ಯಾದಗಿರಿ: ಬೆಲೆ ಏರಿಕೆ ಮಧ್ಯೆಯೂ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಆಯುಧ ಪೂಜೆ, ಶುಕ್ರವಾರ ದಸರಾ ಹಬ್ಬವನ್ನು ಆಚರಿಸಲು ಸಾರ್ವಜನಿಕರು, ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ವಿವಿಧ ದೇವಸ್ಥಾನ, ಮಠಗಳಲ್ಲಿ ಅಂಭಾ ಭವಾನಿ ಸೇರಿದಂತೆ ದೇವಿಯ ವಿವಿಧ ಅವತಾರಗಳ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ದಿನವೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಜಿಲ್ಲೆಯ ವಿವಿಧ ದೇಗುಲಗಳಲ್ಲಿ ದುರ್ಗಾದೇವಿ, ತುಳಜಾ ಭವಾನಿ, ಮಹಾಲಕ್ಷ್ಮಿ, ಚಾಮುಂಡೇಶ್ವರಿ ದೇವಿಗೆ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ನಗರದ ರೈಲ್ವೆ ಸ್ಟೇಷನ್ ಸಮೀಪದ ಶಿವಾಜಿ ನಗರ ಅಂಭಾ ಭವಾನಿ ಮೂರ್ತಿ, ಭುವನೇಶ್ವರಿ ಬೆಟ್ಟ, ಜಗಜೀವನರಾಂ ನಗರ, ಭವಾನಿ ನಗರ, ಅಂಬೇಡ್ಕರ್ ನಗರ ಬನಶಂಕರಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನವರಾತ್ರಿ ಅಂಗವಾಗಿ ದೇವಿಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
ದಸರಾದ ಪ್ರಮುಖ ಆಕರ್ಷಣೆ
ದಸರಾದಲ್ಲಿ ಪ್ರಮುಖವಾಗಿ ಭವಾನಿ ಮಂದಿರದಲ್ಲಿ ನಡೆಯುವ ದಾಂಡಿಯಾ ನೃತ್ಯ. ದೇವಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 12ರ ತನಕ ನೃತ್ಯ ಮನಮೋಹಕವಾಗಿ ನಡೆಸಲಾಗುತ್ತಿದೆ. ಇದನ್ನು ನೋಡಲು ಜನರು ಕಿಕ್ಕಿರಿದು ತುಂಬಿರುತ್ತಾರೆ. ಅ.14ರಂದು ದಾಂಡಿಯಾ ನೃತ್ಯ ಸಮಾರೋಪವಿದೆ.
ಅಂಭಾ ಭವಾನಿ ದೇವಿಗೆ ಪ್ರತಿ ದಿನ ಎರಡು ಬಾರಿ ಸೀರೆಗೆ ಉಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ದೇವಿಗೆ ಉಡಿಸಿದ ಸೀರೆಯನ್ನು ಬಡ ಮಹಿಳೆಯರಿಗೆ ಹಾಗೂ ವೃದ್ಧರಿಗೆ ದಾನ ಮಾಡಲಾಗುತ್ತಿದೆ.
ನವರಾತ್ರಿ ವೇಳೆ ಅಂಭಾ ಭವಾನಿ ದೇವಿಯನ್ನು ಪ್ರತಿಷ್ಠಾಪಿಸಿ ಖಂಡೇ ಪೂಜೆ ದಿನ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಕೆಲ ಕಡೆ ದೇವಿ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಮೂರ್ತಿ ಹಳೆಯಾದರೆ ಮಾತ್ರ ಅದನ್ನು ಬದಲಾಯಿಸಲಾಗುತ್ತಿದೆ. ಕೆಲ ಕಡೆ ಕಲ್ಲಿನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ನಗರದ ಶಾಸ್ತ್ರಿ ವೃತ್ತದಿಂದ ದೇವಸ್ಥಾನದವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಭಜನೆ ಸೇರಿದಂತೆ ಪೂಜೆಯನ್ನು ಭಕ್ತರು ಆಲಿಸಲು ಶಾಸ್ತ್ರಿ ವೃತ್ತದಲ್ಲಿ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ.
ಮುದನೂರು ಕಂಠಿ ಶ್ರೀಗಳ ತಪೋನುಷ್ಠಾನ
ಕೆಂಭಾವಿ: ಪಟ್ಟಣ ಸಮೀಪದ ಕಂಠಿ ಹನುಮಾನ ದೇವಸ್ಥಾನ ಹಾಗೂ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಶ್ರೀದೇವಿ ಪುರಾಣ, ಶ್ರೀಗಳ ತಪೋನುಷ್ಠಾನ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದ್ದು ಅ. 15 ರಂದು ತಪೋನುಷ್ಠಾನ ಪೂರ್ಣಗೊಳ್ಳಲಿದೆ.
ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ಶ್ರೀದೇವಿ ಪುರಾಣದಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ದಿನ ನಿತ್ಯ ಮಂಗಳಾರತಿ, ಬಿಲ್ವಾರ್ಚನೆ, ಕುಂಕುಮಾರ್ಚನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಅ. 15 ರಂದು ಸ್ವಾಮೀಜಿಗಳ ಮೌನಾನುಷ್ಠಾನ ಹಾಗೂ ದೇವಿ ಪುರಾಣ ಮಂಗಳ ಕಾರ್ಯಕ್ರಮ ನಡೆಯಲಿದೆ.
***
ಹೂವು, ಕುಂಬಳ ಕಾಯಿಗೆ ಹೆಚ್ಚಿದ ಬೇಡಿಕೆ
ಯಾದಗಿರಿ: ನಗರದ ವಿವಿಧ ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲಿ ಆಯುಧ ಪೂಜೆ ಮತ್ತು ನವರಾತ್ರಿ ಉತ್ಸವಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ.
ಹಬ್ಬದ ಅಂಗವಾಗಿ ಹೂವು, ಕುಂಬಳ ಕಾಯಿ, ಬಾಳೆ ದಿಂಡಿಗೆ ಬಹು ಬೇಡಿಕೆ ಬಂದಿದೆ. ಒಂದು ಮೊಳ ಹೂವು ₹100 ದರವಿದೆ. ವಿಶೇಷವಾಗಿ ಚೆಂಡು ಹೂವು ಎಲ್ಲರಿಗೂ ಆಕರ್ಷಣಿಯವಾಗಿದೆ. ಎರಡು, ಮೂರು ಬಣ್ಣಗಳಿರುವ ಹೂಗೆ ಬೇಡಿಕೆ ಜೊತೆಗೆ ದುಬಾರಿ ಬೆಲೆಯೂ ಇದೆ. ತಾಲ್ಲೂಕಿನ ಸುತ್ತಮುತ್ತ ಹಳ್ಳಿಗಳಿಂದ ಬೆಳೆದಿರುವ ಚೆಂಡು ಹೂವು ಅಲ್ಲದೇ ತುಮಕೂರು, ಮಧುಗಿರಿ, ವಿಜಯನಗರ, ಚಿಕ್ಕಬಳ್ಳಾಪುರದಿಂದ ಹೂವು ತರಲಾಗಿದೆ. ಪೂಜೆಗೆ ಬೇಕಾಗಿರುವ ಪೂಜಾ ಸಾಮಾಗ್ರಿ ಬೆಲೆಯೂ ಏರಿಕೆಯಾಗಿದೆ.
ಕುಂಬಳಕಾಯಿ ₹70ರಿಂದ 80, ಬಾಳೆ ದಿಂಡು ₹50ಕ್ಕೆ 2, ಹಸಿ ತೆಂಗಿನಕಾಯಿ ₹40ರಿಂದ 50, ಒಣ ತೆಂಗಿನಕಾಯಿ ₹15ರಿಂದ 20, ಕಬ್ಬಿನ ಜಲ್ಲೆ ₹30ಕ್ಕೆ 2, ಸೇಬು ಹಣ್ಣು ₹20ಗೆ ಒಂದು, ಮೋಸಂಬಿ ₹10 ರಿಂದ 15, ಸಂತೂರು ₹20, ಪೇರಲ ₹40 ಕೆಜಿ, ಬಾಳೆಹಣ್ಣು ಡಜನ್ ₹40–ರಿಂದ 50, ದಾಳಿಂಬೆ ₹20ರಿಂದ 25ಕ್ಕೆ ಒಂದು, ನಿಂಬೆಕಾಯಿ ₹5ಗೆ 2 ದರವಿದೆ. ನಗರ ಸೇರಿದಂತೆ ಗ್ರಾಮಾಂತರ ಭಾಗದಿಂದ ಹಬ್ಬದ ಖರೀದಿಗಾಗಿ ಗ್ರಾಹಕರು ಬಂದಿದ್ದರು. ಕುಂಬಳಕಾಯಿಯನ್ನು ಮಹಾತ್ಮ ಗಾಂಧಿ ವೃತ್ತದ ಬಳಿ ರಾಶಿ ರಾಶಿ ಹಾಕಲಾಗಿತ್ತು. ವೃತ್ತದ ಸುತ್ತಮುತ್ತ ಬಾಳೆದಿಂಡು, ಹಸಿ ತೆಂಗಿನಕಾಯಿ ಇಡಲಾಗಿತ್ತು. ದರ ಹೆಚ್ಚಾಗಿದ್ದರಿಂದ ಗ್ರಾಹಕರು ವ್ಯಾಪಾರಿಗಳ ಹತ್ತಿರ ಚೌಕಾಶಿಗೆ ಇಳಿದಿದ್ದರು.
ಬೆಲೆ ಏರಿಕೆ ಮಧ್ಯೆಯೂ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಆಯುಧ ಪೂಜೆ, ಶುಕ್ರವಾರ ದಸರಾ ಹಬ್ಬವನ್ನು ಆಚರಿಸಲು ಸಾರ್ವಜನಿಕರು, ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.