ಅವರೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ’ ಎಂದು ಟಿವಿಎಂಐನ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ನಟ ವಿಜಯ್ ರಾಜಕೀಯ ಪ್ರವೇಶಿಸಿ, 2021ರ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ ವಿಜಯ್ ಅಭಿಮಾನಿಗಳ ಕೋರಿಕೆಗೆ ಕಿವಿಗೊಟ್ಟಿರಲಿಲ್ಲ.
‘ಮಗನೊಂದಿಗೆ ಭಿನ್ನಾಭಿಪ್ರಾಯ ಇರುವ ಕಾರಣ ‘ವಿಜಯ್ ಮಕ್ಕಳ್ ಇಯಕ್ಕಂ’ (ವಿಎಂಐ) ಪಕ್ಷವನ್ನು ವಿಸರ್ಜಿಸುತ್ತಿರುವುದಾಗಿ ವಿಜಯ್ ಅವರ ತಂದೆ, ನಿರ್ಮಾಪಕ ಎಸ್.ಎ. ಚಂದ್ರಶೇಖರ್ ಸ್ಥಳೀಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಅಲ್ಲದೇ ಈ ಕುರಿತು ಸಾರ್ವಜನಿಕವಾಗಿಯೂ ಘೋಷಿಸಿದ್ದರು.
ಸದ್ಯಕ್ಕೆ ತಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದ ಕಾರಣ, ವಿಎಂಐ ಪಕ್ಷವನ್ನು ಚುನಾವಣಾ ಆಯೋಗಕ್ಕೆ ನೋಂದಾಯಿಸುವುದು ಬೇಡ ಎಂದು ವಿಜಯ್, ತಂದೆಯನ್ನು ಕೇಳಿಕೊಂಡಿದ್ದರು ಎನ್ನಲಾಗಿದೆ.
ಈ ಘಟನೆಗಳು ವಿಜಯ್ ಮತ್ತು ಚಂದ್ರಶೇಖರ್ ಅವರ ರಾಜಕೀಯ ಪ್ರವೇಶದ ಭಿನ್ನಾಭಿಪ್ರಾಯಗಳನ್ನು ಮುನ್ನೆಲೆಗೆ ತಂದಿದ್ದವು.
ಚೆನ್ನೈ: ತಮಿಳುನಾಡಿನ 9 ಜಿಲ್ಲೆಗಳ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ತಮಿಳು ನಟ ವಿಜಯ್ ಅವರ 100ಕ್ಕೂ ಹೆಚ್ಚು ಅಭಿಮಾನಿಗಳು ಗೆಲುವು ಸಾಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.