ADVERTISEMENT

ಯಾದಗಿರಿ– ಅಧಿಕ ತೇವಾಂಶ: ಹಿಂಗಾರು ಬಿತ್ತನೆಗೆ ಹಿನ್ನಡೆ

ಹಿಂಗಾರು ಹಂಗಾಮಿಗೆ 99,410 ಹೆಕ್ಟೇರ್ ಬಿತ್ತನೆ, 22,109 ಬಿತ್ತನೆ

ಬಿ.ಜಿ.ಪ್ರವೀಣಕುಮಾರ
Published 13 ಅಕ್ಟೋಬರ್ 2021, 3:37 IST
Last Updated 13 ಅಕ್ಟೋಬರ್ 2021, 3:37 IST
ಯಾದಗಿರಿ ಸಮೀಪದ ಗುರುಣಸಗಿ ಗ್ರಾಮದಲ್ಲಿ ಹಿಂಗಾರು ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ಜಮೀನುಗಳಲ್ಲಿ ಅಧಿಕ ಮಳೆಯಿಂದ ನೀರು ನಿಂತಿರುವುದು (ಸಂಗ್ರಹ ಚಿತ್ರ)
ಯಾದಗಿರಿ ಸಮೀಪದ ಗುರುಣಸಗಿ ಗ್ರಾಮದಲ್ಲಿ ಹಿಂಗಾರು ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ಜಮೀನುಗಳಲ್ಲಿ ಅಧಿಕ ಮಳೆಯಿಂದ ನೀರು ನಿಂತಿರುವುದು (ಸಂಗ್ರಹ ಚಿತ್ರ)   

ಯಾದಗಿರಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 99,410 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 22,109 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಜೋಳ, ಕಡಲೆ, ಶೇಂಗಾ ಹಿಂಗಾರು ಹಂಗಾಮಿಗೆ ಪ್ರಮುಖ ಬೆಳೆಗಳಾಗಿವೆ. ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ ಶೇಂಗಾ ಹೆಚ್ಚಿನ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 16 ರೈತ ಸಂಪರ್ಕ ಕೇಂದ್ರಗಳಿದ್ದು, ಅಲ್ಲಿ ಶೇಂಗಾ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ, ಶೇಂಗಾ ಬಿತ್ತನೆ ಬೀಜ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ರೈತರು ಅಲ್ಲಲ್ಲಿ ಪ್ರತಿಭಟನೆ, ಮನವಿ ಸಲ್ಲಿಸಿ ಒತ್ತಾಯಿಸಿರುವ ಘಟನೆಗಳು ನಡೆದಿವೆ. ಅಲ್ಲದೇ ಕೆಲ ಕಡೆ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಪರದಾಟ ನಡೆಸಿರುವುದು ಸಾಮಾನ್ಯವಾಗಿ ಕಂಡು ಬಂದಿದೆ.

ADVERTISEMENT

ಅಧಿಕ ಮಳೆ ಬಿತ್ತನೆಗೆ ಅಡ್ಡಿ:
ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ರಾತ್ರಿ ವೇಳೆ ಸುರಿದ ಅಧಿಕ ಮಳೆಯಿಂದ ಬಿತ್ತನೆಗೆ ಅಡ್ಡಿಯಾಗಿದೆ. ವಡಗೇರಾ ತಾಲ್ಲೂಕಿನಲ್ಲಿ ಜೋಳ ಬಿತ್ತನೆಗೆ ಜಮೀನು ಹದ ಮಾಡಿಕೊಂಡಿದ್ದರೂ ತೇವಾಂಶದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ.

ಇನ್ನೂ ಯಾದಗಿರಿ ತಾಲ್ಲೂಕಿನಲ್ಲಿ ಹೆಸರು ಬಿತ್ತನೆ ಮಾಡಿದ ರೈತರು ನೀರಾವರಿ ಇರುವ ಕಡೆ ಶೇಂಗಾ ಬೀಜ ಬಿತ್ತನೆ ಮಾಡಿದ್ದಾರೆ. ಬಯಲು ಭೂಮಿ ಹೊಂದಿರುವ ರೈತರು ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಕೆಲ ಕಡೆ ಮಳೆ ನೀರು ನಿಂತ ಪರಿಣಾಮ ಬಿತ್ತನೆಗೆ ಅಡ್ಡಿಯಾಗಿದೆ. ಆದರೂ ರೈತರು ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಮಾಡಿ ಇಟ್ಟುಕೊಂಡಿದ್ದಾರೆ.

ಇನ್ನೂ ಹತ್ತಿ ಮತ್ತು ತೊಗರಿ ಬೆಳೆಗಳಿಗೆ ಅಧಿಕ ಮಳೆಯಿಂದ ಅಲ್ಲಲ್ಲಿ ನೀರು ನಿಂತಿರುವ ಪರಿಣಾಮ ಎಲೆಗಳು ತಾಮ್ರ ಬಣ್ಣಕ್ಕೆ ತಿರುಗಿವೆ. ಜಮೀನನ ತಗ್ಗು ಪ್ರದೇಶಗಳಲ್ಲಿ ಕೆಲ ದಿನ ನೀರು ನಿಂತಿದ್ದರಿಂದ ಬೆಳೆಗಳು ಕೆಲ ಕಡೆ ಕೊಳೆತು ಹೋಗಿವೆ.

‘ಗುರುಮಠಕಲ್‌ ಭಾಗದಲ್ಲಿ ಸದ್ಯ ಬಿತ್ತನೆ ಕಾರ್ಯ ನಡೆದಿಲ್ಲ. ಕೋಟಗೇರಾ, ಬೆಳಗೇರ, ಮೋಟನಹಳ್ಳಿ ಭಾಗಗಳಲ್ಲಿ ಶೇಂಗಾ, ಈರುಳ್ಳಿ ಬೆಳೆಯುವುದು ವಾಡಿಕೆ. ನಜರಾಪುರ, ಮಿನಾಸಪುರ, ಚಿಂತನಹಳ್ಳಿ ಈ ಭಾಗದಲ್ಲಿ ಭತ್ತ, ಕಡಲೆ ಬಿತ್ತನೆ ಮಾಡಲಾಗುತ್ತಿದೆ. ಆದರೆ, ಗುರುಮಠಕಲ್ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯಕ್ಕೆ ಇನ್ನೂ ಒಂದುವಾರದ ಕಾಲ ಹಿಡಿಯುತ್ತದೆ’ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಪಾಟೀಲ.

ಬಿತ್ತನೆ ವಿವರ:
ಜಿಲ್ಲೆಯಲ್ಲಿ ಶೇಂಗಾ ಬೀಜ ಬಿತ್ತನೆಗೆ 39,000 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಇದ್ದರೆ, 20,722 ಬಿತ್ತನೆ ಮಾಡಲಾಗಿದೆ. ಕೆಲ ಅಧಿಕ ತೇವಾಂಶದ ಕಾರಣ ಇನ್ನೂ ಬಿತ್ತನೆ ಮಾಡುವ ಸಾಧ್ಯತೆ ಇದೆ.

ಬಿಳಿ ಜೋಳ 31,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಕೇವಲ 683 ಹೆಕ್ಟೇರ್‌ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಕಡಲೆ ಗುರಿ 22,000 ಇದ್ದರೆ, 693 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ಶೇಂಗಾ ಬೀಜ ಮಾತ್ರ ಬೇಗನೆ ಬಿತ್ತನೆ ಮಾಡಲಾಗುತ್ತಿದೆ. ಆದರೆ, ಬಿಳಿ ಜೋಳ ಕೇವಲ ಮಾಗಿಯ ಚಳಿ, ಇಬ್ಬನಿಗೆ ಬೆಳೆಯುತ್ತದೆ. ಹೀಗಾಗಿ ಇದು ತಡವಾದರೂ ಯಾವುದೇ ಸಮಸ್ಯೆ ಇಲ್ಲ.

‘‌ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಅಂದಾಜು 4,000 ಬೆಳೆ ಹಾನಿಯಾಗಿದೆ. ಕೃಷಿ, ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿದ ನಂತರ ಸಂಪೂರ್ಣ ಚಿತ್ರಣ ಬರಲಿದೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ
ಎಸ್‌.ಎಸ್‌.ಅಭಿದ್‌.

****

ಮಳೆ ಕಾರಣ ಭೂಮಿ ಹದ ಮಾಡಲು ಆಗಿಲ್ಲ. ಮತ್ತೆ ಮಳೆ ಬಂದರೆ ರೈತರಿಗೆ ಸಮಸ್ಯೆಯಾಗುತ್ತದೆ. ಕಡಲೆ, ಜೋಳ ಬಿತ್ತನೆ ಮಾಡಲು ಸಿದ್ಧತೆ ಮಾಡಲಾಗಿದೆ
ಚನ್ನಾರೆಡ್ಡಿ ಗುರುಣಸಗಿ, ರೈತ

****

ಅಧಿಕ ಮಳೆ ಕಾರಣ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಮುಂದೂಡಲಾಗಿದೆ. 10–15 ದಿನದಲ್ಲಿ ಬಿತ್ತನೆಯಾಗಲಿದೆ
ಎಸ್‌.ಎಸ್‌.ಅಭಿದ್‌, ಜಂಟಿ ಕೃಷಿ ನಿರ್ದೇಶಕ

ಸಾರಾಂಶ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 99,410 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 22,109 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.